
ಸಾಂದರ್ಭಿಕ ಚಿತ್ರ
ಆಹಾರ ಪದಾರ್ಥಗಳ ಮೇಲೆ ಅದರಲ್ಲೂ ಜೀವನಕ್ಕೆ ಬೇಕಾಗುವ ಅವಶ್ಯಕ ವಸ್ತುಗಳ ಮೇಲೆ ಐದು ಪ್ರತಿಶತ ತೆರಿಗೆಯನ್ನ ವಿಧಿಸಿರುವುದು ವರ್ಷಗಳ ನಂತರ ಜನತೆಯನ್ನ ಕೆರಳಿಸಿದೆ. ಪೆಟ್ರೋಲ್ ಬೆಲೆ ನೂರು ಮೀರಿ ಆರು ತಿಂಗಳ ಮೇಲಾಯ್ತು, ಅಡುಗೆ ತೈಲದ ಬೆಲೆ 80/100 ರೂಪಾಯಿ ಲೀಟರಿಗೆ ಇದದ್ದು 200ರ ಗಡಿ ದಾಟಿತ್ತು, ಇದೀಗ ಅದರಲ್ಲಿ ಇಳಿಕೆಯಾಗಿದೆ ಎನ್ನುವುದು ಸಮಾಧಾನ. ಹೀಗೆ ನಾವು ಬಳಸುವ ಬಹಳಷ್ಟು ವಸ್ತುಗಳ ಬೆಲೆ 80 ಪ್ರತಿಶತ ಹೆಚ್ಚಾಗಿದೆ. ಆದರೂ ಜನತೆ ಬೆಲೆ ಏರಿಕೆಯ ಬಗ್ಗೆ ಹೆಚ್ಚಿನ ಗಲಾಟೆ ಮಾಡದೆ ಶಾಂತವಾಗೇ ಇದ್ದರು. ಇದೀಗ ಬಹಳಷ್ಟು ವರ್ಷಗಳ ನಂತರ ಜಿಎಸ್ಟಿ ಹಾಕಿರುವುದರ ವಿರುದ್ಧ ಒಂದಷ್ಟು ಪ್ರತಿಭಟನೆ ಕೇಳಿಬರುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಈ ಬಾರಿ ಜಿಎಸ್ಟಿ ವಿಧಿಸಿರುವುದು ನಿತ್ಯ ಜೀವನಕ್ಕೆ ಬೇಕಾಗುವ ವಸ್ತುಗಳ ಮೇಲೆ, ಜನತೆಯ ಆಕ್ರೋಶ ಕಂಡು ವಿತ್ತ ಮಂತ್ರಿಗಳು ಸಮಜಾಯಿಷಿ ನೀಡಲು ಹತ್ತಾರು ಟ್ವೀಟ್ ಕೂಡ ಮಾಡಿದ್ದಾರೆ. ಒಂದಷ್ಟು ಅಗತ್ಯ ವಸ್ತುಗಳ ಪಟ್ಟಿಯನ್ನ ನೀಡಿ, ಇವುಗಳನ್ನ ಪ್ಯಾಕೆಟ್ ಮಾಡದೆ ಕೊಂಡರೆ ಅವುಗಳ ಮೇಲೆ ಜಿಎಸ್ಟಿ ಇಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ. ಸಾಲದಕ್ಕೆ ಹೀಗೆ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸುವುದು ಇದೆ ಮೊದಲಲ್ಲ ಜಿಎಸ್ಟಿ ವಿಧಿಸುವುದಕ್ಕೆ ಮುಂಚೆ ಪಂಜಾಬ್ ರಾಜ್ಯ ಎರಡು ಸಾವಿರ ಕೋಟಿ ರೂಪಾಯಿ ತೆರಿಗೆಯನ್ನ ಸಂಗ್ರಹಿಸಿತ್ತು, ಹಾಗೆಯೇ ಉತ್ತರ ಪ್ರದೇಶ ಏಳು ನೂರು ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು, ಇದೆ ದಾರಿಯಲ್ಲಿ ಅನೇಕ ರಾಜ್ಯಗಳು ನಡೆದಿದ್ದವು , ಈ ಬಾರಿ ಜಿಎಸ್ಟಿ ಹಾಕುವುದಕ್ಕೆ ಮೊದಲು ಬಿಜೆಪಿ ಸರಕಾರ ಇಲ್ಲದ ರಾಜ್ಯಗಳ ಒಪ್ಪಿಗೆ ಪಡೆದುಕೊಂಡು ಇದನ್ನ ಜಾರಿಗೆ ತರಲಾಗಿದೆ, ಹೀಗಿದ್ದೂ ಜಿಎಸ್ಟಿ ಹೇರಿಕೆ ಎನ್ನುವ ಮಾತು ಸರಿಯಲ್ಲ ಎನ್ನುವ ಮತ್ತು ಜಿಎಸ್ಟಿ ಜಾರಿಗೆ ತಂದದ್ದನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.
ಜಿಎಸ್ಟಿ ವಿಧಿಸಿರುವುದು ಸಾಮಾನ್ಯ ಜನರನ್ನ ಕೆರಳಿಸಿದರೆ, ವಿತ್ತ ಸಚಿವರ ಉದ್ದಟತನದ ಮಾತುಗಳು, ಸಮರ್ಥನೆ ಮಾಡಿಕೊಳ್ಳಲು ಆಕೆ ನೀಡುವ ಅಂಕಿ-ಅಂಶಗಳು ಇನ್ನೊಂದು ವರ್ಗದ ಜನರ ಕಣ್ಣನ್ನ ಕೆಂಪಗಾಗಿಸಿದೆ. ಜಿಎಸ್ಟಿ ಜಾರಿಗೆ ತಂದ ದಿನದಿಂದ ಇಲ್ಲಿಯವರೆಗೆ ಸರಕಾರದ ಕಡೆಯಿಂದ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಕಾನೂನು ಜಾರಿಗೆ ತರುವ ಮುನ್ನ ಅದರಲ್ಲಿ ಉದ್ಭವಿಸಬಹುದಾದ ಸಂಭಾವ್ಯ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರಗಳನ್ನ ಸಿದ್ಧ ಮಾಡಿ ಅದನ್ನ ಕೂಡ ಜೊತೆ ಜೊತೆಯಲ್ಲಿ ಬಿಡುಗಡೆ ಮಾಡಬೇಕು. ನಾವು ಹೇಳಿದ್ದು ಅರ್ಥೈಸಿಕೊಳ್ಳುವ ರೀತಿ ಬದಲಾದರೆ ಸಮಾಜದಲ್ಲಿ ಗೌಜು ಉಂಟಾಗುತ್ತದೆ. ಇಂತಹ ಗೌಜು ಇದೆ ಮೊದಲಲ್ಲ , ಜಿಎಸ್ಟಿ ಪ್ರಥಮ ಬಾರಿಗೆ ಲಾಗೂ ಮಾಡಿದ ದಿನದಿಂದ ಇದೆ. ಸಮಯದ ಜೊತೆಗೆ ಇಂತಹ ವಿಷಯದಲ್ಲಿ ಸರಕಾರ ಇನ್ನೂ ಕಲಿತಿಲ್ಲ ಎನ್ನುವುದು ನಿಜಕ್ಕೂ ಖೇದಕರ.
ಇನ್ನು ಕರ್ನಾಟಕದಲ್ಲಿ ಈ ರೀತಿಯ ತೆರಿಗೆಯನ್ನ ವಸ್ತುಗಳ ಮೇಲೆ ಸರಿಯಾಗಿ ಹಾಕಲು ಬಾರದ ಅಧಿಕಾರಿ ವರ್ಗವಿದೆಯೋ ಅಥವಾ ಅವರು ಜನರನ್ನ ಮಂದಬುದ್ಧಿಯವರು ಎಂದು ತೀರ್ಮಾನಿಸಿದ್ದಾರೋ ಎನ್ನುವ ಸಂಶಯ ಬರುವ ರೀತಿಯಲ್ಲಿ ಬೆಲೆಯನ್ನ ಏರಿಕೆ ಮಾಡಿದ್ದಾರೆ. ಉದಾಹರಣೆ ನೋಡೋಣ. ಮೊಸರಿನ ಬೆಲೆ ಲೀಟರಿಗೆ 4 ರೂಪಾಯಿ ಏರಿಸಿದ್ದರು, ಇದು 9.09 ಪ್ರತಿಶತ ಏರಿಕೆಯಾಯ್ತು, ಜಿಎಸ್ಟಿ ಏರಿದ್ದು ಕೇವಲ 5 ಪ್ರತಿಶತ ಹೀಗಿದ್ದ ಮೇಲೆ 9 ಪ್ರತಿಶತ ಏರಿಕೆ ಮಾಡಿದ್ದು ಏಕೆ? ಇನ್ನು ನೀರು ಮಜ್ಜಿಗೆ 7 ರೂಪಾಯಿ ಇದದ್ದು 8 ರೂಪಾಯಿ ಮಾಡಿದರು ಇದು 14.28 ಪ್ರತಿಶತ ಏರಿಕೆಯಾಯ್ತು !! ನಿಮಗೆ ಗೊತ್ತಿರಲಿ ಜಿಎಸ್ಟಿ ಇನ್ಪುಟ್ ಕ್ರೆಡಿಟ್ ತೆಗೆದುಕೊಂಡ ನಂತರ ಬೆಲೆ ಏರಿಕೆಯಾದರೂ ಅದು ಕೇವಲ ಒಂದು ಅಥವಾ ಎರಡು ಪ್ರತಿಶತವಾಗಬೇಕು ಅಷ್ಟೇ, ಈಗಾಗಿರುವ ಬೆಲೆ ಏರಿಕೆ ಅಕ್ಷಮ್ಯ.
ಇದನ್ನೂ ಓದಿ: ಆರ್ ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್; ಇಲ್ಲಿದೆ ನಿಮಗೆ ಬೇಕಾದ ಮಾಹಿತಿ!
ಜನಾಕ್ರೋಶಕ್ಕೆ ಮಣಿದ ಕರ್ನಾಟಕ ಸರಕಾರ ಬೆಲೆಯಲ್ಲಿ ಇಳಿಕೆ ಮಾಡಿದೆ, ಆದರೆ ಇದರಲ್ಲೂ ತಪ್ಪಿದೆ. 7 ರೂಪಾಯಿ ನೀರು ಮಜ್ಜಿಗೆ 8ಕ್ಕೆ ಏರಿಸಿ ಈಗ 7.50ಕ್ಕೆ ಇಳಿಸಿದೆ. ಗಮನಿಸಿ 50 ಪೈಸೆ ಎಂದರೆ 7 ಪ್ರತಿಶತಕ್ಕೂ ಮೀರಿದ ಹೆಚ್ಚಳವಾಗಿದೆ. ಜಿಎಸ್ಟಿ ಹಾಕಿರುವುದೇ 5 ಪ್ರತಿಶತ. ಅದರಲ್ಲೂ ಒಂದಷ್ಟು ಇನ್ಪುಟ್ ಕ್ರೆಡಿಟ್ ತೆಗೆದರೆ ಇನ್ನೂ 25/30 ಪೈಸೆ ಕಡಿಮೆಯಾಗಬೇಕು. ಬೆಲೆ ಹೆಚ್ಚಿಸುವ ಮುನ್ನಾ ಇದನ್ನ ಏಕೆ ಯಾವ ಅಧಿಕಾರಿ ಗಮನಿಸುವುದಿಲ್ಲ? ಈ ಬೆಲೆಯನ್ನ ಸರಿಯಿದೆ ಎಂದು ಒಪ್ಪಿಗೆ ನೀಡಿದವರು ಯಾರು? ಯಾವ ಕೆಲಸವನ್ನ ಮಾಡದೆ, ಸುಮ್ಮನೆ 1 ರೂಪಾಯಿ ಹೆಚ್ಚಿಸುವುದು ಅವೈಜ್ಞಾನಿಕ.
ಜನ ಆಕ್ರೋಶಗೊಂಡಾದ ಮೇಲಾದರೂ ಕೆಲಸ ಮಾಡಿದರಾ? ಅದೂ ಇಲ್ಲ ಮತ್ತೆ ಅವೈಜ್ಞಾನಿಕವಾಗಿ 50 ಪೈಸೆ ಇಳಿಕೆ ಮಾಡಿದ್ದಾರೆ. ಎಲ್ಲಿಯವರೆಗೆ ನಾವು ಯೋಚಿಸುವುದಿಲ್ಲ, ಪ್ರಶ್ನಿಸುವುದಿಲ್ಲ ಅಲ್ಲಿಯವರೆಗೆ ಇಂತಹ ಸುಲಿಗೆ ತಪ್ಪುವುದಿಲ್ಲ.
ಇನ್ನು ಈ ರೀತಿ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಲು ವಿತ್ತ ಸಚಿವೆ ನೀಡಿರುವ ಕಾರಣವೇನು ಗೊತ್ತೇ? ಈ ವಲಯದಲ್ಲಿ ತೆರಿಗೆ ವಂಚನೆ ಬಹಳ ಆಗುತ್ತಿದೆ, ಇದನ್ನ ತಡೆಯಲು ಇದೊಂದೆ ಇದ್ದ ಮಾರ್ಗ ಎಂದಿದ್ದಾರೆ. ನಿಮ್ಮ ಮನೆಯಲ್ಲಿ ಎರಡು ಮಕ್ಕಳು ಇದ್ದಾವೆ ಎಂದುಕೊಳ್ಳಿ, ಮೊದಲ ಮಗು ನಿಯಮ ಉಲ್ಲಂಘನೆ ಮಾಡಿದರೆ ನೀವು ಆ ಮಗುವನ್ನ ಶಿಕ್ಷಿಸುವುದು ಬಿಟ್ಟು ಎರಡನೇ ಮಗುವಿಗೆ ಬರೆ ಹಾಕಿ, ಮೊದಲ ಮಗು ಈಗ ದಾರಿಗೆ ಬರುತ್ತದೆ ಎಂದ ಹಾಗಿದೆ ವಿತ್ತ ಸಚಿವರ ಮಾತು. ನಿಮಗೆ ತಿಳಿದಿರಲಿ ಇನ್ಪುಟ್ ಕ್ರೆಡಿಟ್ ತೆಗೆದುಕೊಳ್ಳುವುದರಲ್ಲಿ ಕೂಡ ಭಾರಿ ಅವ್ಯಾವಹಾರಗಳು ನಡೆಯುತ್ತಿವೆ. ವ್ಯಾಪಾರಿಗಳು ವ್ಯವಸ್ಥೆಯಲ್ಲಿರುವ ಲೋಪವನ್ನ ಹುಡುಕಿ ತೆರಿಗೆ ವಂಚನೆ ಮಾಡುವುದು ಇದೆ ಮೊದಲಲ್ಲ, ಹೀಗೆ ತಪ್ಪು ಮಾಡಿದವರನ್ನ ಹಿಡಿದು ಶಿಕ್ಷಿಸುವುದು, ವ್ಯವಸ್ಥೆಯ ಲೋಪವನ್ನ ತಿದ್ದುವುದು ಮಾಡಬೇಕಾಗಿರುವ ಕೆಲಸ. ಎಲ್ಲದಕ್ಕೂ ಸುಲಭವಾಗಿ ಸಿಕ್ಕುವ ಜನ ಸಾಮಾನ್ಯನ ಮೇಲೆ ಇನ್ನಷ್ಟು ಹೊರೆ ಹೊರಿಸಿರುವುದು ಖಂಡಿತ ತಪ್ಪು.
ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಇದಕ್ಕೆಲ್ಲಾ ಕಾರಣ, ಎಲ್ಲವನ್ನೂ ತೆರಿಗೆಯ ಬಲೆಯಲ್ಲಿ ತರಬೇಕು ಎನ್ನುವ ನಿರ್ಧಾರ ಕಾರಣ, ಎಲ್ಲದಕ್ಕೂ ಲೆಕ್ಕ ಬೇಕು ಎನ್ನುವುದು ಸರಕಾರದ ನಿಲುವು. ಭಾರತದಂತಹ ದೊಡ್ಡ ದೇಶದಲ್ಲಿ ಇದು ಅಸಾಧು. ಎಲ್ಲವೂ ಲೆಕ್ಕದಲ್ಲಿ ಬಂದರೆ ಆಗ ನಮ್ಮ ಜಿಡಿಪಿ ಹೆಚ್ಚಾಗುತ್ತದೆ. ಈ ಲೆಕ್ಕಾಚಾರವೇ ತಪ್ಪು ಎಂದು ನನ್ನ ಭಾವನೆ. ಉದಾಹರಣೆ ನೋಡಿ, ನಿಮ್ಮ ನಿತ್ಯದ ನಡಿಗೆ ಇಷ್ಟು ಕಿಲೋಮೀಟರ್ ಎಂದು ನಿಮ್ಮ ಮೊಬೈಲ್ ಟ್ರ್ಯಾಕ್ ಮಾಡುತ್ತಿರುತ್ತದೆ. ಒಂದು ದಿನ ನೀವು ಮೊಬೈಲ್ ಬಿಟ್ಟು ವಾಕ್ ಮಾಡಿ ಬಂದರೂ, ನಿಮ್ಮ ಮೊಬೈಲ್ ಡೇಟಾದಲ್ಲಿ ಅಂದು ನೀವು ವಾಕ್ ಮಾಡಿಲ್ಲ ಎಂದು ದಾಖಲಾಗುತ್ತದೆ. ಈ ಜಿಡಿಪಿ ಕೂಡ ಥೇಟ್ ಹೀಗೆ ಕೆಲಸ ಮಾಡುತ್ತದೆ. ಯಾವುದೆಲ್ಲಾ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಯಲ್ಲಿ ದಾಖಲಾಗದೆ ಹೋಗುತ್ತದೆ ಅವೆಲ್ಲಾ ಜಿಡಿಪಿ ಲೆಕ್ಕಕ್ಕೆ ಬರುವುದಿಲ್ಲ. ಜಿಡಿಪಿ ಲೆಕ್ಕದಲ್ಲಿ ಬರದಿದ್ದರೆ ನೀವು ಜಾಗತಿಕ ಲೆಕ್ಕಾಚಾರದಲ್ಲಿ ಔಟ್ ಆಗಿ ಬಿಡುತ್ತೀರ, ಕೇಂದ್ರ ಸರಕಾರಕ್ಕೆ ಜಾಗತಿಕ ಮಟ್ಟದಲ್ಲಿ ಈಗಿನ ಮನ್ನಣೆ ಕಳೆದುಕೊಳ್ಳಲು ಇಷ್ಟವಿಲ್ಲ. ಒಂದು ಸಣ್ಣ ಉದಾಹರಣೆ ಇದನ್ನ ಮತ್ತಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪಾಶ್ಚಾತ್ಯ ದೇಶದ ಒಂದು ಕುಟುಂಬದಲ್ಲಿ ಗಂಡ, ಹೆಂಡತಿ ಮತ್ತು ಎರಡು ಮಕ್ಕಳಿವೆ ಎಂದುಕೊಳ್ಳಿ. ಗಂಡ ದುಡಿಯಲು ಹೋಗುತ್ತಾನೆ. ಹೆಂಡತಿ ದುಡಿಯಲು ಹೋಗುತ್ತಾಳೆ. ಮಕ್ಕಳ ನೋಡಿಕೊಳ್ಳಲು ಆಯಾ ನೇಮಿಸುತ್ತಾರೆ ಆಕೆ ಸಂಬಳ ಕೊಡುತ್ತಾರೆ. ತಮ್ಮೆಲ್ಲಾ ಖರ್ಚನ್ನ ಕಾರ್ಡ್ ಮೂಲಕ ಮಾಡುತ್ತಾರೆ. ಸರಳವಾಗಿ ಹೇಳಬೇಕೆಂದರೆ ಎಲ್ಲವೂ ದಾಖಲಾಗುತ್ತದೆ. ಗಂಡ-ಹೆಂಡತಿಯ ಸಂಬಳ ಎರಡು ಸಾವಿರ ಎಂದುಕೊಳ್ಳಿ. ಅದು ಜಿಡಿಪಿಯಲ್ಲಿ ದಾಖಲಾಯಿತು. ಅವರು ಅದೇ ಎರಡು ಸಾವಿರದಲ್ಲಿ ತಮ್ಮ ಆಯಾಗೆ ಐನೂರು ಕೊಟ್ಟರು ಎಂದುಕೊಳ್ಳಿ ಅದೂ ಜಿಡಿಪಿಯಲ್ಲಿ ದಾಖಲಾಯಿತು . ಅವರು ಮಾಡಿದ ಖರ್ಚು ಒಂದು ಸಾವಿರ ಎಂದುಕೊಳ್ಳಿ ಅದು ವಹಿವಾಟು ಎಂದು ಯಾವುದೊ ವರ್ತಕ ಡಿಕ್ಲೇರ್ ಮಾಡುತ್ತಾನೆ. ಗಂಡ-ಹೆಂಡತಿ ನಡುವೆ ಇದ್ದ ಕೇವಲ ಎರಡು ಸಾವಿರದಲ್ಲಿ ಅವರು ಸಾವಿರದ ಐನೂರು ಖರ್ಚು ಮಾಡಿದರೂ ಅದು ಮೂರು ಸಾವಿರವಾಗಿ ಮಾರ್ಪಾಡಾಯಿತು. ಆದರೆ ನಮ್ಮಲ್ಲಿ? ವೇತನ ದಾಖಲಾಗುವುದೆಷ್ಟು? ಖರ್ಚಿನಲ್ಲಿ ಬಿಲ್ ಇಲ್ಲದಿದ್ದರೆ, ಖರೀದಿಯಲ್ಲಿ ಬಿಲ್ ಇಲ್ಲದಿದ್ದರೆ ಅದನ್ನ ವರ್ತಕ ತನ್ನ ವಹಿವಾಟು ಎಂದು ತೋರಿಸುವುದಿಲ್ಲ . ಹೀಗೆ ನಮ್ಮ ಒಂದು ಕುಟುಂಬ ಕೂಡ ಸಾವಿರದ ಐನೂರು ಖರ್ಚು ಮಾಡಿದರೂ ಅದು ಪೂರ್ಣ ಜಿಡಿಪಿ ಲೆಕ್ಕಕ್ಕೆ ಬರುವುದಿಲ್ಲ. ಜಿಡಿಪಿ ನಮ್ಮ ಅಭಿವೃದ್ದಿಯನ್ನ ಅಳೆಯುವ ಪೂರ್ಣ ಮಾನದಂಡವಲ್ಲ.
ಕೊನೆಮಾತು: ದೈನಂದಿನ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿರುವ ಸಮಯ ಖಂಡಿತ ತಪ್ಪು, ಜನತೆ ಈಗಾಗಲೇ ಬಹಳಷ್ಟು ಪದಾರ್ಥಗಳ ಮೇಲಿನ ಬೆಲೆ ಏರಿಕೆಯ ಹೊರೆಯಿಂದ ಹೊರಬಂದಿಲ್ಲ , ಜೊತೆಗೆ ಇದನ್ನ ಕೂಡ ಹೇರಿಕೆ ಮಾಡಿರುವುದು ಸರಿಯಲ್ಲ. ಎಲ್ಲಕ್ಕೂ ಮಿಗಿಲಾಗಿ ಕೇಂದ್ರ ಸರಕಾರ ಪಾಶ್ಚಾತ್ಯ ವಿತ್ತ ನೀತಿಯನ್ನ ತನ್ನದಾಗಿಸಿ ಕೊಂಡಿದೆ. ಪಾಶ್ಚಾತ್ಯರಲ್ಲಿ ಮೂಲಭೂತ ಸೌಕರ್ಯಗಳು ಗಟ್ಟಿಯಾಗಿದೆ , ಅಲ್ಲಿ ಅವರು ಪಾಲಿಸುವ ವಿತ್ತ ನೀತಿ ಅವರಿಗೆ ಕೂಡ ಸರಿಯಾಗಿಲ್ಲ ಎನ್ನುವುದು ಕುಸಿದ ಅವರ ಆರ್ಥಿಕ ವ್ಯವಸ್ಥೆಗಳು ಹೇಳುತ್ತಿವೆ. ಹೀಗಿದ್ದೂ ಪಾಶ್ಚಾತ್ಯ ಅಂಧಾನುಕರಣೆ ಸಾಮಾನ್ಯ ಮನುಷ್ಯನ ಜೀವನಕ್ಕೆ ಹೆಚ್ಚಿನ ಪೆಟ್ಟು ನೀಡಿದೆ, ನೀಡಲಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com