ಮತ್ತೆ ಇಂಧನ ದರ ಏರಿಸಿದ ತೈಲ ಕಂಪನಿ: ಪೆಟ್ರೋಲ್, ಡೀಸೆಲ್ ಬೆಲೆ 60 ಪೈಸೆ ಏರಿಕೆ
ನವದೆಹಲಿ: ಜೂ.7 ರಂದಷ್ಟೇ ಇಂಧನ ದರವನ್ನು ಏರಿಕೆ ಮಾಡಿದ್ದ ತೈಲ ಕಂಪನಿಗಳು ಇದೀಗ ಮತ್ತೆ ಸೋಮವಾರ ಪೆಟ್ರೋಲ್ ಮತ್ತು ಡೀಲೆಸ್ ಬೆಲೆಯನ್ನು ಲೀಟರ್'ಗೆ 60 ಪೈಸೆಯಷ್ಟು ಏರಿಕೆ ಮಾಡಿದೆ.
ಕೊರೋನಾ ವೈರಸ್ ಲಾಕ್'ಡೌನ್ ನಿಂದಾಗಿ ಸತತ 83 ದಿನಗಳ ವಿರಾಮದ ಬಳಿಕ ನಿನ್ನೆಯಷ್ಟೇ ತೈಲ ಕಂಪನಿಗಳು 60 ಪೈಸೆಯಷ್ಟು ಇಂಧನ ದರವನ್ನು ಏರಿಕೆ ಮಾಡಿತ್ತು. ಇದೀಗ ಮತ್ತೆ 60 ಪೈಸೆಯಷ್ಟು ಏರಿಕೆ ಮಾಡಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ದರವನ್ನು ಹೆಚ್ಚಿಸಲಾಗುತ್ತಿದೆ.
ಇದರಿಂದಾಗಿ ನಿನ್ನೆಯವರೆಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ. 71.86 ರಷ್ಟಿದ್ದ ಪ್ರತೀ ಲೀಟರ್ ಪೆಟ್ರೋಲ್ ದರ ಸೋಮವಾರ ರೂ. 72.46 ಹೆಚ್ಚಳ ಕಂಡಿದೆ. ಇನ್ನು ಭಾನುವಾರದವರೆಗೂ ರೂ.69.99ರಷ್ಟಿದ್ದ ಡೀಸೆಲ್ ದರ ಇಂದು ರೂ.70.59ಕ್ಕೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಎಟಿಎಫ್ ಮತ್ತು ಎಲ್‌ಪಿಜಿ ಬೆಲೆಗಳನ್ನು ನಿಯಮಿತವಾಗಿ ಪರಿಷ್ಕರಿಸುತ್ತಿದ್ದರೂ ಮೇಲ್ನೋಟಕ್ಕೆ ಕಂಡು ಬಂದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತದ ಹಿನ್ನೆಲೆಯಲ್ಲಿ ಮಾ.16ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆಯನ್ನು ತಡೆಹಿಡಿದಿದ್ದವು. ಇದಕ್ಕೂ ಮುನ್ನ ಜಾಗತಿಕ ಬೆಲೆ ಕುಸಿತದ ಲಾಭವನ್ನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರವು ಇವೆರಡೂ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ ತಲಾ ಮೂರು ರೂ.ಗಳಷ್ಟು ಹೆಚ್ಚಿಸಿತ್ತು.
ಮೇ 6ರಂದು ಸರ್ಕಾರ ಮತ್ತೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 10 ರೂ. ಮತ್ತು ಡೀಸೆಲ್‌ಗೆ 13 ರೂ.ಹೆಚ್ಚಿಸಿತ್ತು. ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿದಿದ್ದ ಹಿನ್ನೆಲೆಯಲ್ಲಿ ತೈಲ ಮಾರಾಟ ಕಂಪನಿಗಳು ಈ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ