ಕಮರ್ಷಿಯಲ್ ಸಿಲಿಂಡರ್
ಕಮರ್ಷಿಯಲ್ ಸಿಲಿಂಡರ್

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ, ನೂತನ ದರ ಹೀಗಿದೆ: ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಿಲ್ಲ!

ಈ ವರ್ಷಾರಂಭದಿಂದ ಸತತ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನತೆಗೆ ಆರ್ಥಿಕ ವರ್ಷಾರಂಭದ ದಿನ ಕೊಂಚ ನಿರಾಳತೆ ಸಿಕ್ಕಿದೆ. 
Published on

ನವದೆಹಲಿ: ಈ ವರ್ಷಾರಂಭದಿಂದ ಸತತ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನತೆಗೆ ಆರ್ಥಿಕ ವರ್ಷಾರಂಭದ ದಿನ ಕೊಂಚ ನಿರಾಳತೆ ಸಿಕ್ಕಿದೆ. 19 ಕೆಜಿ ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG cylinder ) ಸಿಲಿಂಡರ್‌ ಬೆಲೆ 91 ರೂಪಾಯಿ 50  ಪೈಸೆ ಕಡಿಮೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಈಗ 2,028 ರೂಪಾಯಿಗಳಾಗಿದೆ. 

ಆದರೆ, ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. 2022 ರಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ನಾಲ್ಕು ಬಾರಿ ಹೆಚ್ಚಿಸಲಾಯಿತು. ಈ ವರ್ಷದ ಜನವರಿಯಲ್ಲಿ, ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ದೆಹಲಿಯಲ್ಲಿ 1,768 ರೂಪಾಯಿಗೆ ಹೆಚ್ಚಿಸಲಾಗಿತ್ತು.

ಮೊನ್ನೆ ಮಾರ್ಚ್ 1ರಂದು ಕಮರ್ಷಿಯಲ್ ಸಿಲಿಂಡರ್ ಗಳ ಬೆಲೆ 350 ರೂಪಾಯಿ 50 ಪೈಸೆ ಹಾಗೂ ಗೃಹ ಬಳಕೆ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿತ್ತು. ಜನವರಿಯಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 25 ರೂಪಾಯಿ ಹೆಚ್ಚಳವಾಗಿತ್ತು. 

ಕಳೆದ ವರ್ಷ, ಏಪ್ರಿಲ್ ಆರಂಭದಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2,253 ಆಗಿತ್ತು. ಒಂದು ವರ್ಷದಲ್ಲಿ, ವಾಣಿಜ್ಯ ಸಿಲಿಂಡರ್‌ಗಳ ಬೆಲೆ ರಾಷ್ಟ್ರ ರಾಜಧಾನಿಯೊಂದರಲ್ಲೇ 225 ರೂಪಾಯಿ ಇಳಿಕೆ ಕಂಡಿದೆ.

ಭಾರತದಲ್ಲಿ LPG ಬೆಲೆಗಳನ್ನು ದೇಶೀಯ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ. ಪ್ರತಿ ತಿಂಗಳು ಬೆಲೆಯಲ್ಲಿ ಪರಿಷ್ಕರಣೆಯಾಗುತ್ತಿರುತ್ತದೆ. ಸ್ಥಳೀಯ ತೆರಿಗೆಗಳಿಂದಾಗಿ ದೇಶೀಯ ಅಡುಗೆ ಅನಿಲ ವೆಚ್ಚಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಪ್ರತಿ ಕುಟುಂಬವು ವರ್ಷಕ್ಕೆ ಸಬ್ಸಿಡಿ ದರದಲ್ಲಿ 12 ಸಿಲಿಂಡರ್‌ಗಳಿಗೆ ಅರ್ಹವಾಗಿರುತ್ತದೆ. ಇದನ್ನು ಮೀರಿ, ಸಿಲಿಂಡರ್‌ಗಳನ್ನು ಮಾರುಕಟ್ಟೆ ಮೌಲ್ಯದಲ್ಲಿ ಖರೀದಿಸಬಹುದಾಗಿದೆ. 

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ: ಆರ್ಥಿಕ ವರ್ಷದ ಆರಂಭ ದಿನ ಪೆಟ್ರೋಲ್ -ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಇಂದು 101 ರೂಪಾಯಿ 94 ಪೈಸೆ ಪೆಟ್ರೋಲ್ ಗಿದ್ದರೆ, ಡೀಸೆಲ್ ಬೆಲೆ 87 ರೂಪಾಯಿ 89 ಪೈಸೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 96 ರೂಪಾಯಿ 72 ಪೈಸೆಯಾಗಿದೆ. ಡೀಸೆಲ್ ಬೆಲೆ 89 ರೂಪಾಯಿ 62 ಪೈಸೆಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com