ಮತ್ತೆ ರೆಪೋ ದರ ಹೆಚ್ಚಿಸಿದ ಆರ್ ಬಿಐ, ಇದು 2019 ರಿಂದಲೇ ಗರಿಷ್ಠ ಏರಿಕೆ; ಹಣದುಬ್ಬರದ ಆತಂಕ!
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಶುಕ್ರವಾರ ಮತ್ತೆ ರೆಪೋ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಬಡ್ಡಿ ದರ ಈಗ ಶೇ. 5.40ಕ್ಕೆ ಏರಿಕೆಯಾಗಿದೆ. ಇದು 2019ರಿಂದ ಗರಿಷ್ಠ ಏರಿಕೆಯಾಗಿದೆ.
Published: 05th August 2022 12:08 PM | Last Updated: 05th August 2022 02:05 PM | A+A A-

ಶಕ್ತಿಕಾಂತ್ ದಾಸ್
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಮತ್ತೆ ರೆಪೋ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಬಡ್ಡಿ ದರ ಈಗ ಶೇ. 5.40ಕ್ಕೆ ಏರಿಕೆಯಾಗಿದೆ. ಇದು 2019ರಿಂದ ಗರಿಷ್ಠ ಏರಿಕೆಯಾಗಿದೆ.
ಇಂದು ಮುಂಬೈನಲ್ಲಿ ಹಣಕಾಸು ನೀತಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡುತ್ತಿರುವುದಾಗಿ ಘೋಷಿಸಿದರು. ನೂತನ ರೆಪೋ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರೀಯ ಬ್ಯಾಂಕ್ ದೇಶವನ್ನು ನಿರಂತರ ಬೆಳವಣಿಗೆಯ ಹಾದಿಯಲ್ಲಿ ಇರಿಸಲು ಮತ್ತು ಬೆಲೆ ಸ್ಥಿರತೆಗೆ ಬದ್ಧವಾಗಿದೆ. ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಸ್ಥಿರತೆಗಾಗಿ ರೆಪೋ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಇದನ್ನು ಓದಿ: ಗಾಯದ ಮೇಲೆ ಬರೆ; ಹೆಚ್ಚಿದ ಜಿಎಸ್ಟಿ ಹೊರೆ! (ಹಣಕ್ಲಾಸು)
ಆರ್‌ಬಿಐ ಈಗ ಸತತ ಮೂರನೇ ಬಾರಿಗೆ ರೆಪೋ ದರ ಹೆಚ್ಚಳ ಮಾಡಿದೆ. ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ಸಲುವಾಗಿ ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ. ಆರ್‌ಬಿಐ, ರೋಪೊ ದರವನ್ನು ಕಳೆದ ಮೇ ತಿಂಗಳಲ್ಲಿ ಶೇ. 0.40 ಹಾಗೂ ಜೂನ್‌ನಲ್ಲಿ ಶೇ. 0.50 ಹೆಚ್ಚಳ ಮಾಡಿತ್ತು.
ರೆಪೋ ದರ ಹೆಚ್ಚಳದಿಂದ ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಮತ್ತಷ್ಟು ಹೆಚ್ಚಳವಾಗಲಿದೆ.