ಏರ್ ಇಂಡಿಯಾ ಖಾಸಗೀಕರಣ: ಹರಾಜಿನಲ್ಲಿ ಟಾಟಾ ಗ್ರೂಪ್ ಪಾಲಾದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ!
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಹರಸಾಹಸಕ್ಕೆ ಕೊನೆಗೂ ಮುಕ್ತಿ ದೊರೆತಿದ್ದು, ಟಾಟಾ ಸಮೂಹ ಹರಾಜಿನಲ್ಲಿ ಏರ್ ಇಂಡಿಯಾವನ್ನು ಖರೀದಿ ಮಾಡಿದೆ.
Published: 01st October 2021 12:32 PM | Last Updated: 01st October 2021 02:26 PM | A+A A-

ಏರ್ ಇಂಡಿಯಾ ಮತ್ತು ಟಾಟಾ ಸಂಸ್ಥೆ
ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಹರಸಾಹಸಕ್ಕೆ ಕೊನೆಗೂ ಮುಕ್ತಿ ದೊರೆತಿದ್ದು, ಟಾಟಾ ಸಮೂಹ ಹರಾಜಿನಲ್ಲಿ ಏರ್ ಇಂಡಿಯಾವನ್ನು ಖರೀದಿ ಮಾಡಿದೆ.
ಇಂದು ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಖರೀದಿ ಸಂಬಂಧ ಬಿಡ್ ನಡೆಸಲಾಯಿತು. ಈ ಬಿಡ್ ನಲ್ಲಿ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಸಂಸ್ಥೆ ಖರೀದಿಸುವಲ್ಲಿ ಸಫಲವಾಗಿದೆ ಎಂದು ಬ್ಲೂಮರ್ಗ್ ವರದಿ ಮಾಡಿದೆ.
ಈ ಬಗ್ಗೆ ಸುದ್ದಿಸಂಸ್ಥೆಗಳು ವರದಿ ಮಾಡಿದ್ದು, ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಸಂಸ್ಥೆ ಬಹುದೊಡ್ಡ ಮೊತ್ತ ನೀಡಿ ಖರೀದಿ ಮಾಡಿದೆ ಎನ್ನಲಾಗಿದೆ.
ಹಳೆಯ ಮಾಲೀಕನನ್ನೇ ಸೇರಿದ ಏರ್ ಇಂಡಿಯಾ
ಇನ್ನು ಏರ್ ಇಂಡಿಯಾ ಈ ಹಿಂದೆ ಟಾಟಾ ಗ್ರೂಪ್ ನದ್ದೇ ಕಂಪನಿಯಾಗಿತ್ತು. ಈ ಕಂಪನಿಯನ್ನು ಜೆಆರ್ ಡಿ ಟಾಟಾ 1932 ರಲ್ಲಿ ಸ್ಥಾಪಿಸಿದ್ದರು. ಸ್ವಾತಂತ್ರ್ಯಾನಂತರ, ವಾಯುಯಾನ ವಲಯವನ್ನು ರಾಷ್ಟ್ರೀಕರಣಗೊಳಿಸಲಾಯಿತು ಮತ್ತು ಸರ್ಕಾರವು ಟಾಟಾ ಏರ್ ಲೈನ್ಸ್ ಷೇರುಗಳಲ್ಲಿ ಶೇಕಡಾ 49 ರಷ್ಟನ್ನು ಖರೀದಿಸಿತು. ನಂತರ ಕಂಪನಿಯು ಸಾರ್ವಜನಿಕ ಸೀಮಿತ ಕಂಪನಿಯಾಯಿತು ಮತ್ತು ಜುಲೈ 29, 1946 ರಂದು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು.
1953 ರಲ್ಲಿ, ಸರ್ಕಾರವು ಏರ್ ಕಾರ್ಪೊರೇಷನ್ ಕಾಯ್ದೆಯನ್ನು ಅಂಗೀಕರಿಸಿತು ಮತ್ತು ಕಂಪನಿಯ ಸ್ಥಾಪಕ ಜೆಆರ್ ಡಿ ಟಾಟಾ ಅವರಿಂದ ಮಾಲೀಕತ್ವದ ಹಕ್ಕುಗಳನ್ನು ಖರೀದಿಸಿತು. ನಂತರ ಈ ಕಂಪನಿಯನ್ನು ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ಹೀಗಾಗಿ ಟಾಟಾ ಗ್ರೂಪ್ 68 ವರ್ಷಗಳ ನಂತರ ಮತ್ತೊಮ್ಮೆ ತನ್ನ ಸ್ವಂತ ಕಂಪನಿಯನ್ನು ಹಿಂತೆಗೆದುಕೊಂಡಂತಾಗಿದೆ.