ಭಾರತ ಕಟ್ಟಲು ಯುವ ಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ
ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ದೇಶವು ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.
Published: 27th October 2023 11:21 AM | Last Updated: 27th October 2023 11:21 AM | A+A A-

ನಾರಾಯಣ ಮೂರ್ತಿ
ನವದೆಹಲಿ: ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ದೇಶವು ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.
ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯರಿಂದ ಅನಪೇಕ್ಷಿತ ಹವ್ಯಾಸಗಳನ್ನು ನಾವು ಕಲಿಯಬಾರದು. ಭಾರತ ನನ್ನ ದೇಶ, ಇದಕ್ಕಾಗಿ ನಾನು ವಾರಕ್ಕೆ 70 ಗಂಟೆಗಳ ಕಾಲ ದುಡಿಯುತ್ತೇನೆ ಎಂಬ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎ೦ದು ಯುವಜನತೆಯಲ್ಲಿ ಮನವಿ ಮಾಡಿದರು.
ಎರಡನೇ ಮಹಾಯುದ್ಧದ ಬಳಿಕ ಜರ್ಮನಿ ಹಾಗೂ ಜಪಾನ್ ದೇಶ ಅಭಿವೃದ್ಧಿಯಾಗಿದ್ದನ ಉಲ್ಲೇಖಿಸಿದ ಅವರು, ಎರಡನೇ ಮಹಾಯುದ್ಧದ ಬಳಿಕ ಪ್ರತಿಯೊಬ್ಬ ಜರ್ಮನ್ ಪ್ರಜೆ ಕೆಲ ವರ್ಷಗಳವರೆಗೆ ಹೆಚ್ಚುವರಿ ಅವಧಿ ದುಡಿಯುತ್ತಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ, ಆಮೆ ವಿಗ್ರಹ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ
ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸದೇ ಇದ್ದರೆ ಮತ್ತು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಕಡಿಮೆ ಮಾಡದೇ ಇದ್ದರೆ ಪ್ರಚಂಡ ಸಾಧನೆ ಮಾಡಿದ ದೇಶಗಳೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವಾಗುವುದಿಲ್ಲ. ನಾವು ಅಂದುಕೊಂಡಿರುವ ಅವಧಿಯಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ನಾವು ಶಿಸ್ತುಬದ್ಧವಾಗಿರಬೇಕು ಮತ್ತು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸಬೇಕು. ನಾವು ಏನೂ ಮಾಡದೇ ಇದ್ದರೆ ಸರ್ಕಾರ ಏನು ಮಾಡಬಹುದು? ನಾವು ಅತ್ಯಂತ ಶಿಸ್ತಿನ ಮತ್ತು ಅತ್ಯಂತ ಕಷ್ಟಪಟ್ಟು ದುಡಿಯುವ ಜನರಾಗಿ ಬದಲಾಗಬೇಕು ನಾರಾಯಣ ಮೂರ್ತಿ ಹೇಳಿದರು.
ನಮ್ಮ ಜನಸಂಖ್ಯೆಯಲ್ಲಿ ಬಹುಪಾಲು ಯುವಜನರೇ ಇರುವುದರಿಂದ ನಮ್ಮ ದೇಶವನ್ನು ಕಟ್ಟಲು ಅವರು ರೂಪಾಂತರವಾಗುವುದು ಬಹಳ ಮುಖ್ಯ ಎಂದರು. ನಾರಾಯಣ ಮೂರ್ತಿ ಅವರು ಯುವ ಜನತೆ ವಾರಕ್ಕೆ 70 ಗಂಟೆ ದುಡಿಯಬೇಕು ಎಂಬ ಹೇಳಿಕೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.