ನವದೆಹಲಿ: ದೇಶದ ಮೂರನೇ ಅತಿ ದೊಡ್ಡ ಟೆಲಿಕಾಂ ಸೇವೆ ಪೂರೈಕೆದಾರ ಸಂಸ್ಥೆಯಾಗಿರುವ ವೋಡಾಫೋನ್ ಐಡಿಯಾ ಸೇವೆಗಳ ಬೆಲೆ ಏರಿಕೆಗೆ ಮುಂದಾಗಿದೆ. ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರತಿ ಬಳಕೆದಾರನಿಂದ ಬರುವ ಸರಾಸರಿ ಆದಾಯ (ಎಆರ್ ಪಿಯು) ಹೆಚ್ಚಳಕ್ಕೆ ಅವಕಾಶವಿದೆ ಎಂದು ಹೇಳಿದೆ.
ಹೂಡಿಕೆದಾರರಿಗೆ ನೀಡಿದ ಪ್ರಸ್ತುತಿ ವೇಳೆ ಸಂಸ್ಥೆ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಆದಾಯವನ್ನು ಹೆಚ್ಚಿಸಲು ಹಾಗೂ ಭವಿಷ್ಯದ ಹೂಡಿಕೆಗಳನ್ನು ಬೆಂಬಲಿಸಲು ಬೆಲೆ ಏರಿಕೆ ಮಾಡುವ ಅಗತ್ಯವಿದೆ ಎಂದು ಹೇಳಿದೆ. 5 ಜಿ ಸೇವೆಗಳ ಬಗ್ಗೆಯೂ ಸಂಸ್ಥೆ ಪ್ರಸ್ತಾಪಿಸಿದ್ದು, ನಾಲ್ಕು ಪ್ರದೇಶಗಳಲ್ಲಿ ಮಿನಿಮನ್ ರೋಲ್ ಔಟ್ ಆಬ್ಲಿಗೇಷನ್ ( ಎಂಆರ್ ಒ) ನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ. ಭವಿಷ್ಯಕ್ಕೆ ಅಗತ್ಯವಿರುವಷ್ಟು ಮಿಡ್ ಬ್ಯಾಂಡ್ ಹಾಗೂ ಎಂಎಂವೇವ್ ಸ್ಪೆಕ್ಟ್ರಮ್ ನ್ನು ಹೊಂದಿದೆ, ಸಂಸ್ಥೆಯ Vi AirFiber ಹೋಮ್ ಬ್ರಾಡ್‌ಬ್ಯಾಂಡ್ ನ್ನು ಬಹು ಮಂದಿ ಪಾಲುದಾರರೊಂದಿಗೆ ಪರೀಕ್ಷಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
5 ಜಿಯಲ್ಲಿ ಸಂಸ್ಥೆಯ ಶೇ.40 ರಷ್ಟು ಆದಾಯ ಮೊದಲ 24-30 ತಿಂಗಳಲ್ಲಿ ಬರಲಿದೆ. ಉತ್ತಮ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಮೆಟ್ರೋ ಮತ್ತು ದೊಡ್ಡ ನಗರಗಳ ಹಾಟ್‌ಸ್ಪಾಟ್ ಸ್ಥಳಗಳಲ್ಲಿ ಸಣ್ಣ ಸೆಲ್‌ಗಳನ್ನು ನಿಯೋಜಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ಫೆಬ್ರವರಿ 2024 ರಲ್ಲಿ ನಷ್ಟದಲ್ಲಿರುವ ಕಂಪನಿಯು ಈಕ್ವಿಟಿ ಮತ್ತು ಸಾಲದ ಸಂಯೋಜನೆಯ ಮೂಲಕ ಸುಮಾರು `45,000 ಕೋಟಿ ಹಣ ಸಂಗ್ರಹವನ್ನು ಘೋಷಿಸಿತ್ತು. ಕಂಪನಿ ಈಕ್ವಿಟಿ ಮತ್ತು/ಅಥವಾ ಈಕ್ವಿಟಿ-ಲಿಂಕ್ಡ್ ಉಪಕರಣಗಳ ಸಂಯೋಜನೆಯ ಮೂಲಕ 20,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ.
Advertisement