ನೋಟು ಅಮಾನ್ಯೀಕರಣಕ್ಕೆ 5 ವರ್ಷ: ಭಾರತೀಯರ ಬಳಿ ಶೇ.57 ಕ್ಕಿಂತ ಹೆಚ್ಚು ನಗದು ಹಣ!

ಅದು ನವೆಂಬರ್ 8, 2016.. ಅವತ್ತು ಜನ ತಮ್ಮ ಕಚೇರಿ ಕಾರ್ಯಗಳನ್ನು ಪೂರ್ಣಗೊಳಿಸಿಕೊಂಡು ಮನೆಗೆ ಮರಳಿದ್ದರು. ಅಂದು ರಾತ್ರಿ 8:15 ರ ಸುಮಾರಿಗೆ ಪ್ರಧಾನಿ ಮೋದಿ, ದೇಶದಲ್ಲಿ ಚಲಾವಣೆಯಲ್ಲಿದ್ದ 500 ಹಾಗೂ 1000 ರೂಪಾಯಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅದು ನವೆಂಬರ್ 8, 2016.. ಅವತ್ತು ಜನ ತಮ್ಮ ಕಚೇರಿ ಕಾರ್ಯಗಳನ್ನು ಪೂರ್ಣಗೊಳಿಸಿಕೊಂಡು ಮನೆಗೆ ಮರಳಿದ್ದರು. ಅಂದು ರಾತ್ರಿ 8:15 ರ ಸುಮಾರಿಗೆ ಪ್ರಧಾನಿ ಮೋದಿ, ದೇಶದಲ್ಲಿ ಚಲಾವಣೆಯಲ್ಲಿದ್ದ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು.

ದೀಪಾವಳಿ ಸಂದರ್ಭದಲ್ಲಿ ನಡೆದ ಪ್ರಧಾನಿ ಮೋದಿಯವರ ನಿರ್ಧಾರ ಇಡೀ ಜಗತ್ತು ಬೆಚ್ಚಿಬೀಳುವಂತೆ ಮಾಡಿತ್ತು. ಅಂದಿನಿಂದ ಕೇಂದ್ರ ಸರ್ಕಾರ ಡಿಜಿಟಲ್ ಕರೆನ್ಸಿಗೆ ಒತ್ತು ನೀಡುತ್ತಿದೆ. ಇತ್ತೀಚಿನ ವರದಿ ಪ್ರಕಾರ, 2020ರಲ್ಲಿ ಭಾರತವು ವಿಶ್ವದಲ್ಲೇ 25.5 ಬಿಲಿಯನ್ ರಿಯಲ್ ಟೈಮ್ ಪಾವತಿ ಮಾಡಿದೆ ಅಂತಾ ತಿಳಿದುಬಂದಿದೆ.

ಶೇ. 57 ರಷ್ಟು ನಗದು ಬಳಕೆ!
ನೋಟು ಅಮಾನ್ಯೀಕರಣದ ಘೋಷಣೆಯಾಗಿ 5ನೇ ವರ್ಷದ ಹೊಸ್ತಿಲಲ್ಲಿ ಭಾರತ ಇದೆ. ಈ ಸಂದರ್ಭದಲ್ಲಿ ಜನರ ಬಳಿ ಇರುವ ನಗದು ಪ್ರಮಾಣ ಹೆಚ್ಚುತ್ತಲೇ ಇದೆ. ಭಾರತೀಯ ರಿಸರ್ವ್ ಬ್ಯಾಂಕ್, ಪ್ರತಿ 15 ದಿನಗಳಿಗೊಮ್ಮೆ "Currency With The People" ಬಗ್ಗೆ ರಿಪೋರ್ಟ್ ನೀಡುತ್ತದೆ. ಅಂದರೆ ಜನರ ಬಳಿ ಇರುವ ನಗದು ಹಣದ ಪ್ರಮಾಣ ಎಷ್ಟು? ಹಾಗೂ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಎಷ್ಟು ಅನ್ನೋದನ್ನು ಈ ವರದಿಯಿಂದ ನಿರ್ಧಾರ ಮಾಡಲಾಗುತ್ತದೆ.

ಈ ರಿಪೋರ್ಟ್ ನ ಪ್ರಕಾರ ಅಕ್ಟೋಬರ್ 8, 2021ರಲ್ಲಿ ಜನರ ಬಳಿ 28.30 ಲಕ್ಷ ಕೋಟಿ ರೂಪಾಯಿ ಇರೋದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅದೇ ನೋಟು ಅಮಾನ್ಯ ಮಾಡುವುದಕ್ಕೂ ಮುನ್ನ ಅಂದರೆ ನವೆಂಬರ್ 4, 2016ಕ್ಕೆ ಹೋಲಿಕೆ ಮಾಡಿದರೆ 17.97 ಲಕ್ಷ ಕೋಟಿ ರೂಪಾಯಿ ಜನರ ಬಳಿ ಇತ್ತು. ಈ ಎರಡೂ ದಿನಾಂಕದ ಹಣದ ರಾಶಿಯನ್ನು ಹೋಲಿಕೆ ಮಾಡಿದರೆ, ಪ್ರಸ್ತುತ ಜನರ ಬಳಿ ಶೇಕಡಾ 57.48ರಷ್ಟು ನಗದು ಹಣ ಇರುವುದನ್ನು ಅರ್ಥೈಸಿಕೊಳ್ಳಬಹುದಾಗಿದೆ. ಅಂದರೆ ಒಟ್ಟು 10.33 ಲಕ್ಷ ಕೋಟಿ ರೂಪಾಯಿ ಅಧಿಕ ರಾಶಿ ಹಣ ಜನರ ಬಳಿ ಇದೆ ಅನ್ನೋದನ್ನು ಹೋಲಿಕೆಯಿಂದ ಕಂಡುಕೊಳ್ಳಬಹುದು.

ಜಗತ್ತಿನಲ್ಲೇ ಅತೀ ಹೆಚ್ಚು ಡಿಜಿಟಲ್ ಪಾವತಿ!
ಹೌದು., ಭಾರತದಲ್ಲಿ ಆನ್ ಲೈನ್ ನಗದು ಪಾವತಿ ಪ್ರಕ್ರಿಯೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಅನ್ನೋದನ್ನು ತಳ್ಳಿ ಹಾಕುವಂತಿಲ್ಲ. ಪ್ರತಿದಿನ ಡಿಜಿಟಲ್ ಪೇಮೆಂಟ್ ಅತ್ಯಂತ ವೇಗವಾಗಿ ಭಾರತೀಯರು ಅಪ್ಪಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಂಕಿ-ಅಂಶಗಳನ್ನು ಕಲೆ ಹಾಕುವ ವರ್ಲ್ಡ್ ವೈಡ್ ಟ್ರ್ಯಾಕಿಂಗ್ ಪಾವತಿ ವ್ಯವಸ್ಥೆಗಳ ಕಂಪನಿ ಎಸಿಐ(ACI) ಮಾರ್ಚ್ 2021ರಲ್ಲಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಭಾರತೀಯರು ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 25.5 ಬಿಲಿಯನ್ ರಿಯಲ್ ಟೈಮ್ ಪಾವತಿ ಮಾಡಿದ್ದಾರೆ ಅಂತಾ ತಿಳಿಸಿದೆ. ಎಸಿಐ ಕಂಪನಿ ಭಾರತದ ವೆಬ್ ಸೈಟ್ MyGovt ಜೊತೆಗೆ ಸರ್ವೇ ಮಾಡಿ, ಚೀನಾಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಭಾರತೀಯರು ಡಿಜಿಟಲ್ ರೂಪದಲ್ಲಿ ಪಾವತಿ ಮಾಡಿದ್ದಾರೆ ಅನ್ನೋ ಮಾಹಿತಿಯನ್ನು ಕಲೆ ಹಾಕಿದೆ.

ಶೇಕಡಾ 60ರಷ್ಟು ಗ್ರಾಹಕರು ವಾರಕ್ಕೆ ಒಂದು ಬಾರಿ ಇಲ್ಲವೇ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ಆನ್ ಲೈನ್ ಪೇಮೆಂಟ್ ಮಾಡಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಉಲ್ಲೇಖ ಮಾಡಲಾಗಿದೆ. ಆರ್ ಬಿಐ ಅಂಕಿ-ಅಂಶಗಳ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಡಿಜಿಟಲ್ ನಗದು ಪಾವತಿ ಪ್ರಮಾಣದಲ್ಲಿ ಶೇಕಡಾ 30ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com