ಮುಂಬೈ: ಚೀನಾದ ಸುಮಾರು 200 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಅಮೆರಿಕಾ ಸರ್ಕಾರ ಹೊಸ ತೆರಿಗೆ ಹೇರಲಿರುವುದರಿಂದ ಜಾಗತಿಕ ಮಾರುಕಟ್ಟೆ ಮೇಲೆ ಮತ್ತೊಂದು ಸುತ್ತಿನ ವ್ಯತಿರಿಕ್ತ ಪರಿಣಾಮ ಎದುರಾಗಲಿದೆ. ಅಮೆರಿಕಾದ ಮಾಧ್ಯಮಗಳಲ್ಲಿ ನಿನ್ನೆ ಪ್ರಕಟಗೊಂಡ ವರದಿಗಳ ಪ್ರಕಾರ ಈ ಹಿಂದೆ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಚೀನಾದ ಆಮದು ವಸ್ತುಗಳ ಮೇಲೆ ಶೇಕಡಾ 25ರಷ್ಟು ತೆರಿಗೆ ಹೇರುವ ಬದಲು ಶೇಕಡಾ 10ರಷ್ಟು ವಿಧಿಸಲಿದೆ.
ಅಮೆರಿಕಾದ ಕಂಪೆನಿಗಳಿಂದ ತಂತ್ರಜ್ಞಾನವನ್ನು ವರ್ಗಾವಣೆ ಮಾಡಬೇಕೆಂಬ ಚೀನಾದ ಬೇಡಿಕೆಯ ಮುನ್ನ ಇರುವ ಕಷ್ಟಕರವಾದ ಸಂಧಾನದ ಹಿನ್ನಲೆಯಲ್ಲಿ ಚೀನಾ ಮೇಲೆ ಒತ್ತಡ ಹೇರಲು ಅಮೆರಿಕಾದ ಹೊಸ ತಂತ್ರ ಈ ವ್ಯಾಪಾರ ಕದನವಾಗಿದೆ. ಇದಕ್ಕೆ ಚೀನಾ ಕೂಡ ತಕ್ಕ ಪ್ರತ್ಯುತ್ತರ ನೀಡುವ ಸಾಧ್ಯತೆಯಿದೆ.
ಅಮೆರಿಕಾ ಕಳೆದ ಜುಲೈಯಲ್ಲಿ ಮೊದಲ ಬಾರಿಗೆ ಚೀನಾದ ಮೇಲೆ ವ್ಯಾಪಾರ ಕದನ ಆರಂಭಿಸಿದಾಗಲೇ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಲು ಆರಂಭವಾಗಿತ್ತು. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ಅವುಗಳಲ್ಲೊಂದಾಗಿದೆ. ಕಚ್ಚಾ ತೈಲದಲ್ಲಿ ಬೆಲೆ ಇಳಿಕೆಯಾದರೆ ಭಾರತಕ್ಕಂತೂ ಸದ್ಯದ ಮಟ್ಟಿಗೆ ಒಳ್ಳೆಯದು. ಅಲ್ಲದೆ ಬಟ್ಟೆ, ಮುತ್ತು, ಆಭರಣಗಳ ರಫ್ತಿನಲ್ಲಿ ಕೂಡ ಅಭಿವೃದ್ಧಿಯನ್ನು ಭಾರತ ನಿರೀಕ್ಷಿಸುತ್ತಿದೆ.
ಅಮೆರಿಕಾದ ಮುಂದಿನ ಚೀನಾದ ವಸ್ತುಗಳ ಆಮದಿನ ಮೇಲೆ ತೆರಿಗೆ ಹೆಚ್ಚಳ ಸುಮಾರು ಸಾವಿರ ವಸ್ತುಗಳ ಆಮದು ಬೆಲೆ ಖರೀದಿ ಮೇಲೆ ಪರಿಣಾಮ ಬೀರಲಿದೆ. ಅದು ಶಿಶುಗಳಿಗೆ ಬಳಕೆಯಾಗುವ ವಸ್ತುಗಳಿಂದ ಹಿಡಿದು ಸಮುದ್ರ ಪದಾರ್ಥಗಳು, ಸೈಕಲ್, ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣಗಳು, ಟೈರ್ ಗಳು, ರಾಸಾಯನಿಕ ಪದಾರ್ಥಗಳು, ಪ್ಲಾಸ್ಟಿಕ್ ಗಳ ಬೆಲೆ ದುಬಾರಿಯಾಗುವ ಸಾಧ್ಯತೆಯಿದೆ.
ಚೀನಾದಿಂದ ಆಮದು ಮಾಡಿಕೊಳ್ಳುವ ಯಾವ ವಸ್ತುಗಳ ಮೇಲೆ ದರ ವಿಧಿಸುವುದು ಎಂಬ ಬಗ್ಗೆ ಅಮೆರಿಕಾ ಕೊನೆಯ ಹಂತದ ಯೋಜನೆ ರೂಪಿಸುತ್ತಿದೆ ಎಂದು ಅಮೆರಿಕಾ ಮಾಧ್ಯಮಗಳು ವರದಿ ಮಾಡಿವೆ. ಚೀನಾದ ಅಸಂಪ್ರದಾಯಿಕ ಮತ್ತು ನ್ಯಾಯಯುತವಲ್ಲದ ವ್ಯಾಪಾರ ನೀತಿ ವಿರುದ್ಧ ಕ್ರಮ ಕೈಗೊಳ್ಳಲು ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಸಜ್ಜಾಗಿದೆ ಎಂದು ಶ್ವೇತಭವನ ವಕ್ತಾರ ಲಿಂಡ್ಸೆ ವಾಲ್ಟರ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಅಮೆರಿಕಾಕ್ಕೆ ಇದರಿಂದ ನಷ್ಟವೇ ಹೊರತು ಲಾಭವಿಲ್ಲ. ಅಲ್ಲಿನ ಕಾರ್ಮಿಕ ಸಮುದಾಯದ ಮೇಲೆ ಹೊಡೆತ ಬೀಳಲಿದೆ ಎನ್ನುತ್ತಾರೆ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಪೌಲ್ ಕ್ರುಗ್ಮನ್.
Advertisement