
ನವದೆಹಲಿ: ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ವಜಾ ಮಾಡಲಾಗಿದೆ ಎಂಬ ನೋಯ್ಡಾ ಮೂಲದ ಯೆಸ್ ಮೇಡಂ ಕಂಪನಿಯ ನಡೆ ವ್ಯಾಪಕ ವಿರೋಧಕ್ಕೆ ಕಾರಣವಾಗುತ್ತಲೇ ಈ ಬಗ್ಗೆ ಸಂಸ್ಥೆ ಇದೀಗ ಸ್ಪಷ್ಟನೆ ನೀಡಿದ್ದು, ತಾವು ವಜಾ ಮಾಡಿಲ್ಲ.. ಬದಲಿಗೆ ವಿಶ್ರಾಂತಿ ನೀಡಿದ್ದೇವೆ ಎಂದು ಹೇಳಿದೆ.
ಹೌದು.. ನೋಯ್ಡಾ ಮೂಲದ ಯೆಸ್ ಮೇಡಂ ಕಂಪನಿಯು 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದೆ ಎಂಬ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಮನೆಯಲ್ಲಿ ಸಲೂನ್ ಸೇವೆಗಳನ್ನು ಒದಗಿಸುವ ನೋಯ್ಡಾ ಮೂಲದ ಯೆಸ್‌ಮ್ಯಾಡಮ್ ಕಂಪನಿಯು ಇಮೇಲ್ ಮೂಲಕ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿರುವುದಾಗಿ ಸುದ್ದಿ ಹರಿದಾಡಿತ್ತು.
ಮಾನಸಿಕ ಆರೋಗ್ಯ ಸಮೀಕ್ಷೆಯನ್ನು ನಡೆಸಿದ ನಂತರ, ಕಂಪನಿಯು ತೀವ್ರ ಒತ್ತಡದಲ್ಲಿದ್ದವರನ್ನು ಕೆಲಸದಿಂದ ತೆಗೆದುಹಾಕಿರುವುದಾಗಿ ವರದಿಯಾಗಿತ್ತು. ವಜಾಗೊಂಡ 100 ಮಂದಿಯಲ್ಲಿ ಯೆಸ್‌ಮೇಡಮ್‌ನ ಉದ್ಯೋಗಿಯೊಬ್ಬರ ಇಮೇಲ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ವಜಾಗೊಳಿಸಿಲ್ಲ ಎಂದ ಸ್ಟಾರ್ಟಪ್
ಈ ಕುರಿತು ವ್ಯಾಪಕ ಸುದ್ದಿಯಾಗುತ್ತಲೇ ಈ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿದ್ದು, “ನಾವು ಯಾರನ್ನೂ ಕೆಲಸದಿಂದ ವಜಾಗೊಳಿಸಿಲ್ಲ. ಮಾನಸಿಕ ಆರೋಗ್ಯ ಕೆಲಸಕ್ಕೆ ಎಷ್ಟು ಅಗತ್ಯವಾಗಿದೆ ಎಂಬುದನ್ನು ಅರಿವು ಮೂಡಿಸಲು ಹಾಗೂ ಕೆಲಸದ ಸ್ಥಳದಲ್ಲಿ ಉದ್ಯೋಗಿಗಳು ಎದುರಿಸುತ್ತಿರುವ ಒತ್ತಡವನ್ನು ಎತ್ತಿ ತೋರಿಸುವ ಸಲುವಾಗಿ ಈ ನಿರ್ಧಾರಕ್ಕೆ ನಮ್ಮ ಸಂಸ್ಥೆ ಬಂದಿದೆ.
ಈ ಮೂಲಕ ನಮ್ಮ ಕಂಪೆನಿಯ ಹೊಸ ಪಾಲಿಸಿಯ ಕುರಿತು ಬಹಿರಂಗಪಡಿಸಲಿದ್ದೇವೆ. ಒತ್ತಡಕ್ಕೆ ಒಳಗಾದ ಉದ್ಯೋಗಿಗೆ 6 ದಿನಗಳ ರಜೆಯ ಜೊತೆಗೆ ಸಂಬಳವನ್ನೂ ಕಂಪನಿ ಪಾವತಿಸಲಿದೆ. ಜೊತೆಗೆ ಕಂಪನಿ ಕಡೆಯಿಂದ ಆ ಉದ್ಯೋಗಿಯ ಮನೆಗೆ ತೆರಳಿ ಸ್ಪಾ ಸೌಲಭ್ಯ ನೀಡಲಾಗುತ್ತದೆ. ಈ ಮೂಲಕ ಉದ್ಯೋಗಿಗಳ ಒತ್ತಡ ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ ” ಎಂದು ಹೇಳಿಕೊಂಡಿದೆ.
ಕ್ಷಮೆ ಯಾಚಿಸಿದ ಸಂಸ್ಥೆ
ಇದೇ ವೇಳೆ ಸಂಸ್ಥೆ ಕ್ಷಮೆ ಯಾಚಿಸಿದ್ದು, ಯಾವುದೇ ಉದ್ಯೋಗಿಯನ್ನು ವಜಾಗೊಳಿಸಿಲ್ಲ. ಸುಳ್ಳು ಮಾಹಿತಿಯನ್ನು ಪ್ರಚಾರದ ಸಲುವಾಗಿ ಬಳಸಿದಕ್ಕೆ ಕ್ಷಮೆ ಇರಲಿ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಚಾರದ ಗಿಮಿಕ್
ಇನ್ನು ಯೆಸ್ ಮೇಡಂ ಸಂಸ್ಥೆಯ ಈ ನಡೆಯನ್ನು ವ್ಯಾಪಕವಾಗಿ ವಿರೋಧಿಸಲಾಗುತ್ತಿದ್ದು, ಇದು ಸಂಸ್ಥೆಯ ಪ್ರಚಾರದ ಗಿಮಿಕ್ ಎಂದು ಹಲವರು ಟೀಕಿಸಿದ್ದಾರೆ. ಸಂಸ್ಥೆಯ ಹೆಸರನ್ನು ಪ್ರಚುರ ಪಡಿಸಲು ಸಂಸ್ಥೆ ಇಂತಹ ಚೀಪ್ ಗಿಮಿಕ್ ಮಾಡಿದೆ. ಈ ಹಿಂದೆ ಸಾಕಷ್ಟು ಸಂಸ್ಥೆಗಳು ಮತ್ತು ವ್ಯಕ್ತಿಗಳು ಇಂತಹುದೇ ಪ್ರಚಾರದ ಗೀಳಿನಿಂದ ನಾನಾ ತಂತ್ರಗಾರಿಕೆ ಅನುಸರಿಸಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.
Advertisement