
ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಚಿನ್ನದ ಮೇಲಿನ ಸೀಮಾ ಸುಂಕವನ್ನು ಕಡಿತಗೊಳಿಸಿದ ಬಳಿಕ ಚಿನ್ನದ ಬೆಲೆ 10 ಗ್ರಾಮ್ ಗಳಿಗೆ 5000 ರೂಗಳಷ್ಟು ಕುಸಿತ ಕಂಡಿದೆ.
ಕೇಂದ್ರ ಸರ್ಕಾರದ ನಿರ್ಧಾರದಿಂದ ಹೆಚ್ಚಿನ ಜನರು ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಉತ್ತೇಜನ ದೊರೆತಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಸೀಮಾ ಸುಂಕ ಕಡಿತದಿಂದಾಗಿ ಚಿನ್ನದ ಆಮದು ಅಗ್ಗವಾಗಲಿದೆ. ಈ ಕ್ರಮವು ಚಿನ್ನದ ಕಳ್ಳಸಾಗಣೆಯ ಅತಿರೇಕದ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ, ಇದು ಸಂಘಟಿತ ಆಭರಣ ವಲಯದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಚಿನ್ನ ಹಾಗೂ ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ.15 ರಿಂದ ಶೇ.6 ಕ್ಕೆ ಇಳಿಕೆ ಮಾಡಿದ್ದರು. ಪರಿಣಾಮ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಮ್ ಗಳಿಗೆ 72,300 ರೂಪಾಯಿಗಳಾಗಿ 3,350 ರೂಗಳಷ್ಟು ಕುಸಿತ ದಾಖಲಿಸಿತ್ತು. ಇನ್ನು ಬುಧವಾರವೂ ಚಿನ್ನದ ದರ ಕುಸಿತ ಮುಂದುವರೆದಿದ್ದು ಪ್ರತಿ ಗ್ರಾಮ್ ಗೆ 650 ರೂಪಾಯಿ ಕುಸಿತ ಕಂಡಿತ್ತು.
ಗುರುವಾರ ಚಿನ್ನದ ದರ ಪ್ರತಿ ಗ್ರಾಮ್ ಗೆ 1000 ರೂ ಕಡಿಮೆಯಾಗಿ 10 ಗ್ರಾಮ್ ಚಿನ್ನದ ದರ 70,650 ರೂಗಳಾಗಿತ್ತು. ಸುಂಕ ಕಡಿತಗೊಂಡ ಬಳಿಕ ಒಟ್ಟಾರೆ ಚಿನ್ನದ ದರ 10 ಗ್ರಾಮ್ ಗೆ 5000 ರೂಪಾಯಿ ಕಡಿಮೆಯಾಗಿದ್ದು, ಶೇ.7.1 ರಷ್ಟು ಇಳಿಕೆಯಾಗಿದೆ.
Advertisement