ಹೂಡಿಕೆಯ ಮೇಲಿರಲಿ ಹೆಚ್ಚಿನ ನಿಗಾ; ಹತ್ತಿರದಲ್ಲೇ ಇದೆ ಇನ್ನೊಂದು ಆರ್ಥಿಕ ಕುಸಿತ! (ಹಣಕ್ಲಾಸು)

ಹಣಕ್ಲಾಸು-316-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಕ್ರಿಕೆಟ್ ಮೈದಾನದಲ್ಲಿ ಗಳಿಸಿದ ಪ್ರಸಿದ್ದಿಯನ್ನು ಬಳಸಿಕೊಂಡು ಮಹಿಂದರ್ ಸಿಂಗ್ ಧೋನಿ  ಬ್ರಾಂಡ್ ಆಗಿ ಬೆಳೆದದ್ದು, ರಿಟೈರ್ ಆದ ಮೇಲೂ ಸಮಾಜದಲ್ಲಿ ಪ್ರಸ್ತುತರಾಗಿರಲು ಬ್ರಾಂಡ್ ವ್ಯಾಲ್ಯೂ ಉಳಿಸಿಕೊಳ್ಳಲು ಅವರು ಮಾಡುವ ಸರ್ಕಸ್ ಎಲ್ಲಾ ನೋಡುತ್ತಲೇ ಬಂದಿದ್ದೇವೆ. ಆತನ ಬದುಕಿನ ಬಹಳಷ್ಟು ಭಾಗ ನಮ್ಮ ಜನರಿಗೆ ಬಾಯಿ ಪಾಠ ಆಗಿಹೋಗಿದೆ ಹೀಗಿದ್ದೂ ಆತನ ಕುರಿತ ಚಲನಚಿತ್ರದ ಮೊದಲ ದಿನದ ಗಳಿಕೆ ಕೋಟಿಗಳಲ್ಲಿ ಎನ್ನುವುದು ನಮ್ಮ ಜನರ ಬೇಕು ಬೇಡಗಳು ಎಷ್ಟರ ಮಟ್ಟಿಗೆ ಯೋಜನಾಬದ್ದವಾಗಿವೆ ಎಂದು ತೋರಿಸುತ್ತದೆ. ಆತನೇನೂ ನಲವತ್ತರ ಆಸು ಪಾಸಿಗೆ ರಿಟೈರ್ ಆಗಿ ನಂತರವೂ ಪ್ರಸ್ತುತನಾಗುತ್ತಾನೆ. ಧೋನಿ , ತೆಂಡೂಲ್ಕರ್ , ಸೆಹ್ವಾಗ್   ಕೇವಲ ಒಂದು ಉದಾಹರಣೆ ಅವರಂತೆ  ಹಣಕಾಸಿನ ಆಟದಲ್ಲಿ ಜಿಗಿತದ ಮೇಲೆ ಜಿಗಿತ, ಹಿಡಿತ ಸಾಧಿಸುತ್ತ ಹೋಗುವರ ಪಟ್ಟಿ ದೊಡ್ಡದಿದೆ. ಭಾರತೀಯ ಚಲನಚಿತ್ರರಂಗ ಹಿಂದೆಂದೂ ಕಂಡು ಕೇಳರಿಯದ ಕಲೆಕ್ಷನ್ ಮಾಡ ತೊಡಗಿದೆ.  ಶತ ಕೋಟಿ ಕ್ಲಬ್ ಎನ್ನುವುದು ತುಚ್ಛ ಎನ್ನುವ ಮಟ್ಟಕ್ಕೆ ಹೋಗಲಿದೆ. ಆ ಜಾಗವನ್ನು ಸಾವಿರ ಕೋಟಿ ಆಕ್ರಮಿಸಲಿದೆ. ನಮ್ಮ ಸಮಾಜದ ಒಂದು ವರ್ಗ ‘ನಾಳಿನ ‘ ಚಿಂತೆಯಲ್ಲಿದ್ದರೆ ಇನ್ನೊಂದು ಬೆರಳೆಣಿಕೆಯ ವರ್ಗ ಹೊಸ ಮೈಲಿಗಲ್ಲು ಸಾಧಿಸುತ್ತಾ ಹೋಗುತ್ತಿದೆ. ಇರಲಿ ಅದು ಅವರ ಯಶಸ್ಸು.

ಮಾಸಿಕ ಐವತ್ತು ಸಾವಿರ ಸಂಬಳ ಪಡೆಯುವ ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP) ನಲ್ಲಿ ಪ್ರತಿ ತಿಂಗಳು ಐದು ಸಾವಿರ ಹಾಕುತ್ತ ಹೋಗುತ್ತಾನೆ. ರಿಟೈರ್ಮೆಂಟ್ ವೇಳೆಗೆ ಅಥವಾ ಮಗನ/ ಮಗಳ ಹೆಚ್ಚಿನ ವ್ಯಾಸಂಗ ಹೀಗೆ ಯಾವುದೊ ಕಾರಣಕ್ಕೆ ಆತ ಹೂಡಿಕೆ ಮಾಡುತ್ತಾ ಹೋಗುತ್ತಾನೆ. ಬಣ್ಣ ಬಣ್ಣದ ಅಂಕಿ-ಅಂಶ ಮಂಡಿಸುವ ಇಂತಹ ಪ್ಲಾನ್ ಕೊಡುವರು ಬದಲಾದ/ ಬದಲಾಗುವ ಸನ್ನಿವೇಶವನ್ನು ಅವರಿಗೆ ಮನದಟ್ಟು ಮಾಡಿಸುವುದೆ ಇಲ್ಲ. ತಿಂಗಳಿಗೆ ಇಷ್ಟು ಹೂಡಿಕೆ ಮಾಡುತ್ತಾ ಇದ್ದೇನೆ ನಾನು ಸುರಕ್ಷಿತ ಎನ್ನುವ ಭಾವನೆಯಿಂದ ಬದುಕು ಸಾಧ್ಯವಿಲ್ಲ.

ಇನ್ನು ಸಮಾಜದಲ್ಲಿ ಇರುವ ರಿಟೈರ್ಮೆಂಟ್ ಪ್ಲಾನ್ ಗಳ ಪಟ್ಟಿಯೂ ದೊಡ್ಡದಿದೆ. ಅವುಗಳು ಕೂಡ ಕೊಡುವ ಹೇಳಿಕೆ ನೋಡಿದರೆ ಛೇ ನಾನ್ಯಕೆ ಇಲ್ಲಿ ಹೂಡಿಕೆ ಮಾಡಲು ಇಷ್ಟು ತಡಮಾಡಿದೆ ಎನ್ನುವ ಪಶ್ಚಾತಾಪದ ಭಾವನೆ ನಿಮ್ಮ ಮನದಲ್ಲಿ ಮೂಡದಿದ್ದರೆ ಕೇಳಿ ಅಷ್ಟು ವರ್ಣರಂಜಿತ ಜಾಹಿರಾತು ನೀಡುತ್ತವೆ. ಟರ್ಮ್ ಪ್ಲಾನ್ ಗಳಲ್ಲಿ ಹಲವು ವಾರ್ಷಿಕ ಹತ್ತು ಸಾವಿರ ಹೆಚ್ಚು ಕಂತು ಕಟ್ಟಿದರೆ ರಿಟೈರ್ ಆದ ಬಳಿಕ ಸಾಯುವವರೆಗೆ ಐವತ್ತು ಸಾವಿರ ಮಾಸಿಕ ಪಿಂಚಣಿ ನೀಡುತ್ತೇವೆ ಎನ್ನುವ ಹೇಳಿಕೆ ಕೂಡ ನೀಡುತ್ತಾರೆ. ಇದು ಹೇಗೆ ಸಾಧ್ಯ? ಇವರ ಹೇಳಿಕೆ ಸಾಧುವೆ? ಎನ್ನುವ ವಿವೇಚನೆ ಕೂಡ ಮಾಡದೆ ಹೂಡಿಕೆ ಮಾಡುತ್ತಾರೆ ನಮ್ಮ ‘ಎಜುಕೇಟೆಡ್’ ಜನ.

ನೆನಪಿಡಿ ಈ ಎಲ್ಲಾ ರೀತಿಯ ಪ್ಲಾನ್ ಗಳು ಕೆಲವು ಊಹೆಗಳನ್ನು (ಅಸಂಶನ್) ಮಾಡಿಕೊಳ್ಳುತ್ತವೆ. ಆ ಊಹೆಗಳನ್ನು ತಿಳಿಸಿ ಹೇಳುವ ದರ್ದು ಅವಕ್ಕಿಲ್ಲ. ರಸ್ತೆಯ ಮೇಲೆ ತಳ್ಳುವ ಗಾಡಿಯ ಮೇಲೆ ಬರುವ ಟೊಮೊಟೊ ಹಣ್ಣನ್ನು ಕೊಳ್ಳುವವರು ಮೊದಲು ವಿಚಾರಿಸಿ, ತಪಾಸಣೆ ಮಾಡಿ ಖರೀದಿಸುತ್ತಾರೆ ಸಮಾಧಾನದ ಒಂದಂಶವನ್ನು ಇಂತಹ ಪ್ಲಾನ್ ಗಳು ಕೊಳ್ಳುವಾಗ ಜನರು ತೋರುವುದಿಲ್ಲ. ಸಮಯ ಸರಿಯಾಗಿದ್ದಾಗ ಇದ್ಯಾವುದೂ ಅಷ್ಟು ಮುಖ್ಯವಾಗುವುದೂ ಇಲ್ಲ. ಪ್ರಶ್ನೆ ಅಥವಾ ಸಮಸ್ಯೆ ಉದ್ಭವವಾಗುವುದು ಕೆಟ್ಟ ಸಮಯದಲ್ಲಿ. ನಾವೀಗ ಅಂತ ಸಮಯದಲ್ಲಿದ್ದೇವೆ. ಮುಂಬರುವ ದಿನಗಳು ಮತ್ತಷ್ಟು ಆರ್ಥಿಕ ಅತಂತ್ರತೆಯನ್ನು ಸೃಷ್ಟಿಸಲಿವೆ. ಆರ್ಥಿಕವಾಗಿ ಒಳ್ಳೆಯ ವೇಳೆಯಲ್ಲಿ ನೀವು ಮಾಡಿದ ಹೂಡಿಕೆ ಕೂಡ ಹೊಡೆತ ತಿನ್ನಬಹುದು. ಹಾಗಾದರೆ ಕೈ ಕಟ್ಟಿ ಕುಳಿತು ಬಿಡೋಣವೇ?  ಕೈ ಕಟ್ಟಿ ಕುಳಿತರೆ ಅದು ಸಮಸ್ಯೆಗೆ ಪರಿಹಾರವಲ್ಲ. ನೀವು ಈಗಾಗಲೇ ಇಂತಹ ಅನೇಕ ಪ್ಲಾನ್ ಗಳಲ್ಲಿ ಹೂಡಿಕೆ ಮಾಡಿದ್ದರೆ ಅಥವಾ ಮಾಡುವರಿದ್ದರೆ ಕೆಳಕಂಡ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಹೂಡಿಕೆ ಮಾಡಿ. ನೆನಪಿಡಿ ನಿಮ್ಮ ಹಣ ನಿಮ್ಮ ಕೈಯಿಂದ ಜಾರಿದ ಮರುಕ್ಷಣ ಅದು ನಿಮ್ಮದಲ್ಲ.

  1. ಮುಕ್ಕಾಲು ಪಾಲು ಇಂತಹ ಪ್ಲಾನ್ ಗಳು ನೇರವಾಗಿ ಫೈನಾನ್ಸಿಯಲ್ ಮಾರ್ಕೆಟ್ ಮೇಲೆ ಅವಲಂಬಿತವಾಗಿರುತ್ತವೆ. ಫೈನಾನ್ಸಿಯಲ್ ಮಾರ್ಕೆಟ್ ಗಳ ಪೂರ್ಣ ರೀತಿರಿವಾಜು ತಿಳಿದುಕೊಳ್ಳುವುದು ಕಷ್ಟ ಸಾಧ್ಯ. ಆದರೆ ಇವುಗಳ ನಡವಳಿಕೆಯ ಕನಿಷ್ಟ ಜ್ಞಾನ ನಿಮ್ಮದಾಗಿರಲಿ.
  2. ಕುಸಿಯುತ್ತಿರುವ ಬಡ್ಡಿ ದರದ ಕಡೆ ನಿಮ್ಮ ಗಮನವಿರಲಿ. ನೀವು ಕೊಂಡಿರುವ ಪ್ಲಾನ್ ಅನ್ನು ಈ ಲೇಖನ ಓದಿದ ಮರುಗಳಿಗೆ ತೆಗೆದು ನೋಡಿ. ಅವರು ಕಟ್ಟಿ ಕೊಟ್ಟ ಕನಸು, ನಿಮಗೆ ನಿಗದಿತ ಅವಧಿಯ ನಂತರ ಸಿಗುತ್ತದೆ ಎಂದು ಹೇಳಿದ ಮೊತ್ತ  ಇಂದಿನ ಬದಲಾದ ಸನ್ನಿವೇಶದಲ್ಲಿ ಸಿಗುತ್ತದೆಯೇ ಗಮನಿಸಿ.  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ ಟಾರ್ಗೆಟ್ ಬಡ್ಡಿ ದರ ಎಷ್ಟು  ಎನ್ನುವುದು ನಿಮಗೆ ಗೊತ್ತೇ? ಇಂದಿನ ದಿನದಲ್ಲಿ ಬಡ್ಡಿ ಒಂದಷ್ಟು ಏರಿಕೆಯ ಹಂತದಲ್ಲಿದೆ . ಮುಂಬರುವ ವರ್ಷಗಳಲ್ಲಿ ಅದು ಮತ್ತೆ ಕುಸಿತ ಕಾಣುವುದಿಲ್ಲ ಎಂದು ಹೇಳಲು ಬಾರದು. ಹೀಗಾಗಿ ನಿಮ್ಮ ರಿಟೈರ್ಮೆಂಟ್ ಪ್ಲಾನ್ ಅದರ ಮೇಲಿನ ಹೂಡಿಕೆ, ಹಿಂದಿನ ಲೆಕ್ಕಾಚಾರ ಎಲ್ಲಾ ಉಲ್ಟಾ. ಇದು ಮರು ಲೆಕ್ಕಾಚಾರ ಬಯಸುತ್ತದೆ.
  3. ಹಣದುಬ್ಬರ ಇನ್ನೊಂದು ಅತಿ ಮುಖ್ಯ ಅಂಶ. ಮುಂದಿನ ಹತ್ತೋ ಅಥವಾ ಇಪ್ಪತ್ತೋ ವರ್ಷದ ನಂತರ ಬದುಕ ಸಾಗಿಸಲು ಎಷ್ಟು ಹಣ ಬೇಕು ಎನ್ನುವ ಲೆಕ್ಕಾಚಾರ ಮಾಡಲು ಹಣದುಬ್ಬರ ಸಹಾಯ ಮಾಡುತ್ತೆ . ದುಃಖದ ವಿಷಯವೆಂದರೆ ಭಾರತದಂತ ದೇಶದಲ್ಲಿ ಹಣದುಬ್ಬರ ಅಂಕಿಅಂಶದಲ್ಲಿ ತೂರಿಸುವುದಕ್ಕೂ ಮಾರುಕಟ್ಟೆಯಲ್ಲಿ ಇರುವ ಹಣದುಬ್ಬರಕ್ಕೂ ಅಂತರ ಬಹಳ ಹೆಚ್ಚು. ಮುಕ್ಕಾಲು ಪ್ಲಾನ್ ಗಳು ಪೇಪರ್ ಮೇಲಿನ ಹಣದುಬ್ಬರ ಬಳಸುತ್ತವೆ. ಪ್ರಾಕ್ಟಿಕಲ್ ಆಗಿ ಸನ್ನಿವೇಶ ಬದಲಿರುತ್ತದೆ. ಇಂದು ಜಾಗತಿಕವಾಗಿ ಹಣದುಬ್ಬರ ಅತಿ ಹೆಚ್ಚಾಗಿದೆ. ಭಾರತದಲ್ಲಿ ಕೂಡ ಇದು ಕಳವಳಕಾರಿ ಹಂತವನ್ನ ತಲುಪಿದೆ.
  4. ಮುಂಬರುವ ದಿನಗಳ ತೆರಿಗೆ ನೀತಿ ಕೂಡ ಗಮನದಲ್ಲಿ ಇರಿಸಬೇಕು. ಇದರ ನಿಖರತೆ ಇಂದಿಗೆ ಇಂದೆ ತಿಳಿಯಲು ಸಾಧ್ಯವಿಲ್ಲ. ಇದು ಕಡಿಮೆ ಆಗುವ ಸಾಧ್ಯತೆ ಇಲ್ಲ ಎನ್ನುವ ಸಾಮಾನ್ಯ ಜ್ಞಾನ ಮತ್ತು ಅದಕ್ಕೆ ಮಾನಸಿಕವಾಗಿ ಸಿದ್ಧರಾಗುವುದು ಮುಖ್ಯ.
  5. ಆರೋಗ್ಯದ ಖರ್ಚು ಹೆಚ್ಚುತ್ತದೆ. ಬದಲಾದ ಸನ್ನಿವೇಶದಲ್ಲಿ ಜೀವಿತಾವಧಿ ಹೆಚ್ಚಾಗಿದೆ. ಜಿವಾತಾವಧಿ ಹೆಚ್ಚಾಗಿದೆ ಆದರೆ ಆರೋಗ್ಯ? ಬದುಕಲು ವೆಚ್ಚ ಮಾಡಲೇಬೇಕು ಎನ್ನುವ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಕಡ್ಡಾಯ ಎನ್ನುವ ಮಟ್ಟಕ್ಕೆ ಬಂದರೆ ಅದರಲ್ಲಿ ಆಶ್ಚರ್ಯವಿಲ್ಲ. ಊಟ ಬಟ್ಟೆಗಿಂತ ವೈದ್ಯಕೀಯ ಖರ್ಚುಗಳ ಮೊತ್ತ ಹೆಚ್ಚಾಗಿದೆ.

ಇಷ್ಟೇ ಅಲ್ಲದೆ ನಮ್ಮ ಕೈಲಿಲ್ಲದ ಸಾಮಾಜಿಕ ಬದಲಾವಣೆಗಳು, ರಿಟೈರ್ ನಂತರ ಎಷ್ಟು ವರ್ಷ ಬದುಕುತ್ತೇವೆ?  ಇಂತಹ ಉತ್ತರ ಕೊಡಲಾಗದ ಹಲವು ಬದಲಾವಣೆಗಳಿಗೆ ಅದು ಬಂದಾಗ ಎದುರಿಸುತ್ತೇನೆ ಎನ್ನುವ ಆತ್ಮವಿಶ್ವಾಸ ಮಾನಸಿಕ ಸಿದ್ಧತೆ ಕೂಡ ಇಂದಿನಿಂದಲೆ ಶುರುವಾಗಬೇಕಿದೆ.

ಅಂದಹಾಗೆ ಒಂದು ಕಾಲದಲ್ಲಿ ರಾಜರಂತೆ ಮೆರೆದ ಯೂರೋಪ್ ನಂತ ದೇಶಗಳಲ್ಲಿ ನಿವೃತ್ತಿ ವಯಸ್ಸು 55 ರಿಂದ 60, 65ಇಂದಿಗೆ 67ಕ್ಕೆ ಬಂದು ನಿಂತಿದೆ. ಇದು ಮುಂಬರುವ ದಿನಗಳಲ್ಲಿ 70 ಆಗಲಿದೆ. ಸರಕಾರ ರೂಪಿಸಿದ್ದ ಪಿಂಚಣಿ ವ್ಯವಸ್ಥೆ ಬದಲಾದ ಸನ್ನಿವೇಶಕ್ಕೆ ಬದಲಾಗದೆ ಹೋದದ್ದು ಇದಕ್ಕೆ ಕಾರಣ. ಹೂಡಿಕೆಯನ್ನು ಸದಾ ಪರಿಶೀಲಿಸಿ ಬದಲಾಗುತ್ತಿರುವದಷ್ಟೆ ಉಳಿಯುವಿಕೆಯ ಗುಟ್ಟು. ಹೂಡಿಕೆ ಮಾಡಿದ್ದೇನೆ, ಇನ್ಶೂರೆನ್ಸ್ ಇದೆ. ರಿಟೈರ್ಮೆಂಟ್ ಪ್ಲಾನ್ ಕೂಡ ತಗೊಂಡಿದ್ದೇನೆ ಎಂದು ಆರಾಮಾಗಿರುವ ಹಾಗಿಲ್ಲ. ಮಾಡಿದ ಹೂಡಿಕೆಯನ್ನು ಪರಿಶೀಲಸುತ್ತಾ ಇರಬೇಕು. ಮುಂದಿನ ನಮ್ಮ ‘ಬೇಕು’ ವಿಗೂ ಇಂದಿನ ಇರುವಿಕೆಗೂ ಇರುವ ವ್ಯತ್ಯಾಸವನ್ನು ತುಂಬುವ ಪ್ರಯತ್ನ ನಿರಂತರವಾಗಿರಬೇಕು.

ಕೊನೆ ಮಾತು: ವಿತ್ತ ಜಗತ್ತು ಆಗಲೇ ಮಹಾಕುಸಿತವನ್ನ ಕಂಡಿದೆ. ಆದರೆ ಈ ಕುಸಿತ ಇನ್ನು ನಿಂತಿಲ್ಲದೆ ಇರುವುದು ಮತ್ತೊಂದು ಮಹಾ ಕುಸಿತಕ್ಕೆ ಮುನ್ನುಡಿ ಬರೆಯಲಿದೆಯೇ ಎನ್ನುವ  ಸಂಶಯವನ್ನ ಮೂಡಿಸುತ್ತಿದೆ. ಇದಕ್ಕೆ ಕಾರಣ ಸ್ಪಷ್ಟ , ಅಮೆರಿಕಾ ಎಕಾನಮಿ ೨೦೦೭ ರ ಲಿಮನ್ ಬ್ರದರ್ ನಂತರದ ಇನ್ನೊಂದು ದೊಡ್ಡ ಕುಸಿತಕ್ಕೆ ತುತ್ತಾಗಿದೆ. ಯೂರೋಪಿಯನ್ ಎಕಾನಮಿ ಚೇತರಿಕೆಯ ಹಂತವನ್ನ ಮುಟ್ಟುವುದರಲ್ಲಿ ಮುಗ್ಗರಿಸಿದೆ. ಚೀನಾ ತನ್ನ ಹಿಂದಿನ ವೇಗವನ್ನ ಕಳೆದುಕೊಂಡು ತಣ್ಣಗಾಗಿ ಕುಳಿದಿದೆ. ಬ್ರೆಜಿಲ್ , ಸೌತ್ ಆಫ್ರಿಕಾ ಆರ್ಥಿಕತೆ ಕೂಡ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಈ ಎಲ್ಲಾ ಜಾಗತಿಕ ವಿದ್ಯಮಾನಗಳನ್ನ ಗಮನಿಸಿದರೆ , ನಮ್ಮ ಪಕ್ಕದಲ್ಲೇ , ಹತ್ತಿರದಲ್ಲೇ ಇನ್ನೊಂದು ಆರ್ಥಿಕ ಕುಸಿತ ಕಾಯುತ್ತ ಕುಳಿತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ ನಿಮ್ಮ ಹೂಡಿಕೆಯ ಮೇಲೆ ಹಿಂದಿಗಿಂತ ಇಂದು ಹೆಚ್ಚಿನ ಗಮನ ಹರಿಸಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಮುಂಬರುವ ದಿನಗಳು ಆರ್ಥಿಕವಾಗಿ ಇನ್ನಷ್ಟು ಸಂಕಷ್ಟದ ದಿನಗಳನ್ನ ತರಲಿವೆ. ಯಾವುದಕ್ಕೂ ಸಿದ್ಧರಾಗಿರುವುದು ಉತ್ತಮ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com