ಬ್ಲಾಕ್ ಚೈನ್ ಆಧಾರಿತ ಬಿಟ್ ಕಾಯಿನ್ ಹ್ಯಾಕ್ ಮಾಡುವುದು ಟ್ವೀಟ್ ಮಾಡಿದಷ್ಟು ಸುಲಭವೇ? (ಹಣಕ್ಲಾಸು)

ಹಣಕ್ಲಾಸು-284-ರಂಗಸ್ವಾಮಿ ಮೂಕನಹಳ್ಳಿ
ಬ್ಲಾಕ್ ಚೈನ್ ಆಧಾರಿತ ಬಿಟ್ ಕಾಯಿನ್ (ಸಾಂಕೇತಿಕ ಚಿತ್ರ)
ಬ್ಲಾಕ್ ಚೈನ್ ಆಧಾರಿತ ಬಿಟ್ ಕಾಯಿನ್ (ಸಾಂಕೇತಿಕ ಚಿತ್ರ)

ಕರ್ನಾಟಕದಲ್ಲಿ ಬಿಟ್ ಕಾಯಿನ್ ಏಕೆ ಸದ್ದು ಮಾಡುತ್ತಿದೆ ಎನ್ನುವ ಪ್ರಶ್ನೆ ಬಹಳಷ್ಟು ಜನರ ಮನಸ್ಸಿನಲ್ಲಿ ಉದ್ಭವಿಸಿರುತ್ತದೆ. ಹಲವು ಮೂಲಗಳಿಂದ ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನ ಕೂಡ ತಿಳಿದುಕೊಂಡಿರುತ್ತಾರೆ. ಇದಕ್ಕೆ ಇನ್ನಷ್ಟು ಹೊಸ ಹೊಳಹುಗಳನ್ನ ನೀಡುವ ಪ್ರಯತ್ನವನ್ನ ಇಂದಿನ ಹಣಕ್ಲಾಸು ಅಂಕಣದಲ್ಲಿ ನೋಡೋಣ.

ನಮ್ಮ ಸಮಾಜದಲ್ಲಿ ಎಂತಹ ಮಟ್ಟದ ನಿರ್ಲಜ್ಜತೆ ಮನೆ ಮಾಡಿದೆ ಎನ್ನುವುದಕ್ಕೆ ಕಳೆದ ವಾರ ಒಬ್ಬರಿಂದ ಒಬ್ಬರಿಗೆ ವಾಟ್ಸಪ್ ಮೂಲಕ ಹರಿದಾಡಿದ ಒಂದು ಸಂದೇಶದ ಉದಾಹರಣೆಯನ್ನ ನೀಡುತ್ತೇನೆ. "ಬಸ್ ನಲ್ಲಿ ಕಂಡಕ್ಟರ್ ಬಾಕಿ ಕೊಡದೆ ಇದ್ದಾಗ ಅವನಿಗೆ ಬಿಟ್ಟು ಬರುವ ಕಾಯಿನ್ ನ್ನ ಬಿಟ್ ಕಾಯಿನ್ ಎನ್ನುತ್ತಾರೆ ಎನ್ನುವ ಸಂದೇಶವನ್ನ ಎಲ್ಲರೂ ಎಗ್ಗಿಲ್ಲದೆ ಹಂಚಿಕೊಂಡರು. ಅದು ಜೋಕ್ ಅನ್ನಿಸಿಕೊಂಡಿತು. ನಮ್ಮದೇ ಹಣವನ್ನ ಯಾರೋ ಒಬ್ಬರು ಲೂಟಿ ಮಾಡುತ್ತಿದ್ದಾರೆ, ಇದೇನಿದು? ಹೇಗೆ ಸಾಧ್ಯ? ಎನ್ನುವ ಕೌತುಕ ಮಾತ್ರ ಕಂಡದ್ದು ಕಡಿಮೆ. ಉಳಿದಂತೆ ನಕ್ಕು ಹಗುರಾಗಲು ಇದೊಂದು ದಾರಿಯಾಯ್ತು. ನಾವು ಜ್ಞಾನವನ್ನ ವೃದ್ಧಿಸಿಕೊಳ್ಳದೆ ಹೋದರೆ ನಮ್ಮ ಇಂದಿನ ನಗು ನಮಗೆ ಮುಳ್ಳಾಗಬಹುದು. ಇರಲಿ.

ಬಿಟ್ ಕಾಯಿನ್ ಎಂದರೇನು?

ಬಿಟ್ ಕಾಯಿನ್ ಎನ್ನುವುದು ಡಿಜಿಟಲ್ ಕರೆನ್ಸಿ. ಇದು ಪ್ರಿಂಟ್ ರೂಪದಲ್ಲಿ ಇರುವುದಿಲ್ಲ. ಇದು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ ಇರುತ್ತದೆ. ಪ್ರತಿ ವ್ಯಕ್ತಿಯ ಹೆಸರಿನಲ್ಲಿ ಒಂದು ರನ್ನಿಂಗ್ ಲೆಡ್ಜೆರ್ ಅಕೌಂಟ್ ಇರುತ್ತೆ, ಬ್ಯಾಲೆನ್ಸ್, ತೆಗೆದ ಹಣ, ಹೂಡಿದ ಹಣ ನಂತರ ಉಳಿದ ಮೊತ್ತ, ಹೀಗೆ ಸಾಗುತ್ತಲೇ ಇರುತ್ತೆ, ಮೊದಲೇ ಹೇಳಿದ ಹಾಗೆ ಇದು ಕಂಪ್ಯೂಟರ್ ಪರದೆ ಮೇಲೆ ಕಾಣುವ ಸಂಖ್ಯೆಗಳು ಅಷ್ಟೇ.

ಮಧ್ಯವರ್ತಿಗಳ ತೆಗೆದು ಹಾಕಲು ಸಹಾಯಕ ಈ ಡಿಜಿಟಲ್ ಕರೆನ್ಸಿ!

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಹಣಕಾಸು ವಿಷಯದಲ್ಲಿ ನಂಬುವುದು ಹೇಗೆ? ನಮ್ಮ ಈ ನಂಬಿಕೆಯ ಕೊರತೆ ಬ್ಯಾಂಕ್ಗಳ ಉಗಮಕ್ಕೆ ಕಾರಣ, ಮಧ್ಯವರ್ತಿಯಂತೆ ವ್ಯವಹರಿಸುವ ಈ ಬ್ಯಾಂಕ್ಗಳು ಈ ಕ್ರಿಯೆಯಿಂದ ವರ್ಷದಲ್ಲಿ ಸಾವಿರಾರು ಕೋಟಿ ಹಣ ಗಳಿಸುತ್ತವೆ. ಇದಿಷ್ಟೂ ದೇಶಿಯ ವ್ಯವಹಾರಗಳ ಮಾತಾಯಿತು, ಅಂತರರಾಷ್ಟ್ರೀಯ ವ್ಯವಹಾರ ಮತ್ತೊಂದು ಬಗೆಯದು, ಇಲ್ಲಿಯೂ ಬ್ಯಾಂಕ್ಗಳು ಮಧ್ಯೆ ಇದ್ದೇ ಇವೆ. ಸಾಲದಕ್ಕೆ ವಿನಿಮಯ ದರ ಬೇರೆ.  ಭಾರತೀಯ ರುಪಾಯಿ ಅಮೆರಿಕಾದ ಡಾಲರ್, ಯೂರೋಪಿನ ಯುರೋ, ಜಪಾನೀ ಯೆನ್, ಹೀಗೆ ಹಲವು ದೇಶಗಳ ಹಣದ ಮುಂದೆ ಪ್ರತಿನಿತ್ಯ, ಪ್ರತಿ ಘಳಿಗೆ ವಿನಿಮಯ ಬದಲಾಗುತ್ತಲೆ ಇರುತ್ತದೆ. ಹೀಗಾಗಿ ಬದಲಾದ ವಿನಿಮಯ ದರದಲ್ಲಿ ವ್ಯಕ್ತಿ ಲಾಭ ಅಥವಾ ನಷ್ಟ ಹೊಂದುತ್ತಾನೆ.  

ಇಷ್ಟೇ ಅಲ್ಲದೆ ಅಂತರರಾಷ್ಟೀಯ ವ್ಯವಹಾರಗಳಿಗೆ RBI ಅನುಮತಿ ಬೇಕು, ನಮ್ಮ ದೇಶದ ಕಾನೂನು, ಬ್ಯಾಂಕ್ ಗಳ ಅಸಂಖ್ಯ ನಿಯಮಗಳು ಒಂದೇ, ಎರಡೇ, ನೂರಾರು ಮಂದಿಯ ಅಪ್ಪಣೆ , ಅನುಮತಿ ಪಡೆಯದೆ ಮೇಲೆ ಹೇಳಿದ ಟ್ರಾನ್ಸ್ಆಕ್ಷನ್ ನಡೆಯಲು ಸಾಧ್ಯವಿಲ್ಲ. ಅಲ್ಲದೆ ನಿಮ್ಮ ಖಾತೆಯಲ್ಲಿ 1000 ರುಪಾಯಿ ಇದ್ದು, ನೀವು ಚೆಕ್ ಇಬ್ಬರಿಗೆ ತಲಾ 1000 ರುಪಾಯಿ ಚೆಕ್ ವಿತರಿಸಿದರೆ, ಬ್ಯಾಂಕ್ ಮೊದಲು ಬಂದ ಚೆಕ್ ಮಾನ್ಯತೆ  ಮಾಡಿ ತಸು ತಡವಾಗಿ ಬಂದ ಚೆಕನ್ನು ಹಣವಿಲ್ಲ ಎಂದು ಹಿಂತಿರುಗಿ ಕಳಿಸಲಾಗುತ್ತೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನಿಮಗೆ ನಿಮ್ಮ ಬ್ಯಾಂಕ್ ಬಿಟ್ಟು ಮೂರನೇ ವ್ಯಕ್ತಿಗೆ ಗೊತ್ತಿಲ್ಲ! ನಿಮ್ಮೊಂದಿಗೆ ವ್ಯವಹಾರ ಮಾಡುವ ವ್ಯಕ್ತಿಗಳಿಗೆ ನಿಮ್ಮ ನಿಖರ ಅರ್ಥಿಕ ಬಲ ತಿಳಿಯುವುದು ಕಷ್ಟವೇ ಸರಿ! ನಿಮ್ಮ ಅರ್ಥಿಕ ಸದೃಢತೆಯ ಪ್ರಮಾಣಪತ್ರ ಕೊಡಲು ಸಂಸ್ಥೆಗಳು ಬೇರೆ!!  ಹೀಗೆ ಒಂದಕ್ಕೆ ಒಂದು ಮಧ್ಯವರ್ತಿಗಳ ಸಂತೆ ನಮ್ಮ ಸಮಾಜ.

ಹೇಗೆ ಹಣ ಎಂದಾಕ್ಷಣ ರೂಪಾಯಿ, ಡಾಲರ್, ಯೆನ್, ಪೌಂಡ್ ಎನ್ನುತ್ತೇವೆ. ಹಾಗೆಯೇ ಇಲ್ಲಿ ಕೂಡ ಮುಂಬರುವ ದಿನಗಳಲ್ಲಿ ಪ್ರತಿ ದೇಶವೂ ತನ್ನದೇ ಆದ ಕ್ರಿಪ್ಟೋ ಕರೆನ್ಸಿ ಹೊಂದಲೇ ಬೇಕಾಗುತ್ತದೆ.  ಬಿಟ್ಕಾಯಿನ್ ಎನ್ನುವುದು ಸದ್ಯದ ಮಟ್ಟಿಗೆ ಹೆಚ್ಚು ಪ್ರಸಿದ್ಧ ಕ್ರಿಪ್ಟೋ ಕರೆನ್ಸಿ. ನಿಮ್ಮ ಹಣ ನಿಮಗೆ ಬೇಕಾದಾಗ ಬೇಕಾದವರಿಗೆ ಯಾವುದೇ ಮಧ್ಯವರ್ತಿಯ, ಯಾವುದೇ ಸರಕಾರದ ಅನುಮತಿಯ ಹಂಗಿಲ್ಲದೆ ಕ್ಷಣಾರ್ಧದಲ್ಲಿ ಕಳಿಸಬಹುದು,  ಪಡೆದವ ಅದನ್ನು ಮರುಗಳಿಗೆ ಬಳಸಬಹುದು ,ಇಂತಹ ಪರಿಕಲ್ಪನೆ ಬಂದದ್ದು ಸಂತೋಷಿ ನಕಮೊಟೋ ಎನ್ನುವ ವ್ಯಕ್ತಿಗೆ,  ಈತನ ಇರುವಿಕೆ, ಇತರ ವಿಷಯಗಳು ಗೌಪ್ಯ.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ನಿಮ್ಮ ಮಾಹಿತಿ ಕೊಟ್ಟು ನೊಂದಾಯಿಸಿದ ತಕ್ಷಣ ನಿಮಗೆ ಒಂದು ಪಬ್ಲಿಕ್ ಲೆಡ್ಜರ್ ತೆಗೆಯಲಾಗುತ್ತೆ ಇದು ಜಗತ್ತಿನ ವಿವಿಧ ಭಾಗಗಳಲ್ಲಿ ಯಾರು ಬೇಕಾದರೂ ನೋಡಬಹುದು, ನೀವು ಮಾಡುವ ವಹಿವಾಟು ಒಂದರ ನಂತರ ಒಂದು ಕೊಂಡಿಯಂತೆ ನೋಂದಾಯಿಸಲ್ಪಡುತ್ತದೆ, ಇದಕ್ಕೆ ಬ್ಲಾಕ್ ಚೈನ್ ಎನ್ನುತ್ತಾರೆ, ನಿಮ್ಮ ಬ್ಯಾಲೆನ್ಸ್ ಎಷ್ಟು ಎನ್ನುವುದ ತೋರಿಸುತ್ತೆ. ಟ್ರಾನ್ಸ್ ಆಕ್ಷನ್ ನೀವೇ ಮಾಡಿದ್ದು ಎಂದು ತಿಳಿಯಲು ಪ್ರತಿ ವಹಿವಾಟಿಗೆ ಪ್ರೈವೇಟ್ ಕೀ ನಿಗದಿ ಮಾಡಲಾಗುತ್ತೆ, ನಿಮ್ಮ ಸಹಿ ಡಿಜಿಟಲ್ ವೆರಿಫೈಡ್  ಆಗಿರುತ್ತೆ, ಇಷ್ಟೆಲ್ಲಾ ಏಕೆಂದರೆ ಒಮ್ಮೆ ಬಿಟ್ ಕಾಯಿನ್ ಬಳಸಿ ಮಾಡಿದ ಕೊಡು-ಕೊಳ್ಳುವಿಕೆ ಏನೇ ಮಾಡಿದರು ತಿದ್ದಲು ಬರುವುದಿಲ್ಲ, ಒಮ್ಮೆ ತಪ್ಪಾದರೆ ಮುಗಿಯಿತು, ಅಂದರೆ ರಾಮನ ಬದಲು ಲಕ್ಷ್ಮಣನಿಗೆ ಹಣ ತಲುಪಿದರೆ, ತಪ್ಪು ತಿದ್ದಲು ಇಲ್ಲಿ  ಅವಕಾಶವಿಲ್ಲ, ಲಕ್ಷ್ಮಣನನ್ನ ಖುದ್ದು ಬೇಟಿ ಮಾಡಿ ಹಣ ಪಡೆಯಬೇಕಷ್ಟೇ. ಇದನ್ನು ಯಾರಿಗಾದರೂ ನೀವು ಪಡೆದ ಸೇವೆಯ ಮೌಲ್ಯ ಕೊಡಲು ಬಳಸಿದಲ್ಲಿ ಟ್ರಾನ್ಸಾಕ್ಷನ್  ಸರಿ ಎಂದು ಒಪ್ಪಿಗೆ ಕೊಡುವ ವಿಧಾನಕ್ಕೆ ಮೈನಿಂಗ್ ಎನ್ನುತ್ತಾರೆ, ಇದಕ್ಕೆ ಸಾವಿರಾರು ಕಂಪ್ಯೂಟರ್ ಇಟ್ಟು ಸೇವೆ ನೀಡಲು ಐ.ಟಿ ಕಂಪನಿಗಳು ಬೇಕಾಗುತ್ತವೆ. ಬ್ಯಾಂಕ್ ಬದಲು ಮೈನಿಂಗ್ ಕಂಪನಿಗಳು ಬರುತ್ತವೆ.

ಕರ್ನಾಟಕದಲ್ಲೇಕೆ ಬಿಟ್ ಕಾಯಿನ್ ಸದ್ದು ಮಾಡುತ್ತಿದೆ?

31 ಬಿಟ್ ಕಾಯಿನ್ ಕಳುವಾಗಿದೆ ಎನ್ನುವ ವಿಷಯ ಬಹಿರಂಗಗೊಂಡು, ಪೊಲೀಸರು ತಾವು ಶ್ರೀಗಂಧದ ಮರವನ್ನ ಜಫ್ತಿ ಮಾಡಿದೆವು ಎನ್ನುವ ಹಳೆಯ ರೀತಿಯಲ್ಲಿ ಮೀಡಿಯಾ ಮುಂದೆ ಪೋಸು ಕೊಟ್ಟರು. ಅದೆಲ್ಲಿದೆ ? ಜಫ್ತಿ ಮಾಡಿರುವುದು ನಿಜವಾದರೆ ಅದನ್ನ ತೋರಿಸಿ ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿದರು. ಕಣ್ಣಿಗೆ ಕಾಣದ ಹಣವನ್ನ ತೋರಿಸುವುದಾದರೂ ಹೇಗೆ? ನಿಮಗೆ ನೆನಪಿರಲಿ ಇದು ಕೇವಲ ಡಿಜಿಟಲ್ ಹಣ. ಇಂತಹ ಹಣ ತೋರಿಸಲು ಸಾಧ್ಯವಿಲ್ಲ ಎನ್ನುವುದಾದರೆ ಅದರ ಪಾಸ್ ವರ್ಡ್ ಇತರ ಮಾಹಿತಿಗಳು ಕೇವಲ ಒಬ್ಬ ಆಪಾದಿತ ವ್ಯಕ್ತಿಗೆ ಮಾತ್ರ ಗೊತ್ತಿರುತ್ತದೆ, ಹೀಗಾಗಿ ಅವನ ಜೀವಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುವ ಮಾತನ್ನ ಕೂಡ ಮಾಜಿ ಮುಖ್ಯಮಂತ್ರಿ ಆಡಿದ್ದಾರೆ. ಇನ್ನು ಅದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ' ಇದನ್ನ ದೊಡ್ಡ ವ್ಯಕ್ತಿಯೊಬ್ಬರ ದೊಡ್ಡ ಅಹಂಭಾವವನ್ನ ಮುಚ್ಚಿಡಲು ನಡೆದಿರುವ ಪ್ರಯತ್ನ' ಎಂದು ಟ್ವೀಟ್ ಮಾಡಿದ್ದಾರೆ. ಈಗಿನ ಮುಖ್ಯಮಂತ್ರಿ ಅವರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಅಪವಾದ ಕೂಡ ಕೇಳಿಬರುತ್ತಿದೆ. ಹೀಗೆ ಇದು ರಾಜಕೀಯ ರೂಪ ಪಡೆದುಕೊಂಡ ಕಾರಣ ಕರ್ನಾಟಕದಲ್ಲಿ ಸದ್ದು ಮಾಡುತ್ತಿದೆ.

ಇದೆಲ್ಲ ಸರಿ ಮಾಧ್ಯಮಗಳು ಮತ್ತು ಆಪಾದಿತ ಹೇಳುವಂತೆ ಇಂತಹ ಹಣವನ್ನ ಹ್ಯಾಕ್ ಮಾಡುವುದು ಸಾಧ್ಯವೇ ?

ಬಿಟ್ ಕಾಯಿನ್ ಅಥವಾ ಇನ್ಯಾವುದೇ ಕ್ರಿಪ್ಟೊ ಕರೆನ್ಸಿಯ ನೆಟ್ವರ್ಕ್ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ. ಇದು ಹ್ಯಾಕ್ ಮಾಡಲು ಕಷ್ಟಸಾಧ್ಯ.  ಇಲ್ಲಿನ ಎಲ್ಲಾ ಮಾಹಿತಿಯನ್ನ ಕೇವಲ ಒಂದು ಮುಖ್ಯ ಸರ್ವರ್‌ನಲ್ಲಿ ಸಂಗ್ರಹಿಸಲಾಗುವುದಿಲ್ಲ. ಅಂದರೆ ಕಂಪ್ಯೂಟರ್‌ಗಳ ಬೃಹತ್ ನೆಟ್‌ವರ್ಕ್‌ ಮೂಲಕ ದಾಖಲೆಗಳು ನಿಖರವಾಗಿದೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸುತ್ತದೆ.

ಇನ್ನು ಸರಳವಾಗಿ ಹೇಳಬೇಕೆಂದರೆ ಇಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಂಪ್ಯೂಟರ್ ಗಳನ್ನ ಸರ್ವರ್ ಎಂದು ಪರಿಗಣಿಸಲಾಗುವುದು. ಹೀಗಾಗಿ ಹ್ಯಾಕ್ ಮಾಡುವುದು ಟ್ವೀಟ್ ಮಾಡಿದಷ್ಟು ಸಲುಭವಲ್ಲ. ಹಾಗೊಮ್ಮೆ ಹ್ಯಾಕ್ ಮಾಡಬೇಕಾದರೆ ಒಂದಲ್ಲ, ಎರಡಲ್ಲ, ನೂರಾರು, ಸಾವಿರಾರು ಕಂಪ್ಯೂಟರ್ ಗಳನ್ನ ಹ್ಯಾಕ್ ಮಾಡಬೇಕಾಗುತ್ತದೆ. ಹೀಗಾಗಿ ಇಂದು ಕರ್ನಾಟಕದಲ್ಲಿ ಬಿಟ್ ಕಾಯಿನ್ ಕಳುವಾಗಿದೆ ಎಂದು ಕೇಳಿಬರುತ್ತಿರುವ ಕೂಗು ಶುದ್ಧ ಸುಳ್ಳು. ನಿಮಗೆಲ್ಲಾ ನೆನಪಿರಲಿ ಇಲ್ಲಿಯವರೆಗೆ ಯಾರೊಬ್ಬರೂ ಕೂಡ ಕ್ರಿಪ್ಟೋ ಹಣವನ್ನ ಹ್ಯಾಕ್ ಮಾಡುವುದರಲ್ಲಿ ಸಫಲರಾಗಿಲ್ಲ.

ಗಮನಿಸಿ, ಕಳುವು ಆಗಿರುವುದನ್ನ ಅಲ್ಲಗಳೆಯಲು ಕೂಡ ಸಾಧ್ಯವಿಲ್ಲ. ಇದೇನಿದು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದ ಮೇಲೆ ಇದು ಹೇಗೆ ಸಾಧ್ಯ? ಹೌದು ಗಮನಿಸಿ ನಿಮ್ಮ ಪಾಸ್ವರ್ಡ್ ಯಾರಾದರೂ ಕದ್ದರೆ, ನಂತರ ಅದನ್ನ ಬಳಸಿ ಈ ಕ್ರಿಪ್ಟೋ ಹಣವನ್ನ ಲಪಟಾಯಿಸಲು ಸಾಧ್ಯವಿದೆ. ಹ್ಯಾಕ್ ಮಾಡುವುದು ಇಲ್ಲಿಯವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.

ಕೊನೆ ಮಾತು: ಕರ್ನಾಟಕದಲ್ಲಿ ಬಿಟ್ ಕಾಯಿನ್ ಸುದ್ದಿ ಶುದ್ಧ ರಾಜಕೀಯ ರೂಪ ಪಡೆದಿದೆ. ಕಾಂಗ್ರೆಸ್ ನವರು ಬಿಜೆಪಿಯ ಮೇಲೆ ಆರೋಪವನ್ನ ಹೊರಿಸುತ್ತಿದ್ದಾರೆ. ಬಿಜೆಪಿಯವರು ಏನಾದರೂ ಸುಳಿವು ಕೊಟ್ಟರೆ ನಾವು ಆ ಬಗ್ಗೆ ಏನಾದರೂ ಮಾಡಲು ಸಾಧ್ಯ ಎನ್ನುವ ಮಾತನ್ನ ಆಡುತ್ತಿದ್ದಾರೆ. ಜನ ಸಾಮಾನ್ಯನಿಗೆ ಇದೆಲ್ಲವೂ ಒಂದು ಮನರಂಜನೆಯಾಗಿದೆ. ನಾಳಿನ ಬದುಕಿನ ದಾರುಣತೆಯನ್ನ ಅರಿಯಲಾಗದ ಜನರು ಬಿಟ್ಟು ಬಂದ ಕಾಯಿನ್ ಇಸ್ ಈಕ್ವಲ್ ಟು ಬಿಟ್ ಕಾಯಿನ್ ಎನ್ನವಂತೆ ಮಾತನಾಡುತ್ತಿದ್ದಾರೆ. ಇವತ್ತಲ್ಲ ನಾಳೆ ತಾವು ಒಪ್ಪಿಕೊಳ್ಳಬೇಕಾದ, ಅಪ್ಪಿಕೊಳ್ಳಬೇಕಾದ ಒಂದು ವ್ಯವಸ್ಥೆಯ ಬಗ್ಗೆ ಜನ ಸಾಮಾನ್ಯನ ನಿಲುವು ಮಾತ್ರ ಅಚ್ಚರಿ ಹುಟ್ಟಿಸುತ್ತದೆ. ಎಚ್ಚೆತ್ತುಕೊಳ್ಳದಿದ್ದರೆ ಇಂದಲ್ಲ ನಾಳೆ ಎಲ್ಲರೂ ಇದಕ್ಕೆ ಬೆಲೆ ತೆರಬೇಕಾಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com