ಜಿಎಸ್ ಟಿ ಪರಿಹಾರವಾಗಿ ಕೇಂದ್ರದಿಂದ ರಾಜ್ಯಗಳಿಗೆ 75,000 ಕೋಟಿ ರೂ. ಬಿಡುಗಡೆ
ಜಿಎಸ್ ಟಿ ಆದಾಯದ ಕೊರತೆಯನ್ನು ಸರಿದೂಗಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 75,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
Published: 15th July 2021 08:46 PM | Last Updated: 16th July 2021 01:08 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಜಿಎಸ್ ಟಿ ಆದಾಯದ ಕೊರತೆಯನ್ನು ಸರಿದೂಗಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 75,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಪರಿಹಾರ ನಿಧಿಯಲ್ಲಿ ಅಸಮರ್ಪಕ ಮೊತ್ತದ ಕಾರಣ ಪರಿಹಾರದ ಅಲ್ಪಾವಧಿಯ ಬಿಡುಗಡೆಯಿಂದಾಗಿ ಸಂಪನ್ಮೂಲ ಅಂತರವನ್ನು ಪೂರೈಸಲು 1.59 ಲಕ್ಷ ಕೋಟಿ ಸಾಲ ಪಡೆದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲು ಮೇ 28 ರಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಜಿಎಸ್ ಟಿ ಪರಿಹಾರದ ಬದಲಾಗಿ ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯದಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ಸಚಿವಾಲಯ ಇಂದು 75 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಸೆಸ್ ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆಯಾಗುವ ಸಾಮಾನ್ಯ ಜಿಎಸ್ಟಿ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಎಲ್ಲಾ ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಹಾರ ಕೊರತೆಯ ಹಣವನ್ನು ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯದ ಅಡಿಯಲ್ಲಿ ಒದಗಿಸುವ ವ್ಯವಸ್ಥೆಗೆ ಒಪ್ಪಿಕೊಂಡಿವೆ. ಬಾಕಿ ಮೊತ್ತವನ್ನು 2021-22ರ ದ್ವಿತೀಯಾರ್ಧದಲ್ಲಿ ಸ್ಥಿರ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.