
ನವದೆಹಲಿ: ಗ್ರಾಹಕರ ಹಕ್ಕು ಉಲ್ಲಂಘಿಸಿದ ಆರೋಪದಡಿ Ola Electric ಬೈಕ್ ಕಂಪನಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (Central Consumer Protection Authority-CCPA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಗ್ರಾಹಕರ ಹಕ್ಕುಗಳ ಉಲ್ಲಂಘನೆ, ತಪ್ಪುದಾರಿಗೆಳೆಯುವ ಜಾಹೀರಾತು ಮತ್ತು ಅನ್ಯಾಯದ ವ್ಯಾಪಾರದ ಅಭ್ಯಾಸಗಳಿಗಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಓಲಾ ಎಲೆಕ್ಟ್ರಿಕ್‌ಗೆ ಶೋಕಾಸ್ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಕಂಪನಿಯ ನಿಯಂತ್ರಕ ಫೈಲಿಂಗ್ ಪ್ರಕಾರ Ola Electric ಕಂಪನಿಯು ಅಕ್ಟೋಬರ್ 7, 2024 ರಂದು ಇಮೇಲ್ ಮೂಲಕ ಶೋಕಾಸ್ ನೋಟಿಸ್ ಅನ್ನು ಸ್ವೀಕರಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯಿಸಲು ಪ್ರಾಧಿಕಾರವು ಕಂಪನಿಗೆ 15 ದಿನಗಳ ಕಾಲಾವಧಿಯನ್ನು ಒದಗಿಸಿದೆ ಎಂದು ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಇದಲ್ಲದೆ, ಕಂಪನಿಯು ನಿರ್ದಿಷ್ಟ ಸಮಯದೊಳಗೆ ಪೋಷಕ ದಾಖಲೆಗಳೊಂದಿಗೆ ಪ್ರಾಧಿಕಾರಕ್ಕೆ ಪ್ರತಿಕ್ರಿಯಿಸುತ್ತದೆ ಎಂದೂ ಫೈಲಿಂಗ್ ನಲ್ಲಿ ಓಲಾ ಎಲೆಕ್ಟ್ರಿಕ್ ಸಂಸ್ಥೆ ಹೇಳಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಓಲಾ ಸಂಸ್ಥೆಯ ಎಲೆಕ್ಟ್ರಿಕ್ ವಾಹನಗಳ ಸರ್ವಿಸ್ ವಿಚಾರವಾಗಿ ವ್ಯಾಪಕ ದೂರುಗಳು ಬಂದಿದ್ದವು. ಓಲಾ ಬೈಕ್ ನ ಸರ್ವಿಸ್ ಸೇವೆ ತೀರಾ ಕಳಪೆಯಾಗಿದ್ದು, ಸಾಕಷ್ಟು ಸರ್ವಿಸ್ ಸ್ಟೇಷನ್ ಗಳಿಲ್ಲ. ಸರ್ವಿಸ್ ಗುಣಮಟ್ಟ ಕೂಡ ಕಳಪೆಯಾಗಿದೆ ಎಂದು ಹಲವು ಗ್ರಾಹಕರು ಆರೋಪಿಸಿದ್ದರು.
ಇದೇ ವಿಚಾರವಾಗಿ ಖ್ಯಾತ ಸ್ಟ್ಯಾಂಡಪ್ ಕಮಿಡಿಯನ್ ಕುನಾಲ್ ಕಮ್ರಾ ಕೂಡ ಟ್ವೀಟ್ ಮೂಲಕ ಓಲಾ ಸಂಸ್ಥೆಯ ಕಾಲೆಳೆದಿದ್ದರು. ಇದಕ್ಕೆ ಓಲಾ ಸಂಸ್ಥೆಯ ಸಂಸ್ಥಾಪಕ ಭವಿಶ್ ಅಗರ್ವಾಲ್ ಕೂಡ ತಿರುಗೇಟು ನೀಡಿದ್ದರು.
ಇವರಿಬ್ಬರ ಟ್ವೀಟ್ ಸಮರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ಟ್ವೀಟ್ ವಾರ್ ಮುಂದುವರೆದಿರುವಂತೆಯೇ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಓಲಾ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿದೆ.
Advertisement