ಕೆಲ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ ಸರ್ಕಾರ!

ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಹಣಕಾಸು ಇಲಾಖೆ ಹೆಚ್ಚಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಹಣಕಾಸು ಇಲಾಖೆ ಹೆಚ್ಚಿಸಿದೆ. 

1 ವರ್ಷ, 2 ವರ್ಷ ಮತ್ತು 5 ವರ್ಷಗಳ ಮರುಕಳಿಸುವ ಠೇವಣಿಗಳ (Recurring Deposit-RD) ಮೇಲೆ ಈ ಹೆಚ್ಚಳ ಮಾಡಲಾಗಿದೆ. ಉಳಿದ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಬ್ಯಾಂಕ್‌ಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿ ದರಗಳು ಏರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, 5 ವರ್ಷಗಳ (RD) ಮೇಲೆ ಗರಿಷ್ಠ 0.3 ಶೇಕಡಾ ಬಡ್ಡಿಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ, RD ಠೇವಣಿದಾರರು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 6.5 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಇದುವರೆಗೂ ಇದು ಶೇಕಡ 6.2ರಷ್ಟಿತ್ತು. 

ಬಡ್ಡಿದರಗಳ ಪರಿಶೀಲನೆಯ ನಂತರ, ಪೋಸ್ಟ್ ಆಫೀಸ್‌ಗಳಲ್ಲಿ ಒಂದು ವರ್ಷದ ಸ್ಥಿರ ಠೇವಣಿಗಳ (Fixed Deposit-FD) ಮೇಲಿನ ಬಡ್ಡಿಯು ಶೇಕಡಾ 0.1ರಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, ಎರಡು ವರ್ಷಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯು ಈಗ ಶೇಕಡಾ 7.0 ಆಗಿರುತ್ತದೆ. ಇದು ಇಲ್ಲಿಯವರೆಗೆ ಶೇಕಡಾ 6.9 ರಷ್ಟಿತ್ತು. ಆದರೆ, ಮೂರು ಮತ್ತು ಐದು ವರ್ಷಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯನ್ನು ಕ್ರಮವಾಗಿ ಶೇ.7.0 ಮತ್ತು ಶೇ.7.5ರಲ್ಲಿ ಉಳಿಸಿಕೊಳ್ಳಲಾಗಿದೆ.

ಹೂಡಿಕೆದಾರರಲ್ಲಿ ಜನಪ್ರಿಯವಾಗಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಿಪಿಎಫ್‌ನಲ್ಲಿನ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇಕಡಾ 7.1 ಮತ್ತು ಉಳಿತಾಯ ಖಾತೆಯಲ್ಲಿನ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇಕಡಾ 4.0 ನಲ್ಲಿ ಉಳಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ (NSC) ಮೇಲಿನ ಬಡ್ಡಿಯನ್ನು 2023ರ ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ 7.7 ಶೇಕಡಾದಲ್ಲಿ ಉಳಿಸಿಕೊಳ್ಳಲಾಗಿದೆ. ಹೆಣ್ಣು ಮಗುವಿನ ಉಳಿತಾಯ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆ ಮೇಲಿನ ಬಡ್ಡಿ ದರವು ಶೇಕಡಾ 8.0 ರಷ್ಟಿದ್ದು ಅದರಲ್ಲಿ ಏನು ಬದಲಾಗಿಲ್ಲ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ಕ್ರಮವಾಗಿ ಶೇ.8.2 ಮತ್ತು ಶೇ.7.5 ಆಗಿರುತ್ತದೆ.

ಈ ಹಿಂದೆ ಜನವರಿ-ಮಾರ್ಚ್ ತ್ರೈಮಾಸಿಕ ಹಾಗೂ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com