
ಮುಂಬೈ: ಕೇಂದ್ರ ಬಜೆಟ್ 2024-25 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಫ್ಯೂಚರ್ಸ& ಆಪ್ಷನ್ಸ್ ಸೆಕ್ಯುರಿಟೀಸ್ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ತೆರಿಗೆ ಹೆಚ್ಚಿಸುತ್ತಿದ್ದಂತೆಯೇ ಸೆನ್ಸೆಕ್ಸ್ ಹಾಗೂ ನಿಫ್ಟಿ ತೀವ್ರ ಕುಸಿತ ಕಂಡಿದೆ.
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಂತೆಯೇ ಬಿಎಸ್ ಇ ಸೆನ್ಸೆಕ್ಸ್ ಜಿಗಿತ ಕಂಡಿತ್ತು. ಆದರೆ ಕೆಲವೇ ನಿಮಿಷಗಳಲ್ಲಿ ಕುಸಿತ ಕಂಡು ಮಧ್ಯಾಹ್ನದ ವಹಿವಾಟು ವೇಳೆಗೆ 1,266.17 ಅಂಕಗಳಷ್ಟು ಕುಸಿತ ದಾಖಲಿಸಿತು. ಹಣಕಾಸು ಸಚಿವರು ಲೋಕಸಭೆಯಲ್ಲಿ ತಮ್ಮ 7ನೇ ಕೇಂದ್ರ ಬಜೆಟ್‌ನ ಮಂಡನೆಯನ್ನು ಆರಂಭಿಸುತ್ತಿದ್ದಂತೆ ಎನ್‌ಎಸ್‌ಇ ನಿಫ್ಟಿ ಕೂಡ ಏರಿಕೆ ಕಂಡಿತು.
ಆದಾಗ್ಯೂ, ತ್ವರಿತವಾಗಿ ಏರಿಳಿತ ಕಂಡುಬಂದು 435.05 ಪಾಯಿಂಟ್ ಗಳ ಕುಸಿತ ದಾಖಲಾಯಿತು. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಬೆಂಚ್‌ಮಾರ್ಕ್ 264.33 ಪಾಯಿಂಟ್‌ಗಳ ಏರಿಕೆ ಕಂಡು 80,766.41 ಕ್ಕೆ ತಲುಪಿತ್ತು. ನಿಫ್ಟಿ 73.3 ಪಾಯಿಂಟ್ ಏರಿಕೆ ಕಂಡು 24,582.55ಕ್ಕೆ ತಲುಪಿತ್ತು. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗೆ ಕೆಲವು ಹಣಕಾಸು ಆಸ್ತಿಗಳ ಮೇಲಿನ ಬಂಡವಾಳ ಗಳಿಕೆ ವಿನಾಯಿತಿ ಮಿತಿಯನ್ನು ವರ್ಷಕ್ಕೆ 1.25 ಲಕ್ಷ ರೂ.ಗೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
2024-25 ರ ಬಜೆಟ್ ನ್ನು ಪ್ರಸ್ತುತಪಡಿಸುತ್ತಾ, ಅವರು ಎಫ್ & ಒ (ಭವಿಷ್ಯಗಳು ಮತ್ತು ಆಯ್ಕೆಗಳು) ಸೆಕ್ಯುರಿಟಿಗಳ ಮೇಲಿನ ಎಸ್‌ಟಿಟಿ (ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್) ನ್ನು ಶೇಕಡಾ 0.02 ಮತ್ತು ಶೇಕಡಾ 0.1 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದರು. ಈ ಬೆನ್ನಲ್ಲೇ ಷೇರು ಮಾರುಕಟ್ಟೆ ಕುಸಿತ ಕಂಡಿದೆ.
Advertisement