ಸಾಲ ವಂಚಕರನ್ನು ಹದ್ದುಬಸ್ತಿನಲ್ಲಿಡಲು ಪ್ರಧಾನ ಮಂತ್ರಿ ಕಚೇರಿ ಸೂಚನೆ; ಲುಕ್ ಔಟ್ ನೊಟೀಸ್ ಜಾರಿ

ಸಾಲ ಮರುಪಾವತಿ ಮಾಡದೆ ವಂಚಿಸಿ ದೇಶ ಬಿಟ್ಟು ಹೋಗುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ...
ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯಲ್
ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯಲ್
ನವದೆಹಲಿ:ಸಾಲ ಮರುಪಾವತಿ ಮಾಡದೆ ವಂಚಿಸಿ ದೇಶ ಬಿಟ್ಟು ಹೋಗುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮನವಿ ಮೇರೆಗೆ ಡಿಎಚ್ಎಫ್ಎಲ್ ಪ್ರವರ್ತಕರು ಮತ್ತು ಇತರ 19 ವಂಚಕರ ವಿರುದ್ಧ ಗೃಹ ವ್ಯವಹಾರಗಳ ಇಲಾಖೆ ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.
ಡಿಎಚ್ಎಫ್ಎಲ್ ನ ಮೂಲ ಪ್ರವರ್ತಕರಾದ ಕಪಿಲ್ ವಧವನ್, ಅರುಣಾ ವಧವನ್ ಮತ್ತು ಧೀರಜ್ ವಧವನ್ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.
ಸಾಲ ಹಿಂತಿರುಗಿಸದೆ ವಂಚಿಸಿದವರು ಈ ಬಾರಿ ವಿದೇಶಕ್ಕೆ ಪರಾರಿಯಾಗದಂತೆ ನೋಡಿಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕಳೆದ ವಾರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ 20 ಬ್ಯಾಂಕು ಸಾಲ ವಂಚಕರ ಪಟ್ಟಿಯನ್ನು ನೀಡಿತ್ತು. ಅದರಲ್ಲಿ ಜೆಟ್, ಡಿಎಚ್ ಎಫ್ಎಲ್, ರಿಯಾಲ್ಟಿ ಕಂಪೆನಿಯ ಪ್ರೊಮೊಟರ್ ಗಳ ಹೆಸರುಗಳು ಕೂಡ ಇದ್ದವು. ಈ ವಾರ ಹೊಸ ಪಟ್ಟಿಯನ್ನು ಗೃಹ ಇಲಾಖೆಯ ಸಚಿವಾಲಯಕ್ಕೆ ನೀಡಲಾಗುವುದು ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೊಕ್ಸಿ ಮತ್ತು ಇನ್ನೂ ಹಲವು ಖ್ಯಾತ ಉದ್ಯಮಿಗಳು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ದೇಶ ಬಿಟ್ಟು ಹೋದ ನಂತರ ಸರ್ಕಾರ ತೀವ್ರ ಮುಜುಗರ ಅನುಭವಿಸಿತ್ತು. ಈ ರೀತಿ ಬ್ಯಾಂಕುಗಳ ವ್ಯವಹಾರಗಳಲ್ಲಿ ಅಕ್ರಮ ವಹಿವಾಟು ನಡೆಸುತ್ತಿರುವ ವಂಚನೆಯಲ್ಲಿ ಭಾಗಿಯಾಗಿರುವ ಕಂಪೆನಿಗಳು, ಪ್ರವರ್ತಕರು ಮತ್ತು ನಿರ್ದೇಶಕರನ್ನು ಕಟ್ಟಿಹಾಕುವಂತೆ ಪ್ರಧಾನ ಮಂತ್ರಿ ಕಚೇರಿಯಿಂದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಹಸಿರು ನಿಶಾನೆ ಸಿಕ್ಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com