ಹೆಸರು ಬದಲಾಯಿಸಲಿದೆ ಫೇಸ್ ಬುಕ್: ಏಕೆ, ಏನು...? ವಿವರ ಹೀಗಿದೆ...

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಸಂಸ್ಥೆ ತನ್ನ ಹೆಸರನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಲಿದೆ. 
ಫೇಸ್ ಬುಕ್
ಫೇಸ್ ಬುಕ್

ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಸಂಸ್ಥೆ ತನ್ನ ಹೆಸರನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಲಿದೆ. 

ಮಾರ್ಕ್ ಜುಕರ್ಬರ್ಗ್ ಒಡೆತನದಲ್ಲಿ ಫೇಸ್ ಬುಕ್ ಜೊತೆಗೆ ಇನ್ಸ್ಟಾಗ್ರಾಮ್, ವಾಟ್ಸ್ ಆಪ್, ಆಕ್ಯುಲಸ್ ಹಾಗೂ ಇನ್ನಿತರ ಸಂಸ್ಥೆಗಳಿದ್ದು, ಒಂದೇ ಮಾತೃಸಂಸ್ಥೆಯಡಿಯಲ್ಲಿ ಈ ಎಲ್ಲಾ ಸಹೋದರ ಸಂಸ್ಥೆಗಳನ್ನು ಪ್ರತಿನಿಧಿಸುವ ಹೆಸರನ್ನು ಪರಿಚಯಿಸಲಾಗುತ್ತದೆ ಎಂದು ಈ ವಿದ್ಯಮಾನಗಳನ್ನು ಹತ್ತಿರದಿಂದ ಬಲ್ಲವರು ಹೇಳಿದ್ದಾರೆ.

ಸರಳವಾಗಿ ಹೇಳಬೇಕೆಂದರೆ ಫೇಸ್ ಬುಕ್ ತನ್ನನ್ನು ರೀಬ್ರಾಂಡ್ ಗೆ ಒಡ್ಡಿಕೊಳ್ಳುತ್ತಿದ್ದು, ಶೀಘ್ರವೇ ಹೊಸ ಹೆಸರನ್ನು ಜುಕರ್ಬರ್ಗ್ ಘೋಷಣೆ ಮಾಡಲಿದ್ದಾರೆ. ಫೇಸ್ ಬುಕ್ ಹಾಗೂ ಅದರ ಒಡೆತನದ ಇತರ ಸಂಸ್ಥೆಗಳನ್ನು ಜನರು ಪ್ರಾಥಮಿಕವಾಗಿ ಸಾಮಾಜಿಕ ಜಾಲತಾಣವೆಂದೇ ಗುರುತಿಸುತ್ತಿದ್ದರಾದರೂ ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಮೆಟಾವರ್ಸ್ (ಭವಿಷ್ಯತ್ ನ ಕಾನ್ಸೆಪ್ಟ್ ಹೊಂದಿದ ಸಂಸ್ಥೆಗಳು) ಕಂಪನಿಯೆಂದು ಗುರುತಿಸಲು ಪ್ರಾರಂಭಿಸಿದ್ದಾರೆ ಅದಕ್ಕೆ ತಕ್ಕಂತೆ ಫೇಸ್ ಬುಕ್ ತನ್ನನ್ನು ರೀಬ್ರಾಂಡಿಂಗ್ ಗೆ ಒಡ್ಡಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಅ.28 ರಂದು ಸಂಸ್ಥೆಯ ವಾರ್ಷಿಕ ಸಮ್ಮೇಳನ ನಡೆಯಲಿದ್ದು ಅದೇ ದಿನದಂದು ಹೆಸರು ಬದಲಾವಣೆಯ ಪ್ರಸ್ತಾವವನ್ನು ಜುಕರ್ಬರ್ಹ್ ಮಂಡಿಸಲಿದ್ದು ಸಾಮಾಜಿಕ ಜಾಲತಾಣಕ್ಕಿಂತಲೂ ಹೆಚ್ಚಿನದ್ದಾಗಿರುವಂತೆ ಸಂಸ್ಥೆಯನ್ನು ಬೆಳೆಸುವ ಉದ್ದೇಶ ಜುಕರ್ಬರ್ಗ್ ಗೆ ಇದೆ ಎನ್ನಲಾಗುತ್ತಿದೆ.

ಫೇಸ್ ಬುಕ್ ಸಾಮಾಜಿಕ ಜಾಲತಾಣಕ್ಕೆ ಅಷ್ಟೇ ಸೀಮಿತವಾಗದೇ ಈಗಾಗಲೇ ಎಆರ್ ಗ್ಲಾಸಸ್ ನಂತಹ ಗ್ರಾಹಕ ಹಾರ್ಡ್ ವೇರ್ ನ್ನು ನಿರ್ಮಿಸುವುದಕ್ಕಾಗಿ 10,000 ಮಂದಿ ಉದ್ಯೋಗಿಗಳನ್ನು ಹೊಂದಿದೆ. ಈ ಕಾನ್ಸೆಪ್ಟ್ ಭವಿಷ್ಯದಲ್ಲಿ ಸ್ಮಾರ್ಟ್ ಫೋನ್ ಗಳಂತೆ ಸರ್ವವ್ಯಾಪಿಯಾಗುತ್ತದೆ ಎಂಬುದು ಜುಕರ್ಬರ್ಗ್ ನ ಬಲವಾದ ನಂಬಿಕೆಯಾಗಿದೆ.

ಈ ರೀಬ್ರಾಂಡಿಂಗ್ ಜುಕರ್ಬರ್ಗ್ ಅವರ ಭವಿಷ್ಯದ ಆಲೋಚನೆಗಳನ್ನು ಕೇಂದ್ರಿತವಾಗಿರಿಸಿಕೊಂಡು ನಡೆಯುತ್ತಿರುವುದಾಗಿದೆ ಎಂದು ಸಂಸ್ಥೆಯ ಮೂಲಗಳು ಮಾಹಿತಿ ಬಿಚ್ಚಿಟ್ಟಿವೆ.

ಫೇಸ್ ಬುಕ್ ಮಾತ್ರವೇ ಅಲ್ಲ ಈ ರೀತಿಯ ಅನೇಕ ಸಂಸ್ಥೆಗಳು ಪ್ರಾರಂಭದಲ್ಲಿ ಸಣ್ಣ ಉದ್ದೇಶದಿಂದ ಕೂಡಿದ್ದು ಕ್ರಮೇಣ ಬೃಹತ್ ಉದ್ದೇಶಗಳೊಂದಿಗೆ ರೀಬ್ರಾಂಡ್ ಆದ ಉದಾಹರಣೆಗಳಿವೆ. ಅವುಗಳ ಪೈಕಿ 2015 ರಲ್ಲಿ ಗೂಗಲ್ ಆಲ್ಫಬೆಟ್ ಎಂಬ ಹೆಸರಿನ ಮೂಲಕ ತಾನು ಸರ್ಚ್ ಇಂಜಿನ್ ಗೆ ಸೀಮಿತವಾಗಿಲ್ಲ. ಚಾಲಕ ರಹಿತ ಕಾರುಗಳು ಸೇರಿದಂತೆ ಹೆಲ್ತ್ ಟೆಕ್ ವರೆಗೂ ವಿಸ್ತಾರ ಸಮೂಹವಾಗಿ ಗುರುತಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದೆ.

2016 ರಲ್ಲಿ ಸ್ನ್ಯಾಪ್ ಚಾಟ್ ಸ್ನ್ಯಾಪ್ ಐಎನ್ ಸಿ ಎಂಬ ಹೆಸರಿನ ಮೂಲಕ ರಿಬ್ರಾಂಡ್ ಆಗಿ ಕ್ಯಾಮರ ಸಂಸ್ಥೆಯೆಂದೇ ಗುರುತಿಸಿಕೊಳ್ಳುವುದಕ್ಕೆ ಪ್ರಾರಂಭಿಸಿತು. ಅಷ್ಟೇ ಅಲ್ಲದೇ ಕ್ಯಾಮರಾ ಹೊಂದಿರುವ ಕನ್ನಡಕವನ್ನು ಬಿಡುಗಡೆ ಮಾಡಿತ್ತು.

ಈಗ ಇಂಥಹದ್ದೇ ಕ್ರಮಕ್ಕೆ ಫೇಸ್ ಬುಕ್ ಮುಂದಾಗಿದೆ. ಹೊಸ ಹೆಸರು ಈ ವರೆಗೂ ಬಹಿರಂಗವಾಗಿಲ್ಲವಾದರೂ, ಅಲ್ಲಲ್ಲಿ ಕೇಳಿಬರುತ್ತಿರುವ ಊಹಾಪೋಹಗಳ ಪ್ರಕಾರ Horizon ಗೆ ಸಂಬಂಧಿಸಿದ ಹೆಸರು ಅಥವಾ ಸಂಸ್ಥೆ ಕೆಲವು ವರ್ಷಗಳಿಂದ ಅಭಿವೃದ್ಧಿಪಡಿಸುತ್ತಿರುವ ಇನ್ನೂ ಬಿಡುಗಡೆಯಾಗದ ವಿಆರ್ ಆವೃತ್ತಿ "ಫೇಸ್ಬುಕ್-ಮೀಟ್ಸ್-ರಾಬ್ಲಾಕ್ಸ್"ಗೆ ಸಂಬಂಧಿಸಿದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com