ಆರ್ ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್; ಇಲ್ಲಿದೆ ನಿಮಗೆ ಬೇಕಾದ ಮಾಹಿತಿ! (ಹಣಕ್ಲಾಸು)

ಹಣಕ್ಲಾಸು-317-ರಂಗಸ್ವಾಮಿ ಮೂಕನಹಳ್ಳಿ
ಆರ್ ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್;
ಆರ್ ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್;

ಇವತ್ತಿನ ದಿನದಲ್ಲಿ ಪ್ರೈಮರಿ ಮತ್ತು ಸೆಕೆಂಡರಿ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಬಹಳಷ್ಟಿದೆ. ಎಲ್ಲಾ ಹೂಡಿಕೆದಾರರೂ ಒಂದಲ್ಲ ಒಂದು ಸೇವೆ ನೀಡುವ ದಲ್ಲಾಳಿ ಸಂಸ್ಥೆಯ ಮೂಲಕ ಈ ರೀತಿಯ ಕೊಳ್ಳುವ ಮತ್ತು ಮಾರುವ ಕಾರ್ಯವನ್ನ ಮಾಡುತ್ತಿದ್ದಾರೆ. ಈ ರೀತಿಯ ಸೇವೆಯನ್ನ ನೀಡಲು ಇಂತಹ ಸಂಸ್ಥೆಗಳು ಒಂದಷ್ಟು ಕಮಿಷನ್ ಪಡೆಯುತ್ತವೆ. ಖಾಸಗಿ ಸಂಸ್ಥೆಗಳ ಷೇರು, ಬಾಂಡ್ ಇತ್ಯಾದಿಗಳನ್ನ ಕೊಳ್ಳುವುದರ ಮೇಲೆ ಕಮಿಷನ್ ಓಕೆ, ಆದರೆ ಸರಕಾರಿ ಬಾಂಡ್, ಸೆಕ್ಯುರಿಟೀಸ್ ಇವುಗಳ ಖರೀದಿ ಮೇಲೆ ಕೂಡ ಕಮಿಷನ್ ನೀಡುತ್ತಾ ಬಂದಿದ್ದೇವೆ. 

ಸರಕಾರ ಅಥವಾ ಆರ್ಬಿಐ ಹೊರಡಿಸುವ ಇಂತಹ ಸೆಕ್ಯುರಿಟಿಗಳ ಮೇಲೆ ಕಮಿಷನ್ ನೀಡುವ ಅವಶ್ಯಕತೆ ಇನ್ನು ಮುಂದೆ ಇರುವುದಿಲ್ಲ. ಕೇವಲ ಕಮಿಷನ್ ಮಾತ್ರವಲ್ಲ ಇದರ ಜೊತೆಗೆ ಇನ್ನಿತರ ಸೌಲಭ್ಯಗಳು ಕೂಡ ಸಿಗಲಿವೆ. ಇತ್ತೀಚಿಗೆ 'ಆರ್ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್' ಜಾರಿಗೆ  ತರಲಾಗಿದೆ. ನವೆಂಬರ್ 12, 2021 ರಿಂದ ರಿಂದ ಈ ಯೋಜನೆಯನ್ನ ಜಾರಿಗೆ ತರಲಾಗಿದೆ.

ಈ ಯೋಜನೆಯೂ ಕಾರ್ಯಗತವಾಗಿ ಇಂದಿಗೆ 8 ತಿಂಗಳು ಕಳೆದಿದೆ. ಈ ಯೋಜನೆ ಜಾರಿಗೆ ಬಂದ ಕೇವಲ ವಾರದಲ್ಲಿ 3 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರು ಇದರಲ್ಲಿ ನೊಂದಾವಣಿ ಮಾಡಿಕೊಂಡಿದ್ದರೂ, ಮೊದಲಿನ ವೇಗವನ್ನ ಕಾಯ್ದುಕೊಳ್ಳುವುದರಲ್ಲಿ ಈ ಯೋಜನೆ ವಿಫಲವಾಗಿದೆ. ಇದಕ್ಕೆ ಬಹುಮುಖ್ಯ ಕಾರಣಗಳಲ್ಲಿ ಪ್ರಮುಖವಾಗಿ:  

  1. ಇದರ ಬಗ್ಗೆ ಜನ ಸಾಮಾನ್ಯರಿಗೆ ಮತ್ತು ಹೂಡಿಕೆದಾರರಿಗೆ ಹೆಚ್ಚಿನ ಮಾಹಿತಿ ಇಲ್ಲ: ಸಾಮಾನ್ಯ ಹೂಡಿಕೆದಾರನಿಗೆ ಇಂತಹ ಒಂದು ಯೋಜನೆ ಜಾರಿಗೆ ಬಂದಿದೆ ಎನ್ನುವುದು ಕೂಡ ಗೊತ್ತಿಲ್ಲ ಎನ್ನುವುದು ಇಂದಿನ ಮಾಹಿತಿ ತಂತ್ರಜ್ಞಾನ ಯುಗದ ವಿಪರ್ಯಾಸ ಎನ್ನಬಹುದು. ಗ್ರಾಹಕ/ಹೂಡಿಕೆದಾರ ನೇರವಾಗಿ ಸರಕಾರಿ ಬಾಂಡ್ ಮತ್ತಿತರ ಇನ್ಸ್ಟ್ರುಮೆಂಟ್ ಗಳಲ್ಲಿ ಹೂಡಿಕೆ ಮಾಡಲು ಶುರು ಮಾಡಿದರೆ, ಮಧ್ಯವರ್ತಿ ದಲ್ಲಾಳಿ ಸಂಸ್ಥೆಗಳಿಗೆ ಭಾರಿ ಪೆಟ್ಟು ಬೀಳುತ್ತದೆ. ಗಮನಿಸಿ ಈ ಯೋಜನೆಯಲ್ಲಿ ಪ್ರೈಮರಿ ಮತ್ತು ಸೆಕೆಂಡರಿ ಎರಡೂ ಮಾರುಕಟ್ಟೆಯಲ್ಲಿ ಭಾಗವಹಿಸುವ ಅವಕಾಶವಿದೆ. ಹೀಗಾಗಿ ದಲ್ಲಾಳಿ ಸಂಸ್ಥೆಗಳಿಗೆ ಒಂದಷ್ಟು ಆದಾಯ ಕುಸಿತವಾಗುವುದು ಗ್ಯಾರಂಟಿ. ಹೀಗಾಗಿ ಮಾಹಿತಿ ಹಂಚಬೇಕಾಗಿದ್ದ ಮಾರ್ಗಗಳು ಪೂರ್ಣವಾಗಿ ಇದರ ಬಗ್ಗೆ ಮಾಹಿತಿ ಹಂಚಿಲ್ಲ, ಇದಕ್ಕೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ.
  2. ಸರಕಾರ ನೀಡದ ಪ್ರಚಾರ: ಇಂತಹ ಒಂದು ಯೋಜನೆ ಜಾರಿಗೆ ತಂದ ಮೇಲೆ ಇದರ ಬಗ್ಗೆ ಆರ್ ಬಿಐ ಅಥವಾ ಸರಕಾರ ಒಂದಷ್ಟು ಮಾಹಿತಿಯನ್ನ ಹಂಚುವ, ಪ್ರಚಾರ ಮಾಡುವ ಕೆಲಸ ಮಾಡಬೇಕು. ಅಂತಹ ವ್ಯಾಪಕ ಪ್ರಚಾರ ಕೂಡ ಈ ಯೋಜನೆಗೆ ಸಿಕ್ಕಿಲ್ಲ. ನೆನಪಿರಲಿ ದಲ್ಲಾಳಿ ಮನಸ್ಥಿತಿಯ ಸಲಹೆಗಾರರು ಮತ್ತು ಸಂಸ್ಥೆಗಳು ಬೇಗ ಇಂತಹ ಯೋಜನೆಗೆ ಕೈ ಜೋಡಿಸುವುದಿಲ್ಲ.

ಏನಿದು 'ಆರ್ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್'?

ಸರಕಾರ ಹೊರಡಿಸುವ ಯಾವುದೇ ಸೆಕ್ಯುರಿಟೀಸ್ ಗಳನ್ನ ನೇರವಾಗಿ, ಮಧ್ಯವರ್ತಿಯ ಸಹಾಯವಿಲ್ಲದೆ, ಆನ್ಲೈನ್ ಮೂಲಕ ಕೊಳ್ಳಲು ಇರುವ ಒಂದು ಮಾರ್ಗಕ್ಕೆ ಆರ್ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್ ಎನ್ನುವ ಹೆಸರನ್ನ ಇಡಲಾಗಿದೆ. ಆನ್ಲೈನ್ ಮೂಲಕ ಖಾತೆಯನ್ನ ತೆಗೆಯಬೇಕಾಗುತ್ತದೆ.ಈ ಖಾತೆಗೆ ರಿಟೇಲ್ ಡೈರೆಕ್ಟ್ ಗಿಲ್ಟ್ (RDG )ಅಕೌಂಟ್ ಎಂದು ಕರೆಯಲಾಗುತ್ತದೆ. ಒಮ್ಮೆ ಖಾತೆ ತೆಗೆದ ನಂತರ ಸರಕಾರ ಹೊರಡಿಸುವ ಎಲ್ಲಾ ರೀತಿಯ ಪರಿಕರಗಳನ್ನ ಈ ಮೂಲಕ ಕೊಳ್ಳುವುದು ಮತ್ತು ಮಾರುವುದು ಮಾಡಬಹುದು. ಇದಕ್ಕಾಗಿ ಮೀಸಲಾಗಿರುವ ವೆಬ್ ಸೈಟ್ ಹೀಗಿದೆ: https://rbiretaildirect.org.in

ಇಂತಹ RDG ಅಕೌಂಟ್ ತೆಗೆಯುವುದರಿಂದ ಹೂಡಿಕೆದಾರರಿಗೆ ಏನು ಲಾಭ ?

ಎಲ್ಲದಕ್ಕೂ ಮೊದಲಿಗೆ ಇಂತಹ ಖಾತೆ ತೆಗೆಯುವುದರ ಮೂಲಕ ಎಲ್ಲಾ ರೀತಿಯ ಇನ್ಸ್ಟ್ರುಮೆಂಟ್ ಗಳನ್ನ ಕೊಳ್ಳಲು ಸಾಧ್ಯವಿಲ್ಲ . ಕೇವಲ ಸರಕಾರ ಹೊರಡಿಸುವ ಪರಿಕರಗಳನ್ನ ಮಾತ್ರ ಕೊಳ್ಳಲು ಮತ್ತು ಮಾರಲು ಸಾಧ್ಯ. ಇದೊಂದು ನಾವು ನೆನಪಿನಲ್ಲಿಡಬೇಕು, ಇದನ್ನ ಹೊರತು ಪಡಿಸಿದರೆ ಬಹಳಷ್ಟು ಲಾಭಗಳು ಹೂಡಿಕೆದಾರನಿಗೆ ಸಿಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳನ್ನ ನೋಡೋಣ .

  1. ಗವರ್ನಮೆಂಟ್ ಸೆಕ್ಯುರಿಟೀಸ್ ಗಳಲ್ಲಿ ಅಪಾಯ ಬಹಳ ಕಡಿಮೆ: ನಿಮಗೆಲ್ಲಾ ತಿಳಿದಿರುವಂತೆ ಸರಕಾರ ಹೊರಡಿಸುವ ಮುಚ್ಚಳಿಕೆ ಪತ್ರಗಳಲ್ಲಿ ಹೂಡಿಕೆ ಮಾಡುವುದರಲ್ಲಿ ಅಪಾಯ ಬಹಳ ಕಡಿಮೆ. ಸರಕಾರವೇ ಹೊರಡಿಸಿರುವ ಕಾರಣ ಇದಕ್ಕೆ ಸರಕಾರದ ಅಭಯವಿದ್ದೇ ಇರುತ್ತದೆ. ಅಷ್ಟರ ಮಟ್ಟಿಗೆ ನಮ್ಮ ಹೂಡಿಕೆ ಸೇಫ್. ಅಪಾಯ ಎನ್ನುವುದು ತೀರಾ ಗೌಣವಾಗಿರುತ್ತದೆ.
  2. ದೀರ್ಘಾವಧಿಯಲ್ಲಿ ಉತ್ತಮ ಲಾಭವನ್ನ ನೀಡುತ್ತದೆ: ಸರಕಾರಿ ಸೆಕ್ಯುರಿಟೀಸ್ ಎಂದರೆ ಸಾಮಾನ್ಯವಾಗಿ ಲಾಭಾಂಶ ಕಡಿಮೆ ಎನ್ನುವ ಭಾವನೆ ಎಲ್ಲರಲ್ಲೂ ಇದೆ. ಇದು ಪೂರ್ಣ ಸುಳ್ಳೇನಲ್ಲ. ಇದಕ್ಕೆ ಕಾರಣ ಮೂಲಧನಕ್ಕೆ ಸರಕಾರ ನೀಡುವ ಭದ್ರತೆ. ಆದರೆ ದೀರ್ಘಾವಧಿಯಲ್ಲಿ ಬೇರೆ ರೀತಿಯ ಹೂಡಿಕೆಗಳನ್ನ ಮೌಲ್ಯ ಮಾಪನ ಮಾಡಿ, ತುಲನೆ ಮಾಡಿ ನೋಡಿದಾಗ ಸರಕಾರಿ ಭದ್ರತೆ ಹೂಡಿಕೆಗಳು ಕೂಡ ಉತ್ತಮ ಇಳುವರಿಯನ್ನ ನೀಡುತ್ತವೆ. ಬೇರೆಯ ಹೂಡಿಕೆಗಳು ಷೇರು ಮಾರುಕಟ್ಟೆಯ ಏರಿಳಿತಕ್ಕೆ ತಕ್ಕಂತೆ ಕುಣಿಯುತ್ತವೆ , ಇಲ್ಲಿ ಹೂಡಿಕೆದಾರರಿಗೆ ಆ ತಲೆನೋವು ಇಲ್ಲ.
  3. ಹೆಚ್ಚಿನ ಅಪಾಯ ತೆಗೆದುಕೊಳ್ಳುವ ಮನಸಿದ್ದರೆ ಅದಕ್ಕೂ ಇದೆ ದಾರಿ: ಮೊದಲ ಎರಡು ಅಂಶಗಳನ್ನ ಗಮನಿಸಿ, ಅಲ್ಲಿ ನಮಗಾವುದೇ ಅಪಾಯವಿಲ್ಲ, ಆದರೆ ಅದಕ್ಕೆ ತಕ್ಕಂತೆ ಲಾಭವಿರುತ್ತದೆ. ಇದಕ್ಕೂ ಮೀರಿದ ಅಪಾಯವನ್ನ ತೆಗೆದುಕೊಳ್ಳುವ ಮನಸಿದ್ದರೆ ಅದಕ್ಕೂ ಇಲ್ಲಿ ದಾರಿಯಿದೆ. ಹೀಗಾಗಿ ಅದು ಮಾರುಕಟ್ಟೆಯ ಏರಿಳಿತಕ್ಕೆ ಒಳಪಡುತ್ತವೆ. ಮಾರುಕಟ್ಟೆ ಏರಿಕೆ ಕಂಡರೆ ಕ್ಯಾಪಿಟಲ್ ಗೈನ್ ಆಗುತ್ತದೆ, ಇಲ್ಲವೇ ಕ್ಯಾಪಿಟಲ್ ಲಾಸ್.
  4. ಸಾಕಷ್ಟು ಲಿಕ್ವಿಡಿಟಿ ಕೂಡ ಇರಲಿದೆ: ಅಂದರೆ ಗಮನಿಸಿ, ಒಮ್ಮೆ ಹೂಡಿಕೆ ಮಾಡಿದ ನಂತರ ಇದನ್ನ ಇಷ್ಟು ವರ್ಷ ನಿಮ್ಮ ಬಳಿಯೇ ಇಟ್ಟು ಕೊಳ್ಳಬೇಕು ಎನ್ನುವ ನಿಯಮಗಳೇನು ಇಲ್ಲಿಲ್ಲ. ನಿಮಗೆ ಹಣ ಬೇಕೆನಿಸಿದರೆ ಸೆಕೆಂಡರಿ ಮಾರುಕಟ್ಟೆಯಲ್ಲಿ ಇದನ್ನ ಅಂದಿನ ಮಾರುಕಟ್ಟೆ ಬೆಲೆಗೆ ಮಾರಿಕೊಳ್ಳುವ ಅವಕಾಶವಿದೆ.
  5. ಮಧ್ಯವರ್ತಿಯ ಸಹಾಯವಿಲ್ಲದ ಕಾರಣ ಒಂದಷ್ಟು ಖರ್ಚು ಉಳಿಯುತ್ತದೆ: ಗಮನಿಸಿ ಪ್ರೈಮರಿ ಮತ್ತು ಸೆಕೆಂಡರಿ ಎರಡೂ ಮಾರುಕಟ್ಟೆಯಲ್ಲಿ ಕೂಡ ಮಧ್ಯವರ್ತಿಯ ಸಹಾಯವಿಲ್ಲದೆ ಎಷ್ಟು ಬಾರಿ ಬೇಕಾದರೂ ಮಾರುವ, ಕೊಳ್ಳುವುದನ್ನ ಮಾಡಬಹುದು. ಹೀಗಾಗಿ ಮಧ್ಯವರ್ತಿ ಸಂಸ್ಥೆಗಳಿಗೆ ನೀಡಬೇಕಾಗಿದ್ದ ಕಮಿಷನ್ ಉಳಿತಾಯವಾಗುತ್ತದೆ. ವರ್ಷಾಂತ್ಯದಲ್ಲಿ ಕುಳಿತು ಲೆಕ್ಕಾಚಾರ ಮಾಡಿದರೆ ಇಂತಹ ಕಮಿಷನ್ ನೀಡದೆ ಉಳಿಸಿದ ಹಣ ಕೂಡ ದೊಡ್ಡ ಮೊತ್ತವಾಗಿರುತ್ತದೆ.

ಮೇಲಿನ ಸಾಲುಗಳಲ್ಲಿ ಹಲವಾರು ಬಾರಿ ಗವರ್ನಮೆಂಟ್ ಸೆಕ್ಯುರಿಟೀಸ್ ಎನ್ನುವುದನ್ನ ಬಳಸಿದ್ದೀರಿ, ಹೀಗಂದರೇನು? ಏನೆಲ್ಲಾ ಇದರಡಿಯಲ್ಲಿ ಬರುತ್ತದೆ ಎನ್ನುವ ಸಂಶಯ ಓದುಗರಲ್ಲಿ ಈ ವೇಳೆಗೆ ಬಂದಿರುವುದು ಸಹಜ. ಗಮನಿಸಿ;

  • ಗವರ್ನಮೆಂಟ್ ಆಫ್ ಇಂಡಿಯಾ ಟ್ರೆಷರಿ ಬಿಲ್ಸ್ (ಟಿ-ಬಿಲ್ಸ್)
  • ಗವರ್ನಮೆಂಟ್ ಆಫ್ ಇಂಡಿಯಾ ಡೇಟೆಡ್ ಸೆಕ್ಯುರಿಟೀಸ್
  • ಸ್ಟೇಟ್ ಡೆವಲಪ್ಮೆಂಟ್ ಲೊನ್ಸ್  (SDL's )
  • ಸಾವರಿನ್ ಗೋಲ್ಡ್ ಬಾಂಡ್ಸ್ (SLB )

ಇವುಗಳನ್ನ RDG ಅಕೌಂಟ್ ತೆಗೆಯುವುದರ ಮೂಲಕ ಮಧ್ಯವರ್ತಿಗಳ ಸಹಾಯವಿಲ್ಲದೆ ಎರಡೂ ಮಾರುಕಟ್ಟೆಯಲ್ಲಿ ಟ್ರೇಡ್ ಮಾಡಬಹುದು.

ಈ ಖಾತೆಯನ್ನ ತೆರೆಯಲು ಯಾರು ಅರ್ಹರು?

ಭಾರತೀಯ ನಾಗರೀಕರು, ಇನ್ಕಮ್ ಟ್ಯಾಕ್ಸ್ನ 'ಪರ್ಸನ್' ಅಡಿಯಲ್ಲಿ ಬರುವ ಎಲ್ಲರೂ ಈ ಖಾತೆಯನ್ನ ತೆರೆಯಲು ಅರ್ಹರು. ಅನಿವಾಸಿ ಭಾರತೀಯರು ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ 1999ರ ನಿಬಂಧನೆಗಳಿಗೆ ತಕ್ಕಂತೆ ಹೂಡಿಕೆ ಮಾಡುವ ಹಕ್ಕನ್ನ ಪಡೆದಿರುತ್ತಾರೆ. ಉಳಿದಂತೆ ಭಾರತದಲ್ಲಿ ರೂಪಾಯಿ ಬ್ಯಾಂಕ್ ಅಕೌಂಟ್ ಇರಬೇಕು, ಪಾನ್ ಕಾರ್ಡ್, ಗುರುತಿನ ಚೀಟಿ, ನೊಂದಾಯಿತ ಮೇಲ್ ಅಕೌಂಟ್ ಮತ್ತು ನೊಂದಾಯಿತ ಮೊಬೈಲ್ ಕಡ್ಡಾಯವಾಗಿ ಬೇಕಾಗುತ್ತದೆ. ಒಬ್ಬರು ಒಂದು ಖಾತೆಯನ್ನ ಮಾತ್ರ ತೆಗೆಯಲು ಅವಕಾಶವಿರುತ್ತದೆ. ಜಂಟಿ ಖಾತೆಯನ್ನ ಹೊಂದಿದ್ದು, ನೀವು ದ್ವಿತೀಯ ಖಾತೆದಾರರಾಗಿದ್ದರೆ ನಿಮ್ಮ ಹೆಸರಿನಲ್ಲಿ ಇನ್ನೊಂದು ಖಾತೆ ತೆರೆಯುವ ಅವಕಾಶವಿರುತ್ತದೆ.

ಈ ಖಾತೆಗೆ ಸಂಬಂಧಿಸಿದಂತೆ ಆರ್ಬಿಐ ಖಾತೆದಾರರಿಗೆ ಪ್ರತಿ ತಿಂಗಳೂ ಅಕೌಂಟ್ ಸ್ಟೇಟ್ಮೆಂಟ್ ನೀಡುತ್ತದೆ, ನಾಮಿನೇಷನ್ ಅವಕಾಶ ಕಲ್ಪಿಸಿದೆ, ದೂರುಗಳನ್ನ, ಅಹವಾಲುಗಳನ್ನ ಸ್ವೀಕರಿಸಲು ಅದಕ್ಕೆ ಸಮಾಧಾನವನ್ನ ನೀಡುವ ಕೆಲಸವನ್ನ ಮಾಡುತ್ತದೆ.

ಈ ವೆಬ್ ಲಿಂಕ್ ಬಳಸಿ https://rbiretaildirect.org.in ಅರ್ಹ ಹೂಡಿಕೆದಾರರು ಖಾತೆ ತೆರೆಯಬಹುದು. ಮೇಲೆ ಹೇಳಿದ ಅವಶ್ಯಕ ಮಾಹಿತಿಗಳನ್ನ ಬಳಿ ಇಟ್ಟುಕೊಂಡು ಖಾತೆಯನ್ನ ತೆರೆಯಬಹುದು. ಈ ಪ್ರಕ್ರಿಯೆ ಐದರಿಂದ ಹತ್ತು ನಿಮಿಷದಲ್ಲಿ ಮುಗಿದು ಹೋಗುತ್ತದೆ. ಕಡಿಮೆ ಶ್ರಮ, ಹೆಚ್ಚು ಲಾಭ.

ಕೊನೆಮಾತು: ಈ ಯೋಜನೆ ಹೆಚ್ಚಿನ ಅಪಾಯ ಬೇಡ ಎನ್ನುವ ಹೂಡಿಕೆದಾರರ ಪಾಲಿಗೆ ವರದಾನವಾಗಿದೆ. ಇಲ್ಲಿ ಮಧ್ಯವರ್ತಿಗಳ ಕಾಟವಿಲ್ಲ, ನೇರವಾಗಿ ನೀವೇ ನಿಮ್ಮ ಬ್ಯಾಂಕ್ ಖಾತೆಯನ್ನ ನಿರ್ವಹಿಸದಷ್ಟೇ ಸಲೀಸಾಗಿ ಇದನ್ನ ನಿರ್ವಹಿಸಬಹುದು. ಇದರ ಜೊತೆಗೆ ಸ್ವಲ್ಪ ಹೆಚ್ಚಿನ ಅಪಾಯವನ್ನ ತೆಗೆದುಕೊಳ್ಳುವ ಉತ್ಸಾಹಿ ಹೂಡಿಕೆದಾರರಿಗೆ ಕೂಡ ಇದು ಚಾಯ್ಸ್ ನೀಡುತ್ತದೆ. ಹೀಗಾಗಿ ಇದು ಸರಕಾರ ಹೊರಡಿಸುವ ಭದ್ರತೆಯ ಪತ್ರಗಳ ಮೇಲೆ ಹೂಡಿಕೆ ಮಾಡುವವರಿಗೆ ಹೇಳಿ ಮಾಡಿಸಿದ ಯೋಜನೆಯಾಗಿದೆ. ದೀರ್ಘಾವಧಿ ಹೂಡಿಕೆದಾರರಿಗೆ ಕೂಡ ಇದು ವರದಾನವಾಗಲಿದೆ. ಸರಕಾರ ನೀಡಿರುವ ಈ ಸೌಲಭ್ಯವನ್ನ ಹೂಡಿಕೆದಾರರು ಸಂಶಯ, ಭಯವಿಲ್ಲದೆ ಬಳಸಿಕೊಳ್ಳಬಹುದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com