ನೈರೋಬಿ: ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಭಾರತದ ಗೌತಮ್ ಅದಾನಿ ವಿರುದ್ಧ ಅಮೆರಿಕ ಲಂಚ ಮತ್ತು ವಂಚನೆ ಆರೋಪ ಮಾಡಿದ ನಂತರ ಅದಾನಿ ಗ್ರೂಪ್ ಜೊತೆಗಿನ ಹಲವು ಮಿಲಿಯನ್ ಡಾಲರ್ ವಿಮಾನ ನಿಲ್ದಾಣ ವಿಸ್ತರಣೆ ಮತ್ತು ವಿದ್ಯುತ್ ಒಪ್ಪಂದಗಳನ್ನು ರದ್ದುಗೊಳಿಸಿರುವುದಾಗಿ ಕೀನ್ಯಾ ಅಧ್ಯಕ್ಷರು ಗುರುವಾರ ಹೇಳಿದ್ದಾರೆ.
ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಅವರು ಇಂದು ದೇಶ ಉದ್ದೇಶಿಸಿ ಮಾಡಿದ ಭಾಷಣದಲ್ಲಿ, "ನಮ್ಮ ತನಿಖಾ ಸಂಸ್ಥೆಗಳು ಮತ್ತು ಪಾಲುದಾರ ರಾಷ್ಟ್ರಗಳು ಒದಗಿಸಿದ ಹೊಸ ಮಾಹಿತಿಯ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಹೇಳಿದ್ದಾರೆ. ಆದರೆ ನೇರವಾಗಿ ಅಮೆರಿಕದ ಹೆಸರನ್ನು ಎಲ್ಲೂ ಪ್ರಸ್ತಾಪಿಸಿಲ್ಲ.
ಅದಾನಿ ಗ್ರೂಪ್ 30 ವರ್ಷಗಳವರೆಗೆ ವಿಮಾನ ನಿಲ್ದಾಣವನ್ನು ನಿರ್ವಹಿಸುವ, ಹೆಚ್ಚುವರಿ ರನ್‌ವೇ ಮತ್ತು ಟರ್ಮಿನಲ್ ಅನ್ನು ನಿರ್ಮಿಸುವುದರೊಂದಿಗೆ ರಾಜಧಾನಿ ನೈರೋಬಿಯ ಮುಖ್ಯ ವಿಮಾನ ನಿಲ್ದಾಣವನ್ನು ಆಧುನೀಕರಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಈ ಹಿಂದೆ ಅದಾನಿ ಗ್ರೂಪ್ ಜತೆ ಒಪ್ಪಂದಕ್ಕೆ ಕೀನ್ಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು ಮತ್ತು ಒಪ್ಪಂದ ವಿರೋಧಿಸಿ ವಿಮಾನ ನಿಲ್ದಾಣದ ನೌಕರರ ಪ್ರತಿಭಟನೆ ನಡೆಸಿದ್ದರು.
ಇನ್ನು ಪೂರ್ವ ಆಫ್ರಿಕಾದ ವ್ಯಾಪಾರ ಕೇಂದ್ರವಾದ ಕೀನ್ಯಾದಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಿಸುವ ಒಪ್ಪಂದವನ್ನು ಸಹ ಅದಾನಿ ಗ್ರೂಪ್ ಜತೆ ಮಾಡಿಕೊಳ್ಳಲಾಗಿತ್ತು.
ಈ ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಕೀನ್ಯಾದ ಕಡೆಯಿಂದ ಯಾವುದೇ ಲಂಚ ಅಥವಾ ಭ್ರಷ್ಟಾಚಾರ ನಡೆದಿಲ್ಲ ಎಂದು ಗುರುವಾರ ಇಂಧನ ಸಚಿವ ಒಪಿಯೊ ವಂಡಾಯಿ ಅವರು ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ಕೋರ್ಟ್‌ನಲ್ಲಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಸೇರಿ ಏಳು ಆರೋಪಿಗಳ ವಿರುದ್ಧ ಲಂಚ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ. ಗೌತಮ್ ಅಧಾನಿ ಅವರು ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಲಾಭದ ನಿರೀಕ್ಷೆಯೊಂದಿಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
Advertisement