ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಬಳಿಕ ತೈಲೋತ್ಪನ್ನಗಳ ದರಗಳು ನಿರಂತರ ಏರಿಕೆಯಾಗುತ್ತಿದ್ದು, ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.
ಇಂದು ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 27 ಪೈಸೆ ಏರಿಕೆಯಾಗಿದ್ದು, ಆ ಮೂಲಕ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 83.13ಕ್ಕೆ ಏರಿಕೆಯಾಗಿದೆ. ಇದು ಕಳೆದ 2 ವರ್ಷಗಳಲ್ಲೇ ಏರಿಕೆಯಾದ ಗರಿಷ್ಟ ದರವಾಗಿದೆ. ಇನ್ನು ಡೀಸೆಲ್ ದರದಲ್ಲಿಯೂ ಕೂಡ 25 ಪೈಸೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 73.32ಕ್ಕೆ ಏರಿಕೆಯಾಗಿದೆ. ನಿನ್ನೆ ಪೆಟ್ರೋಲ್ ದರ 82.86 ರೂನಷ್ಟಿದ್ದರೆ, ಡೀಸೆಲ್ ದರ 73.07ರೂ ನಷ್ಟಿತ್ತು.
ಇದು ತೈಲೋತ್ಪನ್ನಗಳ 13ನೇ ಸತತ ದರ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. 2018ರ ಸೆಪ್ಟೆಂಬರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗರಿಷ್ಛ ಮಟ್ಟ ತಲುಪಿದ್ದವು. ಇದೀಗ ಮತ್ತೆ 2 ವರ್ಷಗಳ ಬಳಿಕ ಅದೇ ಮಟ್ಟದಲ್ಲಿ ದರ ಏರಿಕೆಯಾಗಿದೆ.
ಕಳೆದ 16 ದಿನಗಳಲ್ಲಿ ಪೆಟ್ರೋಲ್ ದರ 2.07 ರೂ ನಷ್ಟು ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 2.86 ರೂನಷ್ಟು ಏರಿಕೆಯಾಗಿದೆ. ದೇಶದಲ್ಲಿ ಕೊರೋನಾ ವೈರಸ್ ಲಸಿಕೆಯ ಕುರಿತಾದ ಸಕಾರಾತ್ಮಕ ದೃಷ್ಟಿಕೋನ ಇಂಧನ ಬೇಡಿಕೆ ಹೆಟ್ಟಾಗುವಂತೆ ಮಾಡಿದೆ. ಅಲ್ಲದೆ ಕಳೆದ ಅಕ್ಟೋಬರ್ ಗೆ ಹೋಲಿಕೆ ಮಾಡಿದರೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲೂ ಕಚ್ಛಾತೈಲ ಬೇಡಿಕೆ ಶೇ.34ರಷ್ಟು ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾತೈಲ ದರ ಅಕ್ಟೋಬರ್ 30ರಂದು 36.9 ಅಮೆರಿಕನ್ ಡಾಲರ್ ಆಗಿತ್ತು. ಅದೇ ದರ ಡಿಸೆಂಬರ್ 4ರ ಹೊತ್ತಿಗೆ 49.5 ಅಮೆರಿಕನ್ ಡಾಲರ್ ಆಗಿದೆ.
Advertisement