ಮುಂಬೈ: ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಬ್ಯಾಂಕಿಂಗ್ ವಹಿವಾಟು ತೀವ್ರ ಏರಿಕೆಯಾಗುತ್ತಿದ್ದು, ಅತೃಪ್ತ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿದೆ. 2021ರ ಏಪ್ರಿಲ್- 2022ರ ಮಾರ್ಚ್ ನಡುವಿನ ಅವಧಿಯಲ್ಲಿ ಬ್ಯಾಂಕ್‌ಗಳ ವಿರುದ್ಧ ವಿವಿಧ ಒಂಬುಡ್ಸ್‌ಮನ್ ಯೋಜನೆಗಳ ಅಡಿಯಲ್ಲಿ ಸ್ವೀಕರಿಸಲಾದ ಒಟ್ಟು ದೂರುಗಳ ಸಂಖ್ಯೆಯು ಶೇ 9 ಕ್ಕಿಂತ ಹೆಚ್ಚಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ವರದಿ ಪ್ರಕಾರ, 'ಈ ಪೈಕಿ ಡೆಬಿಟ್ ಕಾರ್ಡ್‌ಗಳು ಮತ್ತು ಮೊಬೈಲ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಗರಿಷ್ಠ ಸಂಖ್ಯೆಯ ದೂರುಗಳು ದಾಖಲಾಗಿವೆ.
'ಹಿಂದಿನ ಮೂರು ಯೋಜನೆಗಳು ಮತ್ತು ಆರ್‌ಬಿ-ಐಒಎಸ್ (ರಿಸರ್ವ್ ಬ್ಯಾಂಕ್- ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್) ಅಡಿಯಲ್ಲಿ, 2021ರ ಏಪ್ರಿಲ್ 1 ರಿಂದ 2022ರ ಮಾರ್ಚ್ 31ರ ಅವಧಿಯಲ್ಲಿ, ಒಆರ್‌ಬಿಐಒ (ಆರ್‌ಬಿಐ ಓಂಬುಡ್ಸ್‌ಮನ್ ಕಚೇರಿಗಳು) ಮತ್ತು ಸಿಆರ್‌ಪಿಸಿ (ಕೇಂದ್ರೀಕೃತ ರಶೀದಿ ಮತ್ತು ಸಂಸ್ಕರಣಾ ಕೇಂದ್ರ) ಗಳಲ್ಲಿ ಸ್ವೀಕರಿಸಿದ ಒಟ್ಟು ದೂರುಗಳು 4,18,184 ರಷ್ಟಿವೆ. ಇದು ಕಳೆದ ವರ್ಷಕ್ಕಿಂತ ಶೇ 9.39ರಷ್ಟು ಹೆಚ್ಚಳವಾಗಿದೆ' ಎಂದು ಆರ್‌ಬಿಐ ಬುಧವಾರ ಬಿಡುಗಡೆ ಮಾಡಿದ 2021-22ರ ಒಂಬುಡ್ಸ್‌ಮನ್ ಯೋಜನೆಗಳ ವಾರ್ಷಿಕ ವರದಿ ಹೇಳಿದೆ.
ಎಟಿಎಂ/ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ದೂರುಗಳ ಪಾಲು ಒಟ್ಟು ಶೇ 14.65 ರಷ್ಟಿದ್ದು, ಮೊಬೈಲ್/ಎಲೆಕ್ಟ್ರಾನಿಕ್ ಬ್ಯಾಂಕಿಂಗ್‌ಗೆ ಸಂಬಂಧಿಸಿದ ದೂರುಗಳು ಶೇ 13.64 ರಷ್ಟಿದೆ ಎಂದು ವರದಿ ತಿಳಿಸಿದೆ.
ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ 41,375 ದೂರುಗಳು ಮತ್ತು ಎಲೆಕ್ಟ್ರಾನಿಕ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ 39,388 ದೂರುಗಳು ದಾಖಲಾಗಿವೆ. ಇದೇ ವೇಳೆಯಲ್ಲಿ ಬ್ಯಾಂಕ್ ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ 32,162 ದೂರುಗಳನ್ನು ದಾಖಲಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಎಟಿಎಂ/ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ದೂರುಗಳು ಇಳಿಮುಖವಾಗಿದೆ ಮತ್ತು ಮೊಬೈಲ್ ಬ್ಯಾಂಕಿಂಗ್/ಎಲೆಕ್ಟ್ರಾನಿಕ್ ಬ್ಯಾಂಕಿಂಗ್‌ಗೆ ಸಂಬಂಧಿಸಿದ ದೂರುಗಳ ಪಾಲು ಸ್ವಲ್ಪ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
ಒಟ್ಟು ದೂರುಗಳ ಪೈಕಿ 3,04,496 ದೂರುಗಳನ್ನು 22 ಆರ್‌ಬಿಐ ಓಂಬುಡ್ಸ್‌ಮನ್ ಕಚೇರಿಗಳು ನಿರ್ವಹಿಸಿವೆ.
Advertisement