ಕ್ರಿಪ್ಟೋ ಜಗತ್ತು ಪ್ರವೇಶಿಸುವ ಮುಂಚೆ ಇರಲಿ ಎಚ್ಚರ!

ಹಣಕ್ಲಾಸು-260-ರಂಗಸ್ವಾಮಿ ಮೂಕನಹಳ್ಳಿ 
ಕ್ರಿಪ್ಟೋ ಕರೆನ್ಸಿ
ಕ್ರಿಪ್ಟೋ ಕರೆನ್ಸಿ

ವಿಘ್ನೇಶ್ ಸುಂದರೇಶನ್ ಇವತ್ತಿಗೆ ಮೆಟಾಕೋವನ್ ಎನ್ನುವ ಹೆಸರಿನಿಂದ ಜನಪ್ರಿಯರಾಗಿರುವ ಕೋಡರ್, ಬ್ಲಾಕ್ ಚೈನ್ ಉದ್ಯಮಿ. ಡಿಜಿಟಲ್ ಆರ್ಟ್ ಒಂದನ್ನ ಬರೋಬ್ಬರಿ 69.3 ಮಿಲಿಯನ್ ಡಾಲರ್ ಕೊಟ್ಟು ಹರಾಜಿನಲ್ಲಿ ಕೊಂಡಿದ್ದಾರೆ ಎನ್ನುವುದು ಕ್ರಿಪ್ಟೋ ಜಗತ್ತಿನಲ್ಲಿ ಕೇಳಿ ಬರುತ್ತಿರುವ ಗುಸುಗುಸು. 

ಇದು ನಿಜವಿರಬಹುದು ಅಥವಾ ಸುಳ್ಳು. ಆದರೆ ಈತ ಕ್ರಿಪ್ಟೋ ಸ್ಟೋರಿ ಟೆಲ್ಲರ್ಸ್ ಗಳಿಗೆ ಸಹಾಯಧನ ಎಂದು 5 ಲಕ್ಷ ಡಾಲರ್ ಘೋಷಣೆ ಮಾಡಿರುವುದು ಮಾತ್ರ ಸುಳ್ಳಲ್ಲ. ಇವತ್ತಿಗೆ ಸಿಂಗಪೂರ್ ನಲ್ಲಿ ತನ್ನ ಸಂಸ್ಥೆಯನ್ನ ತೆರೆದು ಕೋಟ್ಯಂತರ ಹಣವನ್ನ ಸಂಪಾದಿಸಿರುವ ವಿಘ್ನೇಶ್ ಬಳಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಅದರ ಕೋಡಿಂಗ್ ಕಲಿಯಲು ಬೇಕಾಗುವ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಕೂಡ ಇರಲಿಲ್ಲ. ಸ್ನೇಹಿತರು ರಾತ್ರಿ ನಿದ್ದೆ ಮಾಡುವಾಗ ಅವರು ಬಳಸದೆ ಇರುವ ಲ್ಯಾಪ್ ಟಾಪ್ ಕೇಳಿ ಪಡೆದು ಅಲ್ಲಿಂದ ಕಲಿತು ಇಂದಿನ ಮಟ್ಟಕ್ಕೆ ಏರುವ ಮುನ್ನ ಈತ ಹೊಸತೇನಾದರೂ ಮಾಡಬೇಕು ಎನ್ನುವ ತುಡಿತದಲ್ಲಿ 54 ವೆಬ್ಸೈಟ್ ನಿರ್ಮಿಸುತ್ತಾರೆ. ಅವೆಲ್ಲಾ ಒಂದಲ್ಲ ಒಂದು ಬಿಸಿನೆಸ್ ಐಡಿಯಾಗಳು ಅವೆಲ್ಲವೂ ಹೀನಾಯವಾಗಿ ಸೋಲನ್ನ ಕಾಣುತ್ತವೆ. ವಿಘ್ನೇಶ್ ಪಾಲಿಗೆ ಮಾತ್ರ ಅವು ಕಮರ್ಷಿಯಲ್ ಯಶಸ್ಸು ಕಾಣುವಲ್ಲಿ ಸೋತವು ಅಷ್ಟೇ. ಹೀಗೆ ಭಾರತದ ತಮಿಳುನಾಡಿನ ಒಬ್ಬ ಯುವಕ ಇಂದಿಗೆ ಇಡೀ ವಿಶ್ವದಲ್ಲಿನ ಕ್ರಿಪ್ಟೋ ಜಗತ್ತಿನಲ್ಲಿ ಮನೆ ಮಾತಾಗಿದ್ದಾನೆ. ಇದು ಕೇವಲ ಒಂದು ಯಶಸ್ಸಿನ ಕಥೆ. ಇಂತಹ ನೂರಾರು ಕಥೆಗಳನ್ನ ನಾನು ನಿಮಗೆ ಹೇಳಬಲ್ಲೆ. ಜಗತ್ತಿನ ವಿವಿಧ ಭಾಗದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಸಾವಿರಾರು ಕೋಟಿ ಹಣದ ಒಡೆಯರಾಗಿದ್ದಾರೆ. ಆಶ್ಚರ್ಯದ ವಿಷಯವೆಂದರೆ ಇವರೆಲ್ಲಾ ನಮ್ಮ ಸಾಮಾನ್ಯ ಜಗತ್ತಿನಲ್ಲಿ ಅನಾಮಧೇಯರು. ನಮ್ಮ ಈ ಜಗತ್ತಿನಲ್ಲಿನಲ್ಲಿ ಆಸ್ತಿ ಮಾಡುವುದು ಕೂಡ ಇವರಿಗೆ ಇಷ್ಟವಿಲ್ಲ. ಇವರದೇನಿದ್ದರೂ ಎಲ್ಲವೂ ಡಿಜಿಟಲ್ ವರ್ಲ್ಡ್, ಡಿಜಿಟಲ್ ಸಾಮ್ರಾಜ್ಯ. ನಮ್ಮ ಕಣ್ಣಿಗೆ ಅಷ್ಟೇನೂ ಅಂದವಾಗಿ ಕಾಣದ ಡಿಜಿಟಲ್ ಚಿತ್ರವೊಂದಕ್ಕೆ 69 ಮಿಲಿಯನ್ ಡಾಲರ್ ಹಣ ಕೊಟ್ಟು ಕೊಳ್ಳುತ್ತಾರೆ ಎಂದರೆ, ಅವರ ಜಗತ್ತು ಬೇರೆ ಎನ್ನುವುದು ತಿಳಿದುಬರುತ್ತದೆ. ಇರಲಿ, ಈ ಲೇಖನದ ಮುಖ್ಯ ಉದ್ದೇಶ ಕ್ರಿಪ್ಟೋ ಕರೆನ್ಸಿ ಉದ್ದಿಮೆದಾದರ ಬಗ್ಗೆಯಲ್ಲ, ಕ್ರಿಪ್ಟೋ ಕರೆನ್ಸಿ ಯಲ್ಲಿ ಹೂಡಿಕೆ ಮಾಡುವುದು ಸರಿಯೇ, ಮಾಡುವುದಾದರೆ ಯಾವ ಸಮಯ ಸರಿ ಇತ್ಯಾದಿ ವಿಷಯಗಳ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿಸುವುದು.

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಎಷ್ಟು ಸರಿ?

ಇದೊಂದು ಅತ್ಯಂತ ಅಪಾಯಕಾರಿ ಹೂಡಿಕೆ ಎನ್ನುವುದು ನನ್ನ ಅಭಿಪ್ರಾಯ. ಕ್ಷಣ ಮಾತ್ರದಲ್ಲಿ ನಿಮ್ಮ ಹಣ ಮಾಯಾವಾಗುವುದನ್ನ ನೋಡುವ ಶಕ್ತಿಯಿದ್ದರೆ ಮಾತ್ರ ಇಲ್ಲಿ ಹೂಡಿಕೆ ಮಾಡಿ ಅದೇನು ಎನ್ನುವುದನ್ನ ನೀವೇ ತಿಳಿದುಕೊಳ್ಳಬಹುದು. ಸದ್ಯದ ಮಟ್ಟಿಗೆ ಕ್ರಿಪ್ಟೋ ವರ್ಲ್ಡ್ ನಲ್ಲಿ ನಿಯಮಗಳಿಲ್ಲ, ಯಾವುದೇ ದೇಶದ ಕಟ್ಟುಪಾಡು, ನಿಬಂಧನೆಗಳಿಲ್ಲ. ಆಟದಲ್ಲಿ ಪಳಗಿದ ವ್ಯಕ್ತಿ ಟೆಕ್ನಾಲಜಿ ಸಹಾಯದಿಂದ ಹ್ಯಾಕ್ ಮಾಡಿ ನಿಮ್ಮ ಕರೆನ್ಸಿಯನ್ನ ಕದಿಯುತ್ತಾರೆ. ಇದು ಅತ್ಯಂತ ಸಾಮಾನ್ಯ ವಿಷಯವಾಗಿ ಹೋಗಿದೆ. ನಿಕೋಲ್, ಪೋರ್ಟ್ಲ್ಯಾಂಡ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆ. ತನ್ನ ಬಿಡುವಿನ ವೇಳೆಯಲ್ಲಿ ತನ್ನ ಮನೆಯ ಗ್ಯಾರೇಜಿನಲ್ಲಿ ಕಂಪ್ಯೂಟರ್ ಅಳವಡಿಸಿಕೊಂಡು ಮೈನಿಂಗ್ ನಲ್ಲಿ ತೊಡಗಿದ್ದರು, 323 ಎತ್ರೆಯಿಮ್ ಟೋಕನ್ ಗಳನ್ನ ಮೈನ್ ಮಾಡಿರುತ್ತಾರೆ. ಹ್ಯಾಕರ್ ಇದನ್ನ ಸುಲಭವಾಗಿ ಕದ್ದು ಬಿಡುತ್ತಾನೆ. ಇದರ ಮೌಲ್ಯ ನಮ್ಮ ಜಗತ್ತಿನಲ್ಲಿ ಒಂದು ಮಿಲಿಯನ್ ಡಾಲರ್ ಮೇಲಿರುತ್ತದೆ. ನಿಕೋಲ್ ಇದರಿಂದ ಬಹಳ ಖಿನ್ನತೆಗೆ ಒಳಗಾಗುತ್ತಾಳೆ. ಇವತ್ತಿಗೆ ಈಕೆ ಕ್ರಿಪ್ಟೋ ಕರೆನ್ಸಿ ಕನ್ಸಲಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವತ್ತಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಮೇಲಿನ ಹೂಡಿಕೆ ಬಗ್ಗೆ ಸಲಹೆ ನೀಡುವರ ಸಂಖ್ಯೆ ಕೂಡ ಬಹಳಷ್ಟಿದೆ. ನಿಮಗೆ ಗೊತ್ತಿರಲಿ ಇವರಿಗೆ ವಿಶೇಷ ಜ್ಞಾನವೇನೂ ಇರುವುದಿಲ್ಲ, ಒಂದಷ್ಟು ವಿಷಯ ಮಾಹಿತಿಯನ್ನ ಪಡೆದು, ಕ್ರಿಪ್ಟೋ ಕರೆನ್ಸಿ ಬಗ್ಗೆ  ಸಾಮಾನ್ಯ ಜನರಲ್ಲಿ ಇರುವ ಕುತೂಹಲವನ್ನ ಬಂಡವಾಳ ಮಾಡಿಕೊಂಡು ಗಂಟೆಗೆ 6೦೦/1೦೦೦ ಡಾಲರ್ ಶುಲ್ಕವನ್ನ ಪಡೆಯುತ್ತಾರೆ. ಇಲ್ಲಿ ಹೂಡಿಕೆ ಮಾಡುವ ಮುನ್ನ ಕೆಳಗಿನ ಅಂಶಗಳನ್ನ ಗಮನಿಸಿ.

  1. ಸೈಬರ್ ಸೆಕ್ಯುರಿಟಿ: ಇವತ್ತು ಕೇವಲ ಕ್ರಿಪ್ಟೋ ಕರೆನ್ಸಿ ಕಳ್ಳತನವಾಗುತ್ತದೆ ಎಂದಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಇದೊಂದು ದೊಡ್ಡ ಸಮಸ್ಯೆ. ಎಷ್ಟೇ ಸಬಲವಾದ ಸೆಕ್ಯುರಿಟಿ ಇದ್ದರೂ ಹ್ಯಾಕರ್ ಗಳು ಹೇಗೋ ಅದೆಲ್ಲವನ್ನೂ ಮುರಿದು ಒಳ ನುಗ್ಗಿ ಬೇಕಾದ ಮಾಹಿತಿ ಅಥವಾ ಈ ರೀತಿಯ ಡಿಜಿಟಲ್ ಹಣ, ಚಿತ್ರಗಳು ಇನ್ನತರೆ ಗೌಪ್ಯ ಮಾಹಿತಿಗಳನ್ನ ಕದಿಯುವುದು ತೀರಾ ಸಾಮಾನ್ಯವಾಗಿದೆ. ನಾವು ದೇಶಗಳ ರಕ್ಷಣಾ ಕಛೇರಿಗಳ ಕಂಪ್ಯೂಟರ್ ಹ್ಯಾಕ್ ಆಯ್ತು ಎನ್ನುವ ಸುದ್ದಿಗಳನ್ನ ಕೂಡ ಕೇಳುತ್ತಿರುತ್ತೇವೆ. ಹೀಗಾಗಿ ಇಲ್ಲಿನ ಹೂಡಿಕೆ ಮಾಡುವ ಮುನ್ನ ರಕ್ಷಣೆಯ ಬಗ್ಗೆ ಹೆಚ್ಚಿನ ಮಹತ್ವವನ್ನ ನೀಡಬೇಕಾಗುತ್ತದೆ. ಜೀವಮಾನದ ಗಳಿಕೆ ಮಾಯವಾಗಲು ಇಲ್ಲಿ ನಿಮಿಷಗಳು ಕೂಡ ಬೇಕಾಗುವುದಿಲ್ಲ. ತಂತ್ರಜ್ಞಾನ ಮತ್ತು ಈ ಕ್ರಿಪ್ಟೋ ಜಗತ್ತು ಹೇಗೆ ಕೆಲಸ ಮಾಡುತ್ತದೆ ಎನ್ನುವ ಮೂಲಭೂತ ಮಾಹಿತಿಯಿಲ್ಲದೆ ಇಲ್ಲಿ ಹೂಡಿಕೆ ಮಾಡುವುದು ತಪ್ಪು.
  2. ಸ್ಕೇಲಬಿಲಿಟಿ: ಇವತ್ತಿಗೆ ಕ್ರಿಪ್ಟೋ ಕರೆನ್ಸಿ ಬಹಳ ಸದ್ದು ಮಾಡುತ್ತಿದೆ. ಸಣ್ಣ ಪುಟ್ಟ ಹೂಡಿಕೆದಾರರಿಂದ, ದೊಡ್ಡ ಹೂಡಿಕೆದಾರರ ಜೊತೆಗೆ ನಿಜವಾದ ಮಧ್ಯಮವರ್ಗದ ಹೂಡಿಕೆದಾರ ಕೂಡ ಇಂದು ಇದರಲ್ಲಿ ಆಸಕ್ತಿ ತೋರಿಸಲು ಶುರು ಮಾಡಿದ್ದಾನೆ. ಆದರೂ ಸದ್ಯದ ಮಟ್ಟಿಗೆ ಇದನ್ನ ಜಗತ್ತು ಪೂರ್ಣವಾಗಿ ಸ್ವೀಕಾರ ಮಾಡಿಲ್ಲ. ಹೀಗಾಗಿ ಇದು ಎಷ್ಟು ವೇಗವಾಗಿ ಪ್ರಗತಿಯನ್ನ ಕಾಣುತ್ತದೆ ಎಂದು ಹೇಳಲು ಬಾರದು. ಇಂದು ಇವುಗಳನ್ನ ಮಾಧ್ಯಮವನ್ನಾಗಿ ಒಪ್ಪಿಕೊಂಡಿರುವ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ನಾಳೆ ಇದನ್ನ ನಾವು ಸ್ವೀಕರಿಸುವುದಿಲ್ಲ ಎಂದರೆ ಏನು ಮಾಡುವುದು? ಈ ರೀತಿ ಆಗುವುದಿಲ್ಲ ಎನ್ನಲು ಬಾರದು, ಅಲ್ಲದೆ ಬಹಳಷ್ಟು ದೇಶದ ಸರಕಾರಗಳು ಇದಕ್ಕೆ ಹಸಿರು ಬಾವುಟವನ್ನ ತೋರಿಸಿಲ್ಲ, ಇನ್ನು ಕೆಲವು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಇವೆ. ಈ ಎಲ್ಲಾ ಕಾರಣಗಳಿಂದ ಇದನ್ನ ಯೂನಿವರ್ಸಲ್ ಅಕ್ಸೆಪ್ಟೆನ್ಸ್ ಇರುವ ಹಣಕ್ಕೆ ಬದಲಿ ಮಾಧ್ಯಮ ಎನ್ನಲು ಇಲ್ಲಿಯ ವರೆಗೆ ಸಾಧ್ಯವಾಗಿಲ್ಲ. ಇದು ಭವಿಷ್ಯದ ದುಡ್ಡು ಎಂದು ನಾವು ಇಂದಿಗೆ ಎಷ್ಟೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕೊಟ್ಟರೂ ಕೊನೆಗೂ ಅದು ಜಾಗತಿಕವಾಗಿ ಮನ್ನಣೆ ಪಡೆಯುವವರೆಗೆ ಅದರ ತಲೆಯ ಮೇಲೆ ಪ್ರಶ್ನೆಯ ತೂಗುಗತ್ತಿ ಇದ್ದೆ ಇರುತ್ತದೆ. ಹೀಗಾಗಿ ಹೂಡಿಕೆಗೆ ಮುನ್ನ ಇರಲಿ ಈ ಬಗ್ಗೆ ಕೂಡ ಎಚ್ಚರ.
  3. ಬೆಲೆಯಲ್ಲಿ ಆಗುವ ಭಾರಿ ವ್ಯತ್ಯಯ,ಮತ್ತು ಮೌಲ್ಯ ಕುರಿತು ಇರುವ ಸಂಶಯ: ಸ್ಥಿರತೆಯಿಲ್ಲದ ಯಾವುದೇ ಮಾಧ್ಯಮವನ್ನ ನಾವು ದೈನಂದಿನ ಜೀವನದಲ್ಲಿ ಹಣಕ್ಕೆ ಬದಲಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಹೂಡಿಕೆಗೆ ಕೂಡ ಅವು ಸೂಕ್ತವಲ್ಲ. ಇದರಲ್ಲಿ ಹಲವಾರು ಜನರು ಹಣವನ್ನ ಗಳಿಸಿದರೆ ಅದು ಜೂಜಾಟದಲ್ಲಿ ಹಣ ಗಳಿಸಿದಂತೆ, ಕಳೆದುಕೊಂಡರೂ ಅದು ಕೂಡ ಜೂಜಾಟದ ಲೆಕ್ಕಕ್ಕೆ ಬರುತ್ತದೆ. ನೀವೇ ಗಮನಿಸಿ ನೋಡಿ, ಇವುಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಯವಾಗುತ್ತದೆ. ಇಷ್ಟು ಪ್ರಮಾಣದ ಏರಿಳಿತದಲ್ಲಿ ಬೇಕೋ ಬೇಡವೋ ಅದೃಷ್ಟವಿದ್ದವರು ಹಣ ಮಾಡುತ್ತಾರೆ, ಇಲ್ಲದವರು ಕಳೆದುಕೊಳ್ಳೋತ್ತಾರೆ. ಹೀಗೆ ವೈಜ್ಞಾನಿಕವಾಗಿ ಯಾವುದೇ ಕಾರಣಗಳಿಲ್ಲದೆ ಆಗುವ ಏರಿಳಿತ ಇರುವಲ್ಲಿ ಹೂಡಿಕೆ ಮಾಡುವುದು ಸರಿಯೇ ಎನ್ನುವುದನ್ನ ನಿಮ್ಮ ವಿವೇಚನೆಗೆ ಬಿಟ್ಟದ್ದು. ಇಲ್ಲಿ ಇನ್ನೊಂದು ಮುಖ್ಯ ವಿಷಯವನ್ನ ಕೂಡ ತಿಳಿಸಲು ಬಯಸುತ್ತೇನೆ. ಕೆಲವು ಕ್ರಿಪ್ಟೋ ಕರೆನ್ಸಿ ಸಂಸ್ಥೆಗಳು ತಮ್ಮ ಕರೆನ್ಸಿ ಗೆ ವಜ್ರ, ಪ್ಲಾಟಿನಂ ಇತ್ಯಾದಿಗಳ ಬೆಂಬಲವಿದೆ ಅದರ ಆಧಾರದ ಮೇಲೆ ಇಷ್ಟು ಎನ್ನುವ ಮೈನ್ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಇಂದಿಗೆ ಒಂದು ಬಿಟ್ ಕಾಯಿನ್ 43 ಲಕ್ಷ ಮೌಲ್ಯ ಹೊಂದಿದೆ ಎನ್ನುತ್ತಾರೆ, ಆದರೆ ಅದನ್ನ ಪ್ರಮಾಣಿಸಿ ಹೇಳಲು ಯಾವ ಆಧಾರವೂ ಇಲ್ಲ. ಅಂದರೆ ಗಮನಿಸಿ ಇವತ್ತು ಒಂದು ಡಾಲರ್ ಗೆ ಇಷ್ಟು ರೂಪಾಯಿ ಏಕಿದೆ ಎನ್ನುವುದಕ್ಕೆ ನಾವು ಸಾಕಷ್ಟು ಕಾರಣಗಳನ್ನ ನೀಡಬಹುದು, ಹೆಚ್ಚು ಕಡಿಮೆ ಅದನ್ನ ನಾವು ಒಪ್ಪಿಕೊಳ್ಳುವಂತೆ ಮಾಡಬಹುದು. ಆದರೆ ಒಂದು ಬಿಟ್ ಕಾಯಿನ್ 43 ಲಕ್ಷವೇಕೆ? ಎಂದರೆ ಅಲ್ಲಿ ಉತ್ತರವಿಲ್ಲ. ಜೊತೆಗೆ ಮುಂದಿನ ತಿಂಗಳು ಇದು 3 ಲಕ್ಷಕ್ಕೆ ಕುಸಿದರೆ ಅದರಲ್ಲಿ ಯಾವುದೇ ಆಶ್ಚರ್ಯವೂ ಇಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಇದೊಂದು ಜೂಜಾಟವೇ ಸರಿ.
  4. ನಿಬಂಧನೆಗಳು: ಆಟ ಯಾವುದೇ ಇರಲಿ ಅದಕ್ಕೆ ಕೆಲವೊಂದು ನಿಬಂಧನೆಗಳು ಇದ್ದೇ ಇರುತ್ತವೆ, ಅಥವಾ ಇರಲೇ ಬೇಕು ಅಲ್ಲವೇ? ಉದಾಹರಣೆಗೆ ಕೇರಂ, ಚೆಸ್, ಕಬ್ಬಡ್ಡಿ, ಕ್ರಿಕೆಟ್, ಹಾಕಿ, ಹೀಗೆ ಆಟ ಯಾವುದೇ ಇರಲಿ ಅಲ್ಲಿ ಒಂದಷ್ಟು ನಿಯಮಗಳು, ನಿಬಂಧನೆಗಳು ಇರಬೇಕು. ಕ್ರಿಪ್ಟೋ ಜಗತ್ತು ಯಾವುದೇ ಸರಕಾರ ಅಥವಾ ಯಾವುದೇ ಪ್ರಮಾಣಿತ ಹಣಕಾಸು ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿಲ್ಲ. ಒಂದಷ್ಟು ಆಸಕ್ತಿಯಿರುವ ಯಾರೂ ಬೇಕಾದರೂ ಇಲ್ಲಿನ ತಂತ್ರಜ್ಞಾನ ತಿಳಿದು ಇದರಲ್ಲಿ ಪ್ರವೇಶ ಪಡೆಯಬಹುದು. ಇಲ್ಲಿ ಯಾವುದೇ ನಿಖರ ಕಟ್ಟಳೆಗಳು ಇಲ್ಲದ ಕಾರಣ ನಮ್ಮಿಷ್ಟದ ರೀತಿನೀತಿಗಳನ್ನ ಅಳವಡಿಸಿಕೊಳ್ಳಬಹುದು. ಎಲ್ಲಕ್ಕೂ ಮುಖ್ಯವಾಗಿ ಇಲ್ಲಿ ಎಲ್ಲವೂ ಡಿಜಿಟಲ್ ಹೀಗಾಗಿ ನಿಮ್ಮ ಹಣ ಕೂಡ ಡಿಜಿಟಲ್, ಪಾಸ್ವರ್ಡ್ ಮರೆತರೆ ಅದು ಇನ್ನೆಂದಿಗೂ ಮರಳಿ ಸಿಗದು ಎನ್ನುವ ಬಾಲಿಶ ನಿಯಮಾವಳಿಗಳು ಇಲ್ಲಿ ಹೂಡಿಕೆ ಮಾಡುವುದು ಅದೆಷ್ಟು ಅಪಾಯ ಎನ್ನುವುದನ್ನ ಹೇಳುತ್ತವೆ.

ಕೊನೆಮಾತು: ಇವತ್ತಿನ ದಿನಗಳಲ್ಲಿ, ಅದರಲ್ಲೂ ಮಿಲಿನಿಯಲ್ ಗಳಲ್ಲಿ ಕ್ರಿಪ್ಟೋ ವರ್ಲ್ಡ್ ಕುರಿತು ಅಪರಿಮಿತ ಕುತೂಹಲ ಮತ್ತು ಆಕರ್ಷಣೆ ಹೆಚ್ಚಾಗಿದೆ. ಒಂದು ಕಾಲದಲ್ಲಿ ಪಾಪ್ ಸಂಗೀತದ ಬಗ್ಗೆ ಯುವ ಜನತೆಯಲ್ಲಿ ಯಾವ ಮಟ್ಟದಲ್ಲಿ ಕ್ರೇಜ್ ಇತ್ತು ಅದರ ನೂರುಪಟ್ಟು ಹೆಚ್ಚಿನ ಕ್ರೇಜ್ ಈಗ ಕ್ರಿಪ್ಟೋ ಕರೆನ್ಸಿ ಬಗ್ಗೆಯಿದೆ. ಇದು ಭವಿಷ್ಯದ ಹಣವೂ ಅಥವಾ ಬರಿ ಗುಳ್ಳೆಯೋ ಎನ್ನುವ ಸಂಶಯವನ್ನ ವ್ಯಕ್ತಪಡಿಸಿ 8 ವರ್ಷದ ಹಿಂದೆಯೇ ಲೇಖನವನ್ನ ಬರೆದಿದ್ದೆ. ಎಂಟು ವರ್ಷದ ನಂತರವೂ ಇದು ಇಂದಿಗೂ ಗುಟ್ಟು ಬಿಟ್ಟು ಕೊಡದೆ ಅದೇ ಸಂಶಯವನ್ನ ಉಳಿಸಿಕೊಂಡು ಬರುತ್ತಿದೆ, ಇದರರ್ಥ ಇದನ್ನ ಜಾಗತಿಕ ಮಟ್ಟದಲ್ಲಿ ಜನ ಸಾಮಾನ್ಯ ಒಪ್ಪಿಕೊಂಡಿಲ್ಲ ಎನ್ನುವುದಾಗಿದೆ. ಇದರಲ್ಲಿ ಇನ್ನು ನೂರಾರು ಲೋಪದೋಷಗಳಿವೆ ಅವುಗಳನ್ನ ತಿದ್ದಿಕೊಂಡು, ಆಯಾ ದೇಶದ ಸರಕಾರಗಳ ಅಥವಾ ಸೆಂಟ್ರಲ್ ಬ್ಯಾಂಕುಗಳ ನಿಯಮಾವಳಿಗಳ ಅಡಿಯಲ್ಲಿ ಇದು ಕಾರ್ಯ ನಿರ್ವಹಿಸುವಂತಾದರೆ ಇದಕ್ಕೆ ಭವಿಷ್ಯವಿದೆ. ಜಗತ್ತಿನ ಬಹುತೇಕ ದೇಶಗಳು ತಮ್ಮದೇ ಕ್ರಿಪ್ಟೋ ಕರೆನ್ಸಿ ಹೊಂದುವ ಬಗ್ಗೆ ಚಿಂತನೆಗಳನ್ನ ನಡೆಸುತ್ತಿದೆ. ಸದ್ಯದ ಮಟ್ಟಿಗೆ ತಂತ್ರಜ್ಞಾನವನ್ನ ಆಟಿಕೆಯನ್ನಾಗಿ ಮಾಡಿಕೊಂಡಿರುವ ಹುಚ್ಚು ಹಡುಗರ ತಾಣವಾಗಿದೆ ಈ ಕ್ರಿಪ್ಟೋ ವರ್ಲ್ಡ್. ಹೀಗಾಗಿ ಪ್ರವೇಶಿಸುವ ಮುನ್ನ ಎಚ್ಚರವಿರಲಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com