ನವದೆಹಲಿ: ಆರೋಗ್ಯ ವಿಮೆ ಮೇಲಿನ GST ರದ್ಧತಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ವಿಮಾ ಪ್ರೀಮಿಯಂ ಕಡಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆರೋಗ್ಯ ವಿಮೆ (Health Insurance) ಮತ್ತು ಟರ್ಮ್ ವಿಮೆ (Term Insurance) ಪಾಲಿಸಿಗಳ ಮೇಲೆ ಜಿಎಸ್ ಟಿ ತೆಗೆದುಹಾಕಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ವಿಮೆ ಮೇಲಿನ ಜಿಎಸ್ ಟಿ ತೆಗೆದುಹಾಕಲು ಸಾರ್ವಜನಿಕರಿಂದ ವ್ಯಾಪಕ ಒತ್ತಡಗಳು ಬಂದ ಹಿನ್ನೆಲೆಯಲ್ಲಿ ಜಿಎಸ್‌ಟಿ ತೆಗೆದು ಹಾಕಲು ಮುಂದಾಗಿದೆ ಎನ್ನಲಾಗಿದೆ.
ಜಿಎಸ್‌ಟಿ ಕೌನ್ಸಿಲ್‌ನ ಸಚಿವ ಉಪಸಮಿತಿ ಇತ್ತೀಚೆಗೆ ಈ ನಿಟ್ಟಿನಲ್ಲಿ ಸಭೆ ನಡೆಸಿತ್ತು. ಇದರಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಮತ್ತು ಪಾಲಿಸಿದಾರರಿಗೆ ಪರಿಹಾರ ನೀಡಲು ವಿಮೆ ಮೇಲಿನ ಜಿಎಸ್‌ಟಿ ರದ್ದತಿಯನ್ನು ಬಹುತೇಕ ಸದಸ್ಯರು ಬೆಂಬಲಿಸಿದರು ಎಂದು ಹೇಳಲಾಗಿದೆ.
ಷರತ್ತು ಅನ್ವಯ!
ಇನ್ನು ಸಾಮಾನ್ಯ ಜನರು ತೆಗೆದುಕೊಳ್ಳುವ ರೂ.5 ಲಕ್ಷದೊಳಗಿನ ಆರೋಗ್ಯ ವಿಮಾ ಪಾಲಿಸಿಗಳ ಮೇಲೆ ಈ ವಿನಾಯಿತಿ ಲಭ್ಯವಿರುತ್ತದೆ. 5 ಲಕ್ಷಕ್ಕಿಂತ ಹೆಚ್ಚಿನ ಪಾಲಿಸಿಗಳಿಗೆ ಶೇ.18ರಷ್ಟು ಜಿಎಸ್‌ಟಿ ಮುಂದುವರಿಯುತ್ತದೆ.
ಇವುಗಳ ಜೊತೆಗೆ ಸೈಕಲ್ ಮತ್ತು ನೋಟ್ ಬುಕ್‌ಗಳ ಮೇಲೆ ಈಗಿರುವ ಜಿಎಸ್‌ಟಿಯನ್ನು ಶೇ12ರಿಂದ ಶೇ.5ಕ್ಕೆ ಇಳಿಸುವ ಪ್ರಸ್ತಾವನೆ ಇದ್ದು, 10 ಸಾವಿರ ರೂ 20 ಲೀಟರ್‍ಗಿಂತ ಹೆಚ್ಚಿನ ಪ್ಯಾಕೇಜ್ಡ್ ಕುಡಿಯುವ ನೀರಿನ ಮೇಲಿನ ಜಿಎಸ್‌ಟಿಯನ್ನು ಶೇಕಡಾ 18 ರಿಂದ ಶೇ.5 ಕ್ಕೆ ಇಳಿಸಲು ಉದ್ದೇಶಿಸಲಾಗಿದೆ. ಇದರಿಂದ ಆಗುವ ಆದಾಯ ನಷ್ಟವನ್ನು ಸರಿದೂಗಿಸಲು ಕೆಲವು ಐಷಾರಾಮಿ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.28ಕ್ಕೆ ಹೆಚ್ಚಿಸಲು ಜಿಎಸ್‌ಟಿ ಕೌನ್ಸಿಲ್ ಮುಂದಾಗಿದೆ ಎಂದು ಹೇಳಲಾಗಿದೆ.
ಮುಂದಿನ ತಿಂಗಳು ನಡೆಯಲಿರುವ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
Advertisement