ನವದೆಹಲಿ: ರಷ್ಯಾ ಮೂಲದ ಖ್ಯಾತ ಸಾಮಾಜಿಕ ಜಾಲತಾಣ Telegram ಭಾರತದಲ್ಲಿ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೌದು.. ಮನಿಕಂಟ್ರೋಲ್‌ನಲ್ಲಿನ ವರದಿಯ ಪ್ರಕಾರ, ಟೆಲಿಗ್ರಾಮ್ ವಿರುದ್ಧ ಕೇಳಿಬಂದಿರುವ ಈ ಆರೋಪಗಳು ಸಾಬೀತಾದರೆ ಭಾರತದಲ್ಲಿ ಟೆಲಿಗ್ರಾಂ ನಿಷೇಧವಾಗುವ ಎಲ್ಲ ಸಾಧ್ಯತೆಗಳಿವೆ. ವರದಿಯಲ್ಲಿರುವಂತೆ ಟೆಲಿಗ್ರಾಂ ಆ್ಯಪ್ ಬಳಕೆ ಮಾಡಿಕೊಂಡು ಸುಲಿಗೆ ಮತ್ತು ಜೂಜಾಟದಂತಹ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ದುಷ್ಕರ್ಮಿಗಳು ತಮ್ಮ ಕಾನೂನು ಬಾಹಿರ ಚುಟುವಟಿಕೆಗಳನ್ನು ನಡೆಸಲು ಟೆಲಿಗ್ರಾಂ ವೇದಿಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದ್ದು, ಇದು ಸಾಬೀತಾದರೆ ಟೆಲಿಗ್ರಾಂ ಆ್ಯಪ್ ಅನ್ನು ಭಾರತದಲ್ಲಿ ನಿಷೇಧ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಭಾರತ ಸರ್ಕಾರ ಈ ಸಂಬಂಧ ಹೆಚ್ಚಿನ ಪರಿಶೀಲನೆಯಲ್ಲಿ ತೊಡಗಿದ್ದು, ಭಾರತ ಸರ್ಕಾರವು ಸಹ ವೇದಿಕೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಈ ಸಂಬಂಧ ತಜ್ಞರ ವರದಿ ಮತ್ತು ತನಿಖಾಧಿಕಾರಿಗಳ ಅಭಿಪ್ರಾಯದ ಮೇರೆಗೆ ನಿಷೇಧ ಹೇರುವ ಸಾಧ್ಯತೆಯಿದೆ.
ಭಾರತ ಸರ್ಕಾರದ ತನಿಖೆಯನ್ನು ಗೃಹ ವ್ಯವಹಾರಗಳ ಸಚಿವಾಲಯ (MHA) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಡೆಸುತ್ತಿದೆ. ಸುಲಿಗೆ ಮತ್ತು ಜೂಜಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಟೆಲಿಗ್ರಾಮ್ ಅನ್ನು ಹೇಗೆ ಬಳಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲು ಅಧಿಕಾರಿಗಳು ವಿಶೇಷವಾಗಿ ಆಸಕ್ತಿ ಹೊಂದಿದ್ದಾರೆ. ನಿಷೇಧವನ್ನು ತಳ್ಳಿಹಾಕದಿದ್ದರೂ, ಅಂತಿಮ ನಿರ್ಧಾರವು ತನಿಖೆಯ ಫಲಿತಾಂಶವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.
ಟೆಲಿಗ್ರಾಂ CEO ಬಂಧನ ಬೆನ್ನಲ್ಲೇ ಭಾರತದಲ್ಲಿ ಚಟುವಟಿಕೆ
ಇನ್ನು ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಿದ ಕೇವಲ ಒಂದು ದಿನದ ನಂತರ ಭಾರತದಲ್ಲೂ ಟೆಲಿಗ್ರಾಂ ವಿರುದ್ಧ ನಾನಾ ಆರೋಪಗಳು ಕೇಳಿಬರುತ್ತಿವೆ. ಪ್ರಾಥಮಿಕ ತನಿಖೆಯಲ್ಲಿ ಅಪ್ರಾಪ್ತ ವಯಸ್ಕರ ವಿರುದ್ಧದ ಹಿಂಸಾಚಾರವನ್ನು ತಡೆಗಟ್ಟುವ ಕಾರ್ಯವನ್ನು ನಿರ್ವಹಿಸುವ ಕಚೇರಿಯಾದ ಫ್ರಾನ್ಸ್‌ನ OFMIN ಟೆಲಿಗ್ರಾಮ್ ಸಿಇಒಗೆ ಬಂಧನ ವಾರಂಟ್ ಹೊರಡಿಸಿದೆ.
ಫ್ರೆಂಚ್ ಅಧಿಕಾರಿಗಳು ಟೆಲಿಗ್ರಾಮ್ ಅಪ್ಲಿಕೇಶನ್‌ನ ಮಾಡರೇಶನ್ ನೀತಿಗಳು ಮತ್ತು ಅಪರಾಧ ಚಟುವಟಿಕೆಯನ್ನು ತಡೆಯುವಲ್ಲಿ ವಿಫಲವಾದ ಬಗ್ಗೆ ಕಳವಳವನ್ನು ವರದಿ ಮಾಡಿದ್ದಾರೆ.
ವರದಿಗಳ ಪ್ರಕಾರ, ವಂಚನೆ, ಮಾದಕವಸ್ತು ಕಳ್ಳಸಾಗಣೆ, ಸೈಬರ್‌ಬುಲ್ಲಿಂಗ್, ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುವುದು ಸೇರಿದಂತೆ ಆಪಾದಿತ ಅಪರಾಧ ಚಟುವಟಿಕೆಗಳಿಗೆ ಟೆಲಿಗ್ರಾಂ ನೇರವಾಗಿ ಮತ್ತು ಪರೋಕ್ಷವಾದಿ ವೇದಿಕೆ ಕಲ್ಪಿಸುತ್ತಿದೆ ಎಂದು ಆರೋಪಿಸಲಾಗಿದೆ.
ಟೆಲಿಗ್ರಾಮ್ ಈ ಹಿಂದೆ ಕೂಡ ತಪ್ಪು ಮಾಹಿತಿಗಳನ್ನು ಹರಡುವ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಸುಗಮಗೊಳಿಸುವ ಪಾತ್ರಕ್ಕಾಗಿ ಟೀಕೆಗಳನ್ನು ಎದುರಿಸಿತ್ತು. ಇತ್ತೀಚಿನ UGC-NEET ವಿವಾದ, ಇದರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪತ್ರಿಕೆ ಸೋರಿಕೆಯಾಗಿದೆ ಮತ್ತು ವೇದಿಕೆಯಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ, ಇದು ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಪತ್ರಿಕೆಯನ್ನು 5,000 ರಿಂದ 10,000 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿತ್ತು.
ಸಮರ್ಥನೆ
ಇನ್ನು ಇಷ್ಟೆಲ್ಲಾ ಆರೋಪ ಮತ್ತು ಸವಾಲುಗಳ ನಡುವೆಯೂ ಟೆಲಿಗ್ರಾಮ್ ಭಾರತೀಯ ಕಾನೂನುಗಳಿಗೆ ಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿದೆ. ಕಂಪನಿಯು ನೋಡಲ್ ಅಧಿಕಾರಿ ಮತ್ತು ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿದೆ. ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸುತ್ತಿದೆ.
ಆದಾಗ್ಯೂ, ಭಾರತದಲ್ಲಿ ಭೌತಿಕ ಅಸ್ತಿತ್ವದ ಕೊರತೆಯಿಂದಾಗಿ ಟೆಲಿಗ್ರಾಮ್‌ನೊಂದಿಗೆ ವ್ಯವಹರಿಸುವಲ್ಲಿ ಸರ್ಕಾರವು ತೊಂದರೆ ಅನುಭವಿಸುತ್ತಿದೆ. ಇದು ತನಿಖೆಗೆ ಹಿನ್ನಡೆಯನ್ನುಂಟು ಮಾಡಿದೆ. ಅಕ್ಟೋಬರ್ 2023 ರಲ್ಲಿ, ಐಟಿ ಸಚಿವಾಲಯವು ಟೆಲಿಗ್ರಾಮ್ ಮತ್ತು ಇತರ ಕೆಲವು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್‌ಗಳನ್ನು ನೀಡಿತ್ತು, ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ ಮಕ್ಕಳ ಲೈಂಗಿಕ ನಿಂದನೆ ವಸ್ತುಗಳನ್ನು (ಸಿಎಸ್‌ಎಎಮ್) ತೆಗೆದುಹಾಕುವಂತೆ ನಿರ್ದೇಶಿಸಿತ್ತು.
Advertisement