ಬಜೆಟ್ ವಿಶ್ಲೇಷಣೆ: ಮಧ್ಯಂತರ ಬಜೆಟ್ ನ ಫೋಕಸ್ ವಲಯಗಳಿವು...

ರಂಗಸ್ವಾಮಿ ಮೂಕನಹಳ್ಳಿಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಎನ್ನುವ ಘೋಷಣೆ ಈ ಬಜೆಟ್ನಲ್ಲಿ ಆಗಿದೆ, ಇದರ ಜೊತೆಗೆ ಎಲ್ಲರ ಪ್ರಯತ್ನ ಕೂಡ ಸೇರಿಕೊಂಡರೆ ಅಲ್ಲಿಗೆ ಭಾರತ 2047ರ ವೇಳೆಗೆ ಮುಂದುವರೆದ ದೇಶಗಳ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ.
ಕೇಂದ್ರ ಬಜೆಟ್-2024-25 (ಸಾಂಕೇತಿಕ ಚಿತ್ರ)
ಕೇಂದ್ರ ಬಜೆಟ್-2024-25 (ಸಾಂಕೇತಿಕ ಚಿತ್ರ)

ಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಎನ್ನುವ ಘೋಷಣೆ ಈ ಬಜೆಟ್ನಲ್ಲಿ ಆಗಿದೆ, ಇದರ ಜೊತೆಗೆ ಸಬ್ ಕ ಪ್ರಯಾಸ್ ಅಂದರೆ ಎಲ್ಲರ ಪ್ರಯತ್ನ ಕೂಡ ಸೇರಿಕೊಂಡರೆ ಅಲ್ಲಿಗೆ ಭಾರತ 2047ರ ವೇಳೆಗೆ ಮುಂದುವರೆದ ದೇಶಗಳ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ. 2024-25ರ ಜಿಡಿಪಿ 10.5 ಪ್ರತಿಶತ ಎಂದು ಅಂದಾಜಿಸಲಾಗಿದೆ. 

ಫಿಸ್ಕಲ್ ಡೆಫಿಸಿಟ್ 24ರಲ್ಲಿ ಜಿಡಿಪಿಯ 5.8 ಪ್ರತಿಶತ ಆಗಲಿದೆ ಎಂದು ಅಂದಾಜಿಸಲಾಗಿದೆ. 25 ರಲ್ಲಿ ಅದನ್ನು 5.1 ಪ್ರತಿಶತಕ್ಕೂ ಮತ್ತು 26ರಲ್ಲಿ 4.5 ಪ್ರತಿಶತಕ್ಕೂ ಇಳಿಸುವ ಸವಾಲನ್ನು ಕೂಡ ಕೇಂದ್ರ ಸರಕಾರ ಹಾಕಿಕೊಂಡಿದೆ. ಇವೆಲ್ಲವೂ ಭಾರತದ ಆರ್ಥಿಕತೆ ಸರಿ ದಾರಿಯಲ್ಲಿದೆ ಎನ್ನುವುದನ್ನು ಹೇಳುತ್ತಿವೆ. ಫಿಸ್ಕಲ್ ಡೆಫಿಸಿಟ್ ಎಂದರೆ ಆದಾಯಕ್ಕೆ ಮೀರಿದ ಖರ್ಚು ಎಂದರ್ಥ.

ನಿನ್ನೆ ಮಂಡನೆಯಾದ ಬಜೆಟ್ ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಅದು ಮಧ್ಯಂತರ ಬಜೆಟ್. ಮುಂದಿನ ನಾಲ್ಕು ತಿಂಗಳು ಸರಕಾರಿ ಖರ್ಚಿಗೆ ಬೇಕಾಗುವ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲು ಮಂಡಿಸಿರುವ ಬಜೆಟ್ ಅಷ್ಟೇ. ಹೀಗಾಗಿ ಇದರಲ್ಲಿ ಮಂಡನೆಯಾದ ವಿಷಯಗಳ ವಿಸೃತ ರೊಪವನ್ನು ನಾವು ಜೂನ್ ತಿಂಗಳಲ್ಲಿ ಕಾಣಬಹದುದಾಗಿದೆ. ವಸ್ತುಸ್ಥಿತಿ ಹೀಗಿದ್ದೂ ಜೂನ್ ನಲ್ಲಿ ಬಜೆಟ್ನಲ್ಲಿ ಏನಿರಬಹುದು ಎನ್ನುವ ಸುಳಿವನ್ನು ಈ ಇಂಟರಿಮ್ ಬಜೆಟ್ ಬಿಟ್ಟು ಕೊಟ್ಟಿದೆ. ಆ ನಿಟ್ಟಿನಲ್ಲಿ ಕೆಳಗಿನವುಗಳನ್ನು ಫೋಕಸ್ ಏರಿಯಾ ಅಡಿಯಲ್ಲಿ ಗುರುತಿಸಲಾಗಿದೆ.

  1. ಗರೀಬ್ ಕಲ್ಯಾಣ್ - ದೇಶ್ ಕ ಕಲ್ಯಾಣ್ ಯೋಜನೆಯಲ್ಲಿ ಬಡತನವನ್ನು ಕಡಿಮೆ ಮಾಡುವ ಉದ್ದೇಶವನ್ನು ಮುಂದುವರಿಸಲಾಗುವುದು. 2005/06 ರಿಂದ 2022/23 ರ ವೇಳೆಗೆ ಈ ಯೋಜನೆಯ ಅಡಿಯಲ್ಲಿ ಒಟ್ಟಾರೆ 25 ಕೋಟಿ ಜನ ತೀವ್ರ ಬಡತನ ರೇಖೆಯಿಂದ ಮೇಲೇರಿದ್ದಾರೆ.
  2. ಭಾರತದ ಯುವ ಜನತೆಯನ್ನು ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಟ್ರೈನ್ ಮಾಡುವುದು ಆ ಮೂಲಕ ಅವರ ಭವಿಷ್ಯವನ್ನು ಉತ್ತಮಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
  3. ರೈತರ ಕ್ಷೇಮಾಭಿವೃದ್ಧಿ - ಅನ್ನದಾತ ಯೋಜನೆ ಅಡಿಯಲ್ಲಿ ರೈತರ ಒಟ್ಟಾರೆ ಒಳಿತಿಗಾಗಿ ಫಸಲ್ ಬಿಮಾ ಯೋಜನೆ, ಈ -ನಾಮ್ ಅಡಿಯಲ್ಲಿ ಮಂಡಿಗಳ ಒಗ್ಗೂಡಿಸುವಿಕೆ ಇತ್ಯಾದಿಗಳ ಘೋಷಣೆ .
  4. ನಾರಿ ಶಕ್ತಿ ಯೋಜನೆ ಅಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಮಹಿಳೆಯರನ್ನು ಲಕ್ಪತಿ ದೀದಿ ಅಂದರೆ ಲಕ್ಷಾದೀಶ್ವರ ಮಹಿಳೆಯನ್ನಾಗಿಸಿಸಲು ಶ್ರಮಿಸಲಿದೆ. ಅಲ್ಲದೆ ಭಾರತದ ಲೇಬರ್ ಫೋರ್ಸ್ ನಲ್ಲಿ ಹೆಚ್ಚು ಹೆಚ್ಚು ಮಹಿಳೆಯರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ.
  5. ಅಮೃತ್ ಕಾಲ್ ಯೋಜನೆಯ ಅಡಿಯಲ್ಲಿ 2070ರ ವೇಳೆಗೆ ನೆಟ್ ಜೀರೋ ಅಂದರೆ ವಾತಾವರಣಕ್ಕೆ ನಮ್ಮ ದೇಶದಿಂದ ಹೊರಹಾಕುವ ಇಂಗಾಲ ಹೊಗೆಯನ್ನು ಕಡಿಮೆ ಮಾಡುವುದಕ್ಕೆ ಸರಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ವಿಂಡ್ ಎನರ್ಜಿ, ಸೋಲಾರ್, ಇತ್ಯಾದಿಗಳ ಬಳಕೆಯನ್ನು ಹೆಚ್ಚಿಸಲಾಗುವುದು. ಒಂದು ಕೋಟಿ ಮನೆಯ ಚಾವಣಿ ಮೇಲೆ ಸೋಲಾರ್ ಅಳವಡಿಸಿ ಫ್ರೀ ವಿದ್ಯುತ್ ನೀಡುವ ಭರವಸೆ ಇವೆಲ್ಲವೂ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರ ಬದುಕನ್ನು ಉತ್ತಮಗೊಳಿಸಲಿದೆ.
  6. ಮುಂದಿನ ಐದು ವರ್ಷದಲ್ಲಿ 2 ಕೋಟಿ ಮನೆ ಕಟ್ಟುವ ನಿರ್ಧಾರ, ಮಾಧ್ಯಮವರ್ಗದವರಿಗೂ ಮನೆ ನೀಡಲು ಯೋಜನೆ ತರುವುದು ಕೂಡ ಕೇಂದ್ರ ಸರಕಾರದ ಫೋಕಸ್ ಏರಿಯಾದಲ್ಲಿದೆ.
  7. ಅಯುಷ್ಮಾನ್ ಭಾರತ್ ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಲಾಗೂ ಆಗುವಂತೆ ನೋಡಿಕೊಳ್ಳಲಾಗುವುದು.
  8. ಪ್ರತಿ ರಾಜ್ಯವೂ ಟೂರಿಸಂ ಅಭಿವೃದ್ಧಿ ಪಡಿಸಲು ಪ್ರೋತ್ಸಾಹವನ್ನು ನೀಡಲಾಗುವುದು ಈ ನಿಟ್ಟಿನಲ್ಲಿ ಬಡ್ಡಿರಹಿತ ಸಾಲವನ್ನು ರಾಜ್ಯಗಳಿಗೆ ಕೇಂದ್ರ ಸರಕಾರ ನೀಡಲಿದೆ.

ಹೊಸ ಇನ್ಕಮ್ ಟ್ಯಾಕ್ಸ್ ಯೋಜನೆಯನ್ನು ಹೆಚ್ಚು ಜನರು ಬಳಸಲಿ ಎನ್ನುವುದು ಕೇಂದ್ರ ಸರಕಾರದ ಉದ್ದೇಶ. ಉಳಿಕೆಗೆ ಮತ್ತು ಹಣ ಉಳಿಸುವ ಜನರಿಗೆ ಯಾವುದೇ ಇನ್ಸೆನ್ಟಿವ್ ಇಲ್ಲವಾಗಿದೆ. ಖರ್ಚು ಮಾಡುವವರಿಗೆ ಮತ್ತು ಸಾಲ ಮಾಡವುವವರಿಗೆ ಎಂದಿಗೂ ಮನ್ನಣೆ. ಇದರ ಜೊತೆಗೆ ನಾವು ಗಮನಿಸಬೇಕಾದ ಇನ್ನೊಂದು ಅಂಶ ಹಣದುಬ್ಬರ. ಈ ಹಣದುಬ್ಬರದ ಕಾರಣ ನಮ್ಮ ಆದಾಯದಲ್ಲಿ ಬಹಳಷ್ಟು ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ಖರ್ಚು ಇರುವುದರಿಂದ ಜನರ ಕೈಯಲ್ಲಿ ಹಣ ಉಳಿಯುವುದು ದುಸ್ಸರವಾಗಿದೆ. ಆದರೆ ಕಳೆದ ಐದು ವರ್ಷದಿಂದ ಟ್ಯಾಕ್ಸ್ ಸ್ಲಾಬ್ ಮಾತ್ರ ಹಾಗೆ ಇದೆ. ನಮ್ಮ ಆದಾಯ ಹೆಚ್ಚಾಗಿದ್ದು ಮಾತ್ರ ಲೆಕ್ಕಕ್ಕೆ ಬರುತ್ತದೆ, ಖರ್ಚು ಲೆಕ್ಕಕ್ಕೆ ತೆಗೆದುಕೊಳ್ಳದ ಕಾರಣ ನಾವು ಕಟ್ಟುವ ತೆರಿಗೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ. ಇದು ಸರಕಾರ ನೀಡಿರುವ ಅಂಕಿಅಂಶದಿಂದ ಸಾಬೀತಾಗಿದೆ. ಇದು ಅವೈಜ್ಞಾನಿಕ , ಕೇಂದ್ರ ಸರಕಾರ ಜೂನ್ ತಿಂಗಳಲ್ಲಿ ಮಂಡಿಸಲಿರುವ ಪೂರ್ಣ ಪ್ರಮಾಣದ ಬಜೆಟ್ ನಲ್ಲಿ ಇದರ ಬಗ್ಗೆ ಗಮನ ಹರಿಸಿದರೆ ಉತ್ತಮ.

ಉಳಿದಂತೆ ಭಾರತದ ಆರ್ಥಿಕತೆ ಸುಭದ್ರವಾಗಿದೆ. ಜಗತ್ತಿನ ಬೇರೆಲ್ಲಾ ಆರ್ಥಿಕತೆಗಳು ನಿಟ್ಟಿಸಿರು ಬಿಡುತ್ತಿರುವ ಸಮಯದಲ್ಲಿ ಭಾರತದ ಆರ್ಥಿಕತೆ ನಾಗಾಲೋಟದಲ್ಲಿ ಸಾಗುತ್ತಿದೆ 2024-2025ರ ಜಿಡಿಪಿ 10.5 ಪ್ರತಿಶತ ವೃದ್ಧಿಯಾಗಲಿದೆ ಎನ್ನುವುದು ಅದಕ್ಕೊಂದು ಸಾಕ್ಷಿ. ಭಾರತ ಇದೆ ವೇಗದಲ್ಲಿ ಸಾಗಿದರೆ ವಿಶ್ವ ಆರ್ಥಿಕತೆಯ ದೊಡ್ಡಣ್ಣ ಆಗುವುದು ಕಷ್ಟವೇನೂ ಅಲ್ಲ, ಮುಂದಿನ ಮೂರು ದಶಕ ಸಬ್ ಕ ಪ್ರಯಾಸ್ ಅಗತ್ಯವಾಗಿದೆ ಬೇಕಾಗಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com