ನಿಷೇಧದ ಸಾಧ್ಯತೆ ತಳ್ಳಿಹಾಕಿದ ತಜ್ಞರು; ಶೇ.20 ರಷ್ಟು ಕುಸಿದಿದ್ದ ಕ್ರಿಪ್ಟೋ ಕರೆನ್ಸಿಯಲ್ಲಿ ಚೇತರಿಕೆ

ಕ್ರಿಪ್ಟೋ ಕರೆನ್ಸಿಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ನಿಷೇಧಗೊಳಿಸುವ ಸಾಧ್ಯತೆ ಇದೆ ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಶೇ.20 ರಷ್ಟು ಕುಸಿತ ದಾಖಲಿಸಿತ್ತು. 
ಬಿಟ್ ಕಾಯಿನ್ (ಸಾಂಕೇತಿಕ ಚಿತ್ರ)
ಬಿಟ್ ಕಾಯಿನ್ (ಸಾಂಕೇತಿಕ ಚಿತ್ರ)

ನವದೆಹಲಿ: ಕ್ರಿಪ್ಟೋ ಕರೆನ್ಸಿಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ನಿಷೇಧಗೊಳಿಸುವ ಸಾಧ್ಯತೆ ಇದೆ ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಶೇ.20 ರಷ್ಟು ಕುಸಿತ ದಾಖಲಿಸಿತ್ತು. 

ನ.24 ರ ಬೆಳಿಗ್ಗೆಯ ವಹಿವಾಟಿನಲ್ಲಿ ಈ ಕುಸಿತ ದಾಖಲಾಗಿತ್ತು. ಜನಪ್ರಿಯ ಕ್ರಿಪ್ಟೋ ಕರೆನ್ಸಿಗಳು 24 ಗಂಟೆಗಳ ಹಿಂದೆ ಹೊಂದಿದ್ದ ಮೌಲ್ಯಕ್ಕಿಂತಲೂ ಶೇ.8-12 ರಷ್ಟು ಕುಸಿತ ಕಂಡಿದೆ. 

ಈ ಸುದ್ದಿಗಳು ಹರಡುವುದಕ್ಕೂ 24 ಗಂಟೆಗಳ ಮುನ್ನ ಬಿಟ್ ಕಾಯಿನ್ ಗೆ ಇದ್ದ ಮೌಲ್ಯ ನಿಷೇಧದ ಸುದ್ದಿ ಹರಡಿದ ಬೆನ್ನಲ್ಲೇ ಸುಮಾರು 5 ಲಕ್ಷ ಅಥವಾ ಶೇ.12 ರಷ್ಟು ಕುಸಿತ ದಾಖಲಿಸಿದೆ. 

ಸುಮಾರು 40 ಲಕ್ಷ ರೂಪಾಯಿಗಳ ವಹಿವಾಟಿನಲ್ಲಿದ್ದ ಬಿಟ್ ಕಾಯಿನ್ 34.23 ಲಕ್ಷಕ್ಕೆ ಕುಸಿದಿತ್ತು. ಆದರೆ ಆರ್ಥಿಕ ತಜ್ಞರು ನಿಷೇಧದ ಸಾಧ್ಯತೆಯನ್ನು ತಳ್ಳಿಹಾಕಿದ ಬೆನ್ನೆಲ್ಲೇ ಚೇತರಿಕೆ ಕಂಡಿದ್ದು 40 ಲಕ್ಷಕ್ಕೆ ಮರಳಿದೆ. 

ಮತ್ತೊಂದು ಕ್ರಿಪ್ಟೋಕರೆನ್ಸಿ ಎಥೆರಿಯಮ್ ನ ಮೌಲ್ಯ 3 ಲಕ್ಷಗಳಷ್ಟು ಅಥವಾ ಶೇ.9 ರಷ್ಟು ಕುಸಿತ ಕಂಡಿದ್ದರೆ, ಶೀಬಾ ಇನು ಶೇ.19 ರಷ್ಟು ಕುಸಿದಿತ್ತು. 

ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಕ್ರಿಪ್ಟೋಕರೆನ್ಸಿ ಮಸೂದೆಯನ್ನು ಜಾರಿಗೊಳಿಸುತ್ತಿದೆ. ಕ್ರಿಪ್ಟೋ ಕರೆನ್ಸಿಗೆ ಚೌಕಟ್ಟು ವಿಧಿಸಿ, ಆರ್ ಬಿಐ ನಿಂದಲೇ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. 

ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಈ ಸುದ್ದಿ ಹೂಡಿಕೆದಾರರಲ್ಲಿ ಆತಂಕ ಮೂಡಿಸಿ ಕ್ರಿಪ್ಟೋಕರೆನ್ಸಿ ಮೌಲ್ಯ ಮಾರುಕಟ್ಟೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿತ್ತು. ಖಾಸಗಿ ಕ್ರಿಪ್ಟೋ ಕರೆನ್ಸಿಗೆ ಸೂಕ್ತ, ಸ್ಪಷ್ಟವಾದ ವ್ಯಾಖ್ಯಾನ ಇಲ್ಲ, ಎನ್ನುತ್ತಾರೆ ದೇಶದ ಹಳೆಯ ಬಿಟ್ ಕಾಯಿನ್ ವಹಿವಾಟು ವೇದಿಕೆಯಾದ ಯೂನೋಕಾಯಿನ್ ನ ಸ್ಥಾಪಕ, ಸಿಇಒ ಸಾತ್ವಿಕ್ ವಿಶ್ವನಾಥ್ 

ಆರ್ಥಿಕ ವ್ಯವಹಾರಗಳ ಇಲಾಖೆಯ ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಮಾತನಾಡಿದ್ದು, ಮಸೂದೆಯ ಅಂಶಗಳನ್ನು ಸಾರ್ವಜನಿಕ ಡೊಮೇನ್ ಗೆ ಹಾಕಲಾಗಿದೆ. ಮಸೂದೆಯನ್ನಲ್ಲ. ಸಮಸ್ಯೆಗಳನ್ನು ತಪ್ಪಿಸಲು ಹೋಗಿ ಒಳ್ಳೆಯದನ್ನೂ ತಪ್ಪಿಸುವಂತೆ ಆಗದಿರುವುದರತ್ತ ಗಮನ ಹರಿಸುವುದು ಸರ್ಕಾರಕ್ಕೆ ಸವಾಲಿನ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಕ್ರಿಪ್ಟೋ ಕರೆನ್ಸಿಗಳು ಕರೆನ್ಸಿಯಾಗಿಯಷ್ಟೇ ಕಾರ್ಯನಿರ್ವಹಣೆ ಮಾಡುವುದು ಅಥವಾ ಸೇವೆಗಳನ್ನು ಒದಗಿಸುವುದಿಲ್ಲ. ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಿದರೆ ನೀವು ನಿಖರವಾಗಿ ಏನನ್ನು ನಿಷೇಧಿಸುತ್ತಿದ್ದೀರಿ? ಎಂದು ಪ್ರಶ್ನಿಸುತ್ತಾರೆ ಗರ್ಗ್. ಭಾರತ 100 ಮಿಲಿಯನ್ ಹೂಡಿಕೆದಾರರೊಂದಿಗೆ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಪ್ರಮುಖ ಮಾರುಕಟ್ಟೆಯಾಗಿದೆ. 

ಎಲ್ಲಾ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು, ಸರ್ಕಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ “ದಿ ಕ್ರಿಪ್ಟೋಕರೆನ್ಸಿ ಆಂಡ್ ರೆಗ್ಯುಲೇಷನ್ ಆಫ್ ಆಫಿಸಿಯಲ್ ಡಿಜಿಟಲ್ ಕರೆನ್ಸಿ ಬಿಲ್, 2021” ಜಾರಿಗೆ ತರಲು ತಯಾರಿ ನಡೆಸಿದೆ. ಖಾಸಗಿ ಕ್ರಿಪ್ಟೋಕರೆನ್ಸಿ ಬದಲಾಗಿ ಆರ್ ಬಿ ಐ ನಿಯಂತ್ರಣದ ಡಿಜಿಟಲ್ ಕರೆನ್ಸಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಮುಂದಿನ ವರ್ಷದಿಂದ ಈ ಹೊಸ ಸ್ವರೂಪದ ಕ್ರಿಪ್ಟೋಕರೆನ್ಸಿ ಜಾರಿಗೆ ಬರುವ ಸಾಧ್ಯತೆ ಇದೆ.

ಅಪಾಯದ ಕಾರಣ ಎಚ್ಚರಿಕೆ

ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಕರೆನ್ಸಿಗಳು ಸಾಕಷ್ಟು ಏರಿಳಿತಗೊಳ್ಳುತ್ತವೆ. ಇದರಿಂದ ಸಾಕಷ್ಟು ಅಪಾಯ ಇರುವುದರಿಂದ ಕೇಂದ್ರ ಸರ್ಕಾರ ಈ ಕ್ರಮಕೈಗೊಳ್ಳಲು ಮುಂದಾಗಿದೆ. ಕಳೆದ “ಸಿಡ್ನಿ ಡೈಲಾಗ್” ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕ್ರಿಪ್ಟೋ ಕರೆನ್ಸಿಯಿಂದಾಗಿ ಯುವಕರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆಂದು ಹೇಳುವ ಮೂಲಕ ವಿಶ್ವದ ರಾಷ್ಟ್ರಗಳನ್ನು ಎಚ್ಚರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com