ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ 20,700 ಕೋಟಿ ರೂ. ಗೆ ಏರಿಕೆ: 13 ವರ್ಷಗಳಲ್ಲೇ ಅತಿ ಹೆಚ್ಚು!

ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತದ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳು-ಭಾರತದ ಮೂಲದ ಶಾಖೆಗಳಿಂದ ಇಟ್ಟಿರುವ ಹಣದ ಮೊತ್ತ 20,700 ಕೋಟಿಗೆ ಏರಿಕೆಯಾಗಿದೆ.
ಸ್ವಿಸ್ ಬ್ಯಾಂಕ್
ಸ್ವಿಸ್ ಬ್ಯಾಂಕ್

ನವದೆಹಲಿ: ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತದ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳು-ಭಾರತದ ಮೂಲದ ಶಾಖೆಗಳಿಂದ ಇಟ್ಟಿರುವ ಹಣದ ಮೊತ್ತ 20,700 ಕೋಟಿಗೆ ಏರಿಕೆಯಾಗಿದೆ ಎಂದು ಸ್ವಿಟ್ಜರ್ಲ್ಯಾಂಡ್ ನ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 

ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ವಿಶ್ವದ ಅತ್ಯಂತ ಭದ್ರತೆಯ ವ್ಯವಸ್ಥೆಯುಳ್ಳ ಬ್ಯಾಂಕ್ ಎಂದೇ ಖ್ಯಾತಿಗಳಿಸಿರುವ ಸ್ವಿಸ್ ಬ್ಯಾಂಕ್ ನಲ್ಲಿ ಇಡೀ ವಿಶ್ವದ ದೊಡ್ಡ ದೊಡ್ಡ ಕುಳಗಳು ತಮ್ಮ ಹಣವನ್ನು ಇರಿಸಿದ್ದಾರೆ. ಭಾರತಿಯರು ಸಹ ಇಲ್ಲಿ ಸಾವಿರಾರು ಕೋಟಿಗಳನ್ನ ಇಟ್ಟಿದ್ದಾರೆ.. ಭಾರತದ ದೊಡ್ಡ ದೊಡ್ಡ  ವ್ಯಕ್ತಿಗಳ ಕಾಳಧನವೂ ಈ ಬ್ಯಾಂಕ್ ನಲ್ಲಿ ಇಡಲಾಗಿದೆ ಅನ್ನೋ ಆರೋಪಗಳು ಇವೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಬ್ಯಾಂಕ್ ವಿಚಾರ ರಾಜಕೀಯ ಪಕ್ಷಗಳ ಪ್ರಚಾರಾಂಶವಾಗಿತ್ತು. ಇದೀಗ ಇದೇ ಬ್ಯಾಂಕ್ ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದ್ದು, ಈ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ  ಮಾಡಿದೆ. ವರದಿಯಲ್ಲಿರುವಂತೆ ಭಾರತೀಯರು ವೈಯಕ್ತಿಕವಾಗಿ ಮತ್ತು ಬೇರೆ ಬೇರೆ ಹಣಕಾಸು ಸಂಸ್ಥೆಗಳ ಮೂಲಕ ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟಿರುವ ಹಣದ ಮೊತ್ತ 20,700 ಕೋಟಿ ರೂ.ಗೆ ಏರಿಕೆಯಾಗಿದ್ದು, ಇದು ಕಳೆದ 13 ವರ್ಷಗಳಲ್ಲೇ ಗರಿಷ್ಠ ಮೊತ್ತದ್ದಾಗಿದೆ ಎಂದು ಹೇಳಲಾಗಿದೆ.

ಗರಿಷ್ಠ ಮೊತ್ತವಾದರೂ, ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆ
ಇನ್ನು ಇದೇ ವೇಳೆ ಪ್ರಸ್ತುತ ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಹಣದ ಮೊತ್ತ ಗರಿಷ್ಠ ಪ್ರಮಾಣದ್ದೇ ಆದರೂ, ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆಯಾಗಿದೆ ಎಂದು ಸ್ವಿಜರ್ಲೆಂಡ್ ಕೇಂದ್ರೀಯ ಬ್ಯಾಂಕ್ ಮಾಹಿತಿ ನೀಡಿದೆ. 2020ರ ವಾರ್ಷಿಕ ವರದಿಯಲ್ಲಿ ಬ್ಯಾಂಕ್ ಈ ಮಾಹಿತಿ ನೀಡಿದ್ದು, ಸೆಕ್ಯೂರೀಟಿಸ್ ಮತ್ತು  ಅದೇ ರೀತಿಯ ಇತರ ಮಾದರಿಯ ಹೂಡಿಕೆಯಿಂದಾಗಿ ಮೊತ್ತ ಏರಿಕೆಯಾಗಿದೆ. ಭಾರತದಲ್ಲಿನ ಸ್ವಿಜರ್ಲೆಂಡ್ ಬ್ಯಾಂಕಿನಲ್ಲಿರುವ ಹಣವು ಇದರಲ್ಲಿ ಸೇರಿದೆ ಎಂದು ತಿಳಿಸಿದೆ. ಈ ಹಣದಲ್ಲಿ ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಸಂಸ್ಥೆಗಳ ಹೆಸರಿನಲ್ಲಿ ಇಡಲಾಗಿರುವ ಹಣವನ್ನು ಸೇರಿಸಿಲ್ಲ.

2006ರಲ್ಲಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಒಟ್ಟು 23,000 ಕೋಟಿ ರೂ. ಹಣವನ್ನು ಇಡಲಾಗಿತ್ತು. ಇದು ಇಲ್ಲಿಯವರೆಗೆ ಭಾರತೀಯರು ಇರಿಸಿದ್ದ ಗರಿಷ್ಠ ಮೊತ್ತವಾಗಿತ್ತು. 2010, 2013, 2017 ಹೊರತು ಪಡಿಸಿ ನಂತರದ ವರ್ಷಗಳಲ್ಲಿ ಠೇವಣಿ ಇಳಿಕೆಯಾಗಿತ್ತು. ಆದರೆ 2020ರಲ್ಲಿ ಈ ಮೊತ್ತ 20,700 ಕೋಟಿ  ರೂ.ಗೆ ಜಿಗಿದಿದೆ.

2019ರಲ್ಲಿ ಕುಸಿದಿದ್ದ ಪ್ರಮಾಣ
ಇನ್ನು 2019 ರ ಅಂತ್ಯದ ವೇಳೆಗೆ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಹಣದ ಪ್ರಮಾಣದಲ್ಲಿ ಕುಸಿತವಾಗಿತ್ತು. ಆದರೆ 2020 ಅಂತ್ಯಕ್ಕೆ ಈ ಪ್ರಮಾಣ 13 ವರ್ಷಗಳಲ್ಲೇ ಗರಿಷ್ಟ ಪ್ರಮಾಣಕ್ಕೆ ಏರಿಕೆಯಾಗಿದೆ. ಎಸ್‌ಎನ್‌ಬಿ ವಿವರಗಳ ಅನ್ವಯ ಒಟ್ಟು ಪ್ರಸ್ತುತ ಸಿಎಚ್‌ಎಫ್ ನಲ್ಲಿ 2,554.7 ಮಿಲಿಯನ್  (20,706 ಕೋಟಿ ರೂ.) ರೂ ಭಾರತೀಯರ ಹಣವಿದ್ದು, ಸ್ವಿಸ್ ಬ್ಯಾಂಕುಗಳ 'ಒಟ್ಟು ಹೊಣೆಗಾರಿಕೆಗಳು' ಅಥವಾ 2020 ರ ಕೊನೆಯಲ್ಲಿ ಅವರ ಭಾರತೀಯ ಗ್ರಾಹಕರ ಕಾರಣದಿಂದಾಗಿ 'ಸಿಎಚ್‌ಎಫ್ ನಲ್ಲಿ 503.9 ಮಿಲಿಯನ್ (4,000 ಕೋಟಿ ರೂ.) ಹಣ ಹರಿದಿದೆ. ಅಂತೆಯೇ ಗ್ರಾಹಕರ ಠೇವಣಿಗಳಲ್ಲಿ,  ಇತರ ಬ್ಯಾಂಕುಗಳ ಮೂಲಕ 383 ಮಿಲಿಯನ್ (ರೂ. 3,100 ಕೋಟಿಗಿಂತ ಹೆಚ್ಚು), ವಿಶ್ವಾಸಾರ್ಹರು ಅಥವಾ ಟ್ರಸ್ಟ್‌ಗಳ ಮೂಲಕ ಸಿಎಚ್‌ಎಫ್ 2 ಮಿಲಿಯನ್ (ರೂ. 16.5 ಕೋಟಿ) ಮತ್ತು  1,664.8 ಮಿಲಿಯನ್ (ಸುಮಾರು 13,500 ಕೋಟಿ ರೂ.) ಕೂ ಅಧಿಕ ಹಣ 'ಇತರ ಮೊತ್ತಗಳ ಕಾರಣದಿಂದಾಗಿ  ಗ್ರಾಹಕರ ಬಾಂಡ್‌ಗಳು, ಸೆಕ್ಯುರಿಟೀಸ್ ಮತ್ತು ಇತರ ಹಣಕಾಸು ಸಾಧನಗಳ ರೂಪದಲ್ಲಿ ಬ್ಯಾಂಕ್ ಗೆ ಸೇರ್ಪಡೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನು 'ಗ್ರಾಹಕ ಖಾತೆ ಠೇವಣಿ' ಎಂದು ವರ್ಗೀಕರಿಸಲಾದ ನಿಧಿಗಳು 2019 ರ ಅಂತ್ಯದ ವೇಳೆಗೆ ಸಿಎಚ್‌ಎಫ್ 550 ಮಿಲಿಯನ್‌ನಿಂದ ಇಳಿಮುಖವಾಗಿದ್ದು ಮತ್ತು ವಿಶ್ವಾಸಾರ್ಹರ ಮೂಲಕ ಹರಿದ ಹಣದ ಪ್ರಮಾಣದಲ್ಲಿ 7.4 ಮಿಲಿಯನ್‌ ನಿಂದ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಆದಾಗ್ಯೂ, ಅತಿದೊಡ್ಡ  ವ್ಯತ್ಯಾಸವೆಂದರೆ ಭಾರತದಿಂದ 'ಗ್ರಾಹಕರಿಂದಾಗಿ ಇತರ ಮೊತ್ತ'ಗಳ ಏರಿಕೆಯಾಗಿದ್ದು, ಇದು 2019 ರ ಅಂತ್ಯದ ವೇಳೆಗೆ 253 ಮಿಲಿಯನ್‌ನಿಂದ ಆರು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿಯಲ್ಲಿನ ಪ್ರಮುಖಾಂಶಗಳು
1.ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ದ ಅಂಕಿಅಂಶಗಳ ಪ್ರಕಾರ, ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಠೇವಣಿ 2006 ರಲ್ಲಿ ಸಾರ್ವಕಾಲಿಕ ಗರಿಷ್ಠ 52,575 ಕೋಟಿ ರೂ. ಅಂದಿನಿಂದ, 2011, 2013 ಮತ್ತು 2017 ವರ್ಷಗಳನ್ನು ಹೊರತುಪಡಿಸಿ, ಹೆಚ್ಚಿನ ಕುಸಿತಗಳು ಕಂಡುಬಂದಿವೆ.
2.ಎನ್‌ಎಸ್‌ಬಿ ಪ್ರಕಾರ, ಇದು ಕಪ್ಪು ಹಣ ಎಂದು ನಾವು ಹೇಳಲಾಗುವುದಿಲ್ಲ. ಈ ಅಂಕಿಅಂಶಗಳು ಭಾರತೀಯರು, ಅನಿವಾಸಿ ಭಾರತೀಯರು ಅಥವಾ ಇತರರು ಮೂರನೇ ದೇಶದ ಘಟಕಗಳ ಹೆಸರಿನಲ್ಲಿ ಠೇವಣಿ ಇಟ್ಟ ಹಣವನ್ನು ಸಹ ಒಳಗೊಂಡಿಲ್ಲ.
3.ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯ ಠೇವಣಿಗಳ ಲೆಕ್ಕಾಚಾರವು ಸ್ವಿಸ್ ಬ್ಯಾಂಕುಗಳ ಭಾರತೀಯ ಗ್ರಾಹಕರಿಂದ ವ್ಯಕ್ತಿಗಳು, ಬ್ಯಾಂಕುಗಳು ಮತ್ತು ಉದ್ಯಮಗಳ ಠೇವಣಿ ಸೇರಿದಂತೆ ಎಲ್ಲಾ ರೀತಿಯ ಹಣವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

30.49 ಲಕ್ಷ ಕೋಟಿ ರೂ.ಗಳೊಂದಿಗೆ ಬ್ರಿಟನ್ ಗೆ ಅಗ್ರಸ್ಥಾನ
2020 ರ ಅಂತ್ಯದ ವೇಳೆಗೆ ಸ್ವಿಸ್ ಬ್ಯಾಂಕುಗಳಲ್ಲಿನ ಒಟ್ಟು ಠೇವಣಿ 161.78 ಲಕ್ಷ ಕೋಟಿ ರೂ. ಈ ಪೈಕಿ ವಿದೇಶಿ ಠೇವಣಿ 48.53 ಲಕ್ಷ ಕೋಟಿ ರೂ. 30.49 ಲಕ್ಷ ಕೋಟಿ ರೂ.ಗಳೊಂದಿಗೆ ಯುಕೆ (ಬ್ರಿಟನ್) ಅಗ್ರಸ್ಥಾನದಲ್ಲಿದೆ. 12.29 ಲಕ್ಷ ಕೋಟಿ ರೂ.ಗಳೊಂದಿಗೆ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಇದಲ್ಲದೆ, ವೆಸ್ಟ್  ಇಂಡೀಸ್, ಫ್ರಾನ್ಸ್, ಹಾಂಗ್ ಕಾಂಗ್, ಜರ್ಮನಿ, ಸಿಂಗಾಪುರ್, ಲಕ್ಸೆಂಬರ್ಗ್, ಕೇಮನ್ ದ್ವೀಪಗಳು ಮತ್ತು ಬಹಾಮಾಸ್ ಮೊದಲ 10 ದೇಶಗಳಲ್ಲಿ ಸ್ಥಾನ ಪಡೆದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com