ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅನಿಲ್ ಅಂಬಾನಿ ದೇಶಬಿಡದಂತೆ 'ಸುಪ್ರೀಂ' ಮೊರೆ ಹೋದ ಎರಿಕ್ಸನ್, ಪಾವತಿಗೆ 60 ದಿನಗಳ ಸಮಯ ಕೇಳಿದ ಆರ್ ಕಾಮ್

550 ಕೋಟಿ ಬಾಕಿ ಹಣ ಉಳಿಸಿಕೊಂಡಿರುವ ಸಾಲಗಾರ ಅನಿಲ್ ಅಂಬಾನಿ ದೇಶಬಿಡದಂತೆ ನೋಡಿಕೊಳ್ಳಬೇಕು ಎಂದು ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸೋನಿ ಎರಿಕ್ಸನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
Published on
ನವದೆಹಲಿ: 550 ಕೋಟಿ ಬಾಕಿ ಹಣ ಉಳಿಸಿಕೊಂಡಿರುವ ಅನಿಲ್ ಅಂಬಾನಿ ದೇಶಬಿಡದಂತೆ ನೋಡಿಕೊಳ್ಳಬೇಕು ಎಂದು ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸೋನಿ ಎರಿಕ್ಸನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನಿಲ್ ಅಂಬಾನಿ ಹೆಸರು ಸಾಕಷ್ಟು ಸುದ್ದಿಗೆ ಗ್ರಾಸವಾಗಿರುವಂತೆಯೇ ಇದೀಗ ಆರ್ ಕಾಮ್ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಅನಿಲ್ ಅಂಬಾನಿ ಹೆಸರು ಸುದ್ದಿಗೆ ಗ್ರಾಸವಾಗಿದೆ. ಈ ಬಾರಿ ಸ್ವೀಡಿಶ್ ಮೂಲದ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸೋನಿ ಎರಿಕ್ಸನ್ ಸಂಸ್ಥೆ ಅನಿಲ್ ಅಂಬಾನಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಅನಿಲ್ ಅಂಬಾನಿ ಒಡೆತನದ ಆರ್ ಕಾಮ್ ಸಂಸ್ಥೆ ಎರಿಕ್ಸನ್ ಸಂಸ್ಥೆಯಿಂದ ತರಂಗಾಂತರ ಹಂಚಿಕೆ, ಮೊಬೈಲ್ ಬಿಡಿಭಾಗಗಳ ಮಾರಾಟ ಸಂಬಂಧ ವಹಿವಾಟು ನಡೆಸಿದ್ದು, ಇದಕ್ಕಾಗಿ ಸುಮಾರು 1147 ಕೋಟಿ ರೂ ಬಾಕಿ ಉಳಿಸಿಕೊಂಡಿತ್ತು. ಈ ಪೈಕಿ ಪ್ರಸ್ತುತ 557 ಕೋಟಿ ರೂ ಬಾಕಿ ಹಣ ಉಳಿದಿದ್ದು, ಅದನ್ನು ನೀಡದ ಹೊರತು ಅವರು ದೇಶ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಎರಿಕ್ಸನ್ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಬಾಕಿ ಹಣ ಪಾವತಿಗಾಗಿ ಆರ್ ಕಾಮ್ ಸಂಸ್ಥೆಗೆ ಸಾಕಷ್ಟು ಬಾರಿ ಗಡುವು ನೀಡಲಾಗಿತ್ತಾದರೂ, ಬಾಕಿ ಹಣ ಪಾವತಿಯಾಗಿಲ್ಲ ಎಂದು ಎರಿಕ್ಸನ್ ವಾದಿಸಿದೆ.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್ ಕಾಮ್ ಸಂಸ್ಥೆ ಬಾಕಿ ಹಣ ಪಾವತಿಗೆ ತನಗೆ ಇನ್ನೂ 60 ದಿನಗಳ ಕಾಲಾವಕಾಶಬೇಕು ಎಂದು ಕೇಳಿದೆ.  ಆದರೆ ಆರ್ ಕಾಮ್ ಸಂಸ್ಥೆ ತನ್ನ ತರಂಗಾಂತರ ಗಳನ್ನು ಮಾರಾಟ ಮಾಡಿ ಎರಿಕ್ಸನ್ ಬಾಕಿ ಹಣ ಪಾವತಿಸುವುದಾಗಿ ಹೇಳಿಕೆ ನೀಡಿದ್ದು, ಎರಿಕ್ಸನ್ ಮಾತ್ರವಲ್ಲದೆ ತನ್ನ ಸಂಸ್ಥೆಗೆ ಬಿಡಿಭಾಗಗಳನ್ನು ಮಾರಾಟ ಮಾಡಿದ್ದ ಇತರೆ 38 ಸಂಸ್ಥೆಗಳಿಗೂ ಹಣ ಪಾವತಿ ಮಾಡುವುದಾಗಿ ಆರ್ ಕಾಮ್ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ. ಇದಕ್ಕೆ ಎರಿಕ್ಸನ್ ತಿರಸ್ಕರಿಸಿದ್ದು, ತನಗೆ ಕೂಡಲೇ ಹಣ ಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಇನ್ನು ಈ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ ಅಂದರೆ ಅಕ್ಟೋಬರ್ 4ರಂದು ನಡೆಸಲಿದೆ.
ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಶನ್ ಕಂಪನಿಯು ಟೆಲಿಕಾಂ ಉಪಕರಣಗಳ ಪೂರೈಕೆದಾರ ಎರಿಕ್ಸನ್ ಕಂಪನಿಯಿಂದ ಹಲವು ವರ್ಷ ಗಳ ಕಾಲ ಸಾಕಷ್ಟು ಸರಕನ್ನು ಖರೀದಿಸಿದೆ. ಆದರೆ, ಅವುಗಳಿಗೆ 1150 ಕೋಟಿ ರು. ಹಣ ಪಾವತಿಸಿಲ್ಲ. ಆ ಹಣಕ್ಕಾಗಿ ಎರಿಕ್ಸನ್ ಕಂಪನಿಯು ರಾಷ್ಟ್ರೀಯ ಕಂಪನಿ ಕಾಯ್ದೆಗಳ ನ್ಯಾಯಾಧಿಕರಣದಲ್ಲಿ ರಿಲಯನ್ಸ್ ವಿರುದ್ಧ 3 ದಿವಾಳಿ ಅರ್ಜಿಗಳನ್ನು ಸಲ್ಲಿಸಿದೆ. ಅದರೊಂದಿಗೆ, ಇಷ್ಟು ದಿನ ಹೇಗೋ ಕಾಲ ತಳ್ಳುತ್ತಾ ಬಂದಿದ್ದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಗಳ ಸ್ಥಿತಿ ಇನ್ನ ಷ್ಟು ಬಿಗಡಾಯಿಸಿದೆ. ಇನ್ನು ಕಳೆದ ವರ್ಷ ಆರ್ ಕಾಮ್ ಸಂಸ್ಥೆ ತನ್ನ ಸಹೋದರ ಸಂಸ್ಥೆಯಾದ ರಿಲಯನ್ಸ್ ಜಿಯೋದೊಂದಿಗೆ ತರಂಗಾಂತರ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು 4ಜಿಯ 122.4 ಮೆಗಾಹರ್ಟ್ಜ್ ತರಂಗಾಂತರವನ್ನು ಮತ್ತು 1,78,000 ಹೆಚ್ಚು ಕಿ.ಮೀ ವ್ಯಾಪ್ತಿಯ 43,000 ಟವರ್ ಗಳನ್ನು 248 ಎಂಸಿಎನ್ ಗಳನ್ನು ಜಿಯೋಗೆ ಮಾರಾಟ ಮಾಡುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ ಎಂಸಿಎನ್ ಗಳ ಮಾರಾಟದಿಂದಲೇ ಆರ್ ಕಾಮ್ ಗೆ 3 ಸಾವಿರ ಕೋಟಿ ಹರಿಯಲಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com