ರಾಜ್ಯದಲ್ಲಿ ವಹಿವಾಟು ಹೆಚ್ಚಳಕ್ಕೆ ಅಮೆರಿಕ ಒಲವು: 60 ಉದ್ಯಮಿಗಳೊಂದಿಗೆ ಸಚಿವ ಎಂ ಬಿ ಪಾಟೀಲ ಸಭೆ
ಅಕ್ಕ’ (ಅಮೆರಿಕ ಕನ್ನಡ ಕೂಟಗಳ ಆಗರ) ಸಂಘಟನೆ ಮತ್ತು ಯುಎಸ್- ಇಂಡಿಯಾ ಚೇಂಬರ್ ಆಫ್ ಕಾಮರ್ಸ್ ಜಂಟಿಯಾಗಿ ಆಯೋಜಿಸಿದ ಉದ್ಯಮಿಗಳ ದುಂಡು ಮೇಜಿನ ಸಭೆಯಲ್ಲಿ 60ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಂಡಿದ್ದು, ಕರ್ನಾಟಕದಲ್ಲಿ ತಮ್ಮ ವಹಿವಾಟು ಮತ್ತು ನೆಲೆಯನ್ನು ವಿಸ್ತರಿಸಿಕೊಳ್ಳುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಎಂಬಿ ಪಾಟೀಲ ತಿಳಿಸಿದ್ದಾರೆ.
Published: 30th September 2023 04:36 PM | Last Updated: 30th September 2023 05:38 PM | A+A A-

ಅಮೆರಿಕದಲ್ಲಿ ಉದ್ಯಮಿಗಳೊಂದಿಗೆ ಎಂಬಿ ಪಾಟೀಲ ಮಾತುಕತೆ
ಆಸ್ಟಿನ್: `ಅಕ್ಕ’ (ಅಮೆರಿಕ ಕನ್ನಡ ಕೂಟಗಳ ಆಗರ) ಸಂಘಟನೆ ಮತ್ತು ಯುಎಸ್- ಇಂಡಿಯಾ ಚೇಂಬರ್ ಆಫ್ ಕಾಮರ್ಸ್ ಜಂಟಿಯಾಗಿ ಆಯೋಜಿಸಿದ ಉದ್ಯಮಿಗಳ ದುಂಡು ಮೇಜಿನ ಸಭೆಯಲ್ಲಿ 60ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಂಡಿದ್ದು, ಕರ್ನಾಟಕದಲ್ಲಿ ತಮ್ಮ ವಹಿವಾಟು ಮತ್ತು ನೆಲೆಯನ್ನು ವಿಸ್ತರಿಸಿಕೊಳ್ಳುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಎಂಬಿ ಪಾಟೀಲ ತಿಳಿಸಿದ್ದಾರೆ.
ಹೆಚ್ಚಿನ ಕಂಪನಿಗಳು ಈಗಾಗಲೇ ಕರ್ನಾಟಕದಲ್ಲಿ ತಮ್ಮ ವಹಿವಾಟು ನಡೆಸುತ್ತಿದ್ದು, ಕಚೇರಿ ಹೊಂದಿವೆ. ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಇರುವ ಉತ್ತೇಜನವನ್ನು ಕಂಡು, ಅವು ತಮ್ಮ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಳ್ಳಲು ಉತ್ಸುಕವಾಗಿವೆ. ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ನವೋದ್ಯಮಗಳ ಕಾರ್ಯಪರಿಸರಕ್ಕೆ ಮತ್ತಷ್ಟು ಇಂಬು ಕೊಡಬೇಕಾದ ಅಗತ್ಯವಿದೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು, ಉದ್ಯಮಿಗಳೊಂದಿಗೆ ವಿಚಾರ ವಿನಿಮಯ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.
ಅಮೆರಿಕದ ಕಂಪನಿಗಳು ಭಾರತ ಮತ್ತು ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತ್ವದ ಪಾತ್ರ ವಹಿಸಿಕೊಂಡು ಬಂದಿವೆ. ಇತ್ತೀಚಿನ ದಶಕಗಳಲ್ಲಿ ಎರಡೂ ದೇಶಗಳು ನಿಕಟವಾಗಿದ್ದು, ಪರಸ್ಪರ ಮಾರುಕಟ್ಟೆಯನ್ನು ಆವಿಷ್ಕರಿಸುತ್ತಲೇ ಇವೆ. ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆನ್ನುವುದು ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯಾಗಿದೆ. ಈ ನಿಟ್ಟಿನಲ್ಲಿ ನಾವು ರೂಪಿಸುತ್ತಿರುವ ವಿನೂತನ ಕೈಗಾರಿಕಾ ಉಪಕ್ರಮಗಳನ್ನು ಮನದಟ್ಟು ಮಾಡಿಕೊಡಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ `ವಾಟರ್ಸ್’ನಿಂದ 16 ಮಿಲಿಯನ್ ಡಾಲರ್ ಹೂಡಿಕೆ, ಕೇಪಬಿಲಿಟಿ ಸೆಂಟರ್ ಸ್ಥಾಪನೆ
ಗ್ಲೋಬಲ್ ಫೌಂಡ್ರೀಸ್ ಜತೆ ಮಾತುಕತೆ: ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಗ್ಲೋಬಲ್ ಫೌಂಡ್ರೀಸ್ ಕಂಪನಿಯು 2025ರ ವೇಳೆಗೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡ 25ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ. ಇದಕ್ಕೆ ಪೂರಕವಾಗಿ ಸರಕಾರವು ಸುಸಜ್ಜಿತ ಮಾನವ ಸಂಪನ್ಮೂಲವನ್ನು ಒದಗಿಸಲು ಬದ್ಧವಾಗಿದೆ ಎಂದು ಸಚಿವ ಪಾಟೀಲ ತಿಳಿಸಿದ್ದಾರೆ.
ಕಂಪನಿಯ ಉನ್ನತ ಪ್ರತಿನಿಧಿಗಳೊಂದಿಗೆ ಶುಕ್ರವಾರ ನಿರ್ಣಾಯಕ ಮಾತುಕತೆ ನಡೆಸಲಾಗಿದೆ. 30 ಬಿಲಿಯನ್ ಡಾಲರ್ ಮೌಲ್ಯದ ಗ್ಲೋಬಲ್ ಫೌಂಡ್ರೀಸ್ ಕಂಪನಿಯು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದೆ. ರಾಜ್ಯದಲ್ಲಿ ಇದು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಯಸಿದ್ದು, ಇದಕ್ಕೆ ಸರಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ರಕ್ಷಣೆ ಮತ್ತು ವೈಮಾಂತರಿಕ್ಷ ವಲಯಗಳಲ್ಲಿ ಛಾಪು ಮೂಡಿಸಲು ಕಂಪನಿಯು ಒಲವು ಹೊಂದಿದೆ. ಇದಕ್ಕೆ ಅಗತ್ಯವಾದ ವ್ಯಾಪಾರ ಕಾರ್ಯತಂತ್ರವನ್ನು ಅದು ಅಭಿವೃದ್ಧಿ ಪಡಿಸಲಿದೆ. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಹೆಚ್ಚಳ ಮತ್ತು ಉದ್ಯೋಗಸೃಷ್ಟಿ ಎರಡೂ ಸಾಧ್ಯವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.