ನವದೆಹಲಿ: ವಿಳಂಬ ಮಾಡದೇ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆಯ ಒಟ್ಟು ಆದಾಯ(ಎಜಿಆರ್)ವನ್ನು ಪಾವತಿಸುವಂತೆ ಭಾರತೀ ಏರ್ಟೆಲ್, ವೋಡಾಫೋನ್ ಐಡಿಯಾ ಹಾಗೂ ಇತರೆ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಬುಧವಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಟೆಲಿಕಾಂ ಕಂಪನಿಗಳಿಗೆ ಪತ್ರ ಬರೆದಿರುವ ಟೆಲಿಕಾಂ ಇಲಾಖೆ, ವಿಳಂಬವಿಲ್ಲದೆ ಬಾಕಿ ಹಣವನ್ನು ಪಾವತಿಸಿ ಮತ್ತು ಪಾವತಿಗಳ ವಿವರವನ್ನು ಸಲ್ಲಿಸಿ(ಸ್ವಯಂ-ಮೌಲ್ಯಮಾಪನ ಮೊತ್ತಗಳ ವಿವರಣೆ), ಅದು ಸರಿಯಾದ ಸಮನ್ವಯಕ್ಕೆ ಅಗತ್ಯ ಎಂದು ಹೇಳಿದೆ.
ಸರ್ಕಾರ ಇದುವರೆಗೆ 26 ಸಾವಿರ ಕೋಟಿ ರೂಪಾಯಿ ಎಜಿಆರ್ ಬಾಕಿ ಸ್ವೀಕರಿಸಿದ್ದು, ಉಳಿದ ಹಣ ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇತ್ತೀಚಿಗಷ್ಟೇ ದೇಶದ ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಎಜಿಆರ್ ₹1.47 ಲಕ್ಷ ಕೋಟಿ ರೂ. ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಲ್ಲದೆ ಈ ಸಂಬಂಧ ಟೆಲಿಕಾಂ ಇಲಾಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
Advertisement