
ಜೈಸಲ್ಮೇರ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಶನಿವಾರ ನಡೆದ 55ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆಯು ವಿಮಾ ಕಂತುಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವ ಬಹು ನಿರೀಕ್ಷಿತ ಪ್ರಸ್ತಾಪದ ಚರ್ಚೆಯನ್ನು ಮುಂದೂಡಿದೆ.
ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ 5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆಗೆ ಪಾವತಿಸುವ ಪ್ರೀಮಿಯಂ ಅನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡುವ ಪ್ರಸ್ತಾಪ ಇದೆ. 5 ಲಕ್ಷ ರೂ.ಗಿಂತ ಹೆಚ್ಚಿನ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳ ಮೇಲೆ ಶೇಕಡಾ 18 ಜಿಎಸ್‌ಟಿ ಮುಂದುವರಿಯಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು, ಕುಟುಂಬ, ವೈಯಕ್ತಿಕ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮಾ ಮೇಲಿನ ತೆರಿಗೆ ಕಡಿತದ ಕುರಿತು ಸಚಿವರ ಗುಂಪಿನ(ಜಿಓಎಂ) ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಕೌನ್ಸಿಲ್ ಇತರ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು, ಅವುಗಳಲ್ಲಿ ಉಪ್ಪು ಮತ್ತು ಮಸಾಲೆಗಳೊಂದಿಗೆ ಬೆರೆಸಿದ ರೆಡಿ-ಟು-ಈಟ್ ಪಾಪ್‌ಕಾರ್ನ್‌ನ ಮೇಲೆ ಶೇ. 5ರಷ್ಟು ಜಿಎಸ್‌ಟಿ ಮತ್ತು ಪೂರ್ವ-ಪ್ಯಾಕೇಜ್ ಮಾಡಿದ ಮತ್ತು ಲೇಬಲ್ ಮಾಡಿದ ಪಾಪ್‌ಕಾರ್ನ್‌ನ ಮೇಲೆ ಶೇ. 12 ಜಿಎಸ್‌ಟಿ ಸೇರಿವೆ.
ಕೌನ್ಸಿಲ್ ಕ್ಯಾರಮೆಲ್ ಪಾಪ್‌ಕಾರ್ನ್‌ನ ಮೇಲೆ ಶೇ. 18 ರಷ್ಟು ಜಿಎಸ್‌ಟಿ ಮತ್ತು ಫೋರ್ಟಿಫೈಡ್ ಅಕ್ಕಿ ಕಾಳುಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿಯನ್ನು ಪ್ರಸ್ತಾಪಿಸಲಾಗಿದೆ.
ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಹಳೆಯ ಮತ್ತು ಬಳಸಿದ ಎಲೆಕ್ಟ್ರಿಕ್ ವಾಹನಗಳು(ಇವಿಗಳು) ಮತ್ತು ಸಣ್ಣ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟದ ಮೇಲೆ ಶೇ. 18 ರಷ್ಟು ಜಿಎಸ್‌ಟಿ ವಿಧಿಸಲು ಸಭೆ ನಿರ್ಧರಿಸಿದೆ. ಇದು ಪ್ರಸ್ತುತ ಶೇ. 12 ರಷ್ಟು ಇದೆ.
Advertisement