
ನವದೆಹಲಿ: ತೆರಿಗೆ ವಂಚಕರನ್ನು ಪತ್ತೆಹಚ್ಚಲು ಡಿಜಿ ಯಾತ್ರಾ ಡೇಟಾವನ್ನು ಬಳಕೆ ಮಾಡುತ್ತಿದೆ ಎಂಬ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯನ್ನು ಆದಾಯ ತೆರಿಗೆ ಇಲಾಖೆ ಸ್ಪಷ್ಟವಾಗಿ ತಳ್ಳಿಹಾಕಿದೆ.
ವರದಿ ಬಗ್ಗೆ ಪ್ರತಿಕ್ರಿಯಿಸಿದ ಐಟಿ ಇಲಾಖೆ, ಇಂದಿನವರೆಗೆ ಆದಾಯ ತೆರಿಗೆ ಇಲಾಖೆ ಅಂತಹ ಯಾವುದೇ ಡೇಟಾ ಸಂಗ್ರಹಿಸಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.
"ತೆರಿಗೆ ವಂಚಿಸುವವರನ್ನು ಪತ್ತೆಹಚ್ಚಲು ಡಿಜಿಯಾತ್ರಾ ಡೇಟಾವನ್ನು ಬಳಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸಂಬಂಧ, ಇಂದಿನವರೆಗೆ ಆದಾಯ ತೆರಿಗೆ ಇಲಾಖೆಯಿಂದ ಅಂತಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಐಟಿ ಇಲಾಖೆ ಸ್ಪಷ್ಟಪಡಿಸಿದೆ.
ಆದಾಯ ತೆರಿಗೆ ಇಲಾಖೆಯು ಡಿಜಿಯಾತ್ರಾ ಅಪ್ಲಿಕೇಶನ್‌ನಲ್ಲಿ ಸಂಪೂರ್ಣ ಪ್ರಯಾಣಿಕರ ಡೇಟಾವನ್ನು ಸಂಗ್ರಹಿಸಿದೆ ಮತ್ತು ಆದಾಯ ತೆರಿಗೆ ಫೈಲಿಂಗ್‌ಗಳೊಂದಿಗೆ ಅದನ್ನು ಸಮನ್ವಯಗೊಳಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.
ಡಿಜಿಯಾತ್ರಾ ಡೇಟಾವನ್ನು ವಿಶ್ಲೇಷಿಸುವ ಆಧಾರದ ಮೇಲೆ ತೆರಿಗೆ ಇಲಾಖೆಯು 2025 ರಲ್ಲಿ ನೋಟಿಸ್‌ಗಳನ್ನು ನೀಡಬಹುದು ಎಂದು ವರದಿ ತಿಳಿಸಿತ್ತು.
ಈ ಹಿಂದೆ, ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿದ್ದ ಡಿಜಿ ಯಾತ್ರಾ, ಇದು 'ಸುಳ್ಳು' ವರದಿ ಮತ್ತು ಡಿಜಿ ಯಾತ್ರಾ ಡೇಟಾ ಸುರಕ್ಷತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡುತ್ತದೆ ಎಂದು ಹೇಳಿತ್ತು.
“ಗೌಪ್ಯತೆ, ಸುರಕ್ಷತೆ ಮತ್ತು ಭದ್ರತೆಗೆ ನಮ್ಮ ಬದ್ಧತೆಯ ಭಾಗವಾಗಿ, ನಾವು ಯಾವುದೇ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವುದಿಲ್ಲ. ಇದು ಇತರ ಬ್ರ್ಯಾಂಡ್‌ಗಳಂತೆ ಕಸ್ಟಮೈಸ್ ಮಾಡಿದ ಅಥವಾ ವೈಯಕ್ತೀಕರಿಸಿದ ಸೇವೆಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ. ಇದು ಗರಿಷ್ಠ ಬಳಕೆದಾರರ ಗೌಪ್ಯತೆಯನ್ನು ಖಾತ್ರಿಗೊಳಿಸುತ್ತದೆ. ನಮ್ಮ d-KYC ಅಭಿಯಾನವು ಈ ಬದ್ಧತೆಯನ್ನು ಒತ್ತಿಹೇಳುತ್ತದೆ. ನಾವು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಅಥವಾ ಉಳಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮೂರನೇ ವ್ಯಕ್ತಿಗಳೊಂದಿಗೆ ಡೇಟಾ ಹಂಚಿಕೆಗೆ ಸಂಬಂಧಿಸಿದಂತೆ ಡಿಜಿ ಯಾತ್ರಾ ಫೌಂಡೇಶನ್ ಮತ್ತು ಆದಾಯ ತೆರಿಗೆ ಇಲಾಖೆ ನಡುವೆ ಯಾವುದೇ ಎಂಒಯು ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement