ಹೆಚ್ಚು ಬಂಡವಾಳ ಹೂಡಿಕೆ ಮಾಡುವಂತೆ ಭಾರತೀಯ ಕಂಪನಿಗಳಿಗೆ ಪ್ರಧಾನಿ ಮೋದಿ ಒತ್ತಾಯ
2023-24ರ ಬಜೆಟ್‌ನಲ್ಲಿ ನೀಡಿರುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವಂತೆ ಭಾರತೀಯ ಕಂಪನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಒತ್ತಾಯಿಸಿದ್ದಾರೆ.
Published: 07th March 2023 03:38 PM | Last Updated: 08th March 2023 03:50 PM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: 2023-24ರ ಬಜೆಟ್‌ನಲ್ಲಿ ನೀಡಿರುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವಂತೆ ಭಾರತೀಯ ಕಂಪನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಒತ್ತಾಯಿಸಿದ್ದಾರೆ.
ಬಜೆಟ್ ಕುರಿತ 10 ನೇ ವೆಬ್‌ನಾರ್ ಉದ್ದೇಶಿಸಿ ಮಾತನಾಡಿದ ಮೋದಿ, ಸರ್ಕಾರವು ಬಂಡವಾಳ ವೆಚ್ಚದ ಮೇಲಿನ ವೆಚ್ಚವನ್ನು 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ, ಇದು ಇದುವರೆಗಿನ ಅತ್ಯಧಿಕವಾಗಿದೆ ಎಂದರು. ಈ ಹಿನ್ನಲೆಯಲ್ಲಿ ದೇಶದ ಖಾಸಗಿ ವಲಯದವರೂ ಸಹ ತಮ್ಮ ಹೂಡಿಕೆಯನ್ನು ಸರ್ಕಾರದಂತೆ ಹೆಚ್ಚಿಸುವಂತೆ ಕರೆ ನೀಡುತ್ತೇನೆ, ಇದರಿಂದ ದೇಶವು ಗರಿಷ್ಠ ಲಾಭವನ್ನು ಪಡೆಯುತ್ತದೆ ಎಂದು ಅವರು ಹೇಳಿದರು.
ಜಿಎಸ್‌ಟಿ, ಆದಾಯ ತೆರಿಗೆ ಕಡಿತ ಮತ್ತು ಕಾರ್ಪೊರೇಟ್ ತೆರಿಗೆಯಿಂದಾಗಿ ಭಾರತದಲ್ಲಿ ತೆರಿಗೆ ಹೊರೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಉತ್ತಮ ತೆರಿಗೆ ಸಂಗ್ರಹವಾಗಿದೆ. 2013-14 ರಲ್ಲಿ ಸುಮಾರು 11 ಲಕ್ಷ ಕೋಟಿ ರೂ. ಗಳಷ್ಟಿದ್ದ ಒಟ್ಟು ತೆರಿಗೆ ಆದಾಯ, 2023-24 ರಲ್ಲಿ 33 ಲಕ್ಷ ಕೋಟಿಗೆ ಏರಿದ್ದು, ಶೇಕಡಾ 200 ರಷ್ಟು ಹೆಚ್ಚಾಗಿದೆ. 2013-14 ರಿಂದ 2020-21 ರವರೆಗೆ ವೈಯಕ್ತಿಕ ತೆರಿಗೆ ರಿಟರ್ನ್‌ಗಳ ಸಂಖ್ಯೆ 3.5 ಕೋಟಿಯಿಂದ 6.5 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಭಾರತದ 'ಯುಪಿಐ' ವ್ಯವಸ್ಥೆಗೆ ಹಲವು ರಾಷ್ಟ್ರಗಳು ಆಕರ್ಷಿತವಾಗಿವೆ: 'ಮನ್ ಕಿ ಬಾತ್''ನಲ್ಲಿ ಪ್ರಧಾನಿ ಮೋದಿ
ರುಪೇ ಮತ್ತು ಯುಪಿಐ ಕೇವಲ ಕಡಿಮೆ-ವೆಚ್ಚದ ಮತ್ತು ಹೆಚ್ಚು ಸುರಕ್ಷಿತ ತಂತ್ರಜ್ಞಾನವಲ್ಲ, ಆದರೆ ಇದು ಜಗತ್ತಿನಲ್ಲಿ ನಮ್ಮ ಗುರುತಾಗಿದೆ. ನಾವೀನ್ಯತೆಗೆ ಅಪಾರ ಅವಕಾಶವಿದೆ ಮತ್ತು ಯುಪಿಐ ನ್ನು ಇಡೀ ವಿಶ್ವದಲ್ಲಿ ಬಲವರ್ಧನೆಗೊಳಿಸಬೇಕು, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹಣಕಾಸು ಸಂಸ್ಥೆಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಲು ಫಿನ್‌ಟೆಕ್‌ಗಳೊಂದಿಗೆ ಗರಿಷ್ಠ ಪಾಲುದಾರಿಕೆಯನ್ನು ಹೊಂದಿರಬೇಕು ಎಂದು ಮೋದಿ ಸಲಹೆ ನೀಡಿದರು.