
ನವದೆಹಲಿ: ಅಮೆರಿಕ ಭಾರತದ ಆಮದು ವಸ್ತುಗಳ ಮೇಲೆ ಘೋಷಿಸಿದ ಹೆಚ್ಚಿನ ಸುಂಕಗಳಿಂದಾಗಿ ಜಾಗತಿಕ ಮಟ್ಟದಲ್ಲಿ ವ್ಯಾಪಾರದ ಸುತ್ತಲಿನ ಅನಿಶ್ಚಿತತೆಯ ಹೊರತಾಗಿಯೂ, ಭಾರತೀಯ ರಿಸರ್ವ್ ಬ್ಯಾಂಕ್ 2025-26 ಆರ್ಥಿಕ ಸಾಲಿನಲ್ಲಿ ಜಿಡಿಪಿ ಬೆಳವಣಿಗೆಯ ಗುರಿಯನ್ನು ಶೇಕಡಾ 6.5ರಲ್ಲಿ ಕಾಯ್ದುಕೊಂಡಿದೆ, ಇನ್ನು ಹಣದುಬ್ಬರ (Inflation)ಗುರಿಯನ್ನು ಶೇಕಡಾ 3.7 ರಿಂದ ಶೇಕಡಾ 3.1 ಕ್ಕೆ ಇಳಿಸಿದೆ.
ಇಂದು ಬಿಡುಗಡೆ ಮಾಡಿದ ಹಣಕಾಸು ನೀತಿ ಹೇಳಿಕೆಯಲ್ಲಿ, ನೈಋತ್ಯ ಮಾನ್ಸೂನ್, ಕಡಿಮೆ ಹಣದುಬ್ಬರ, ಹೆಚ್ಚುತ್ತಿರುವ ಸಾಮರ್ಥ್ಯ ಬಳಕೆ ಮತ್ತು ಅನುಕೂಲಕರ ಹಣಕಾಸು ಪರಿಸ್ಥಿತಿಗಳು ದೇಶೀಯ ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುತ್ತಲೇ ಇವೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು.
ಬಲವಾದ ಸರ್ಕಾರಿ ಬಂಡವಾಳ ವೆಚ್ಚ ಸೇರಿದಂತೆ ಬೆಂಬಲಿತ ವಿತ್ತೀಯ, ನಿಯಂತ್ರಕ ಮತ್ತು ಹಣಕಾಸು ನೀತಿಗಳು ಬೇಡಿಕೆಯನ್ನು ಹೆಚ್ಚಿಸಬೇಕು ಎಂದು ಹೇಳಿದೆ. ಆರ್ ಬಿಐ ಪ್ರಕಾರ, ಸೇವಾ ವಲಯವು ಮುಂಬರುವ ತಿಂಗಳುಗಳಲ್ಲಿ ನಿರ್ಮಾಣ ಮತ್ತು ವ್ಯಾಪಾರದಲ್ಲಿ ನಿರಂತರ ಬೆಳವಣಿಗೆ ನಿರೀಕ್ಷಿಸಲಾಗಿದೆ. ಈಗ ನಡೆಯುತ್ತಿರುವ ಸುಂಕ ಪ್ರಕಟಣೆಗಳು ಮತ್ತು ವ್ಯಾಪಾರ ಮಾತುಕತೆಗಳ ನಡುವೆ ಬಾಹ್ಯ ಬೇಡಿಕೆಯ ನಿರೀಕ್ಷೆಯು ಅನಿಶ್ಚಿತವಾಗಿಯೇ ಉಳಿದಿದೆ ಎಂದು ಎಚ್ಚರಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀರ್ಘಕಾಲದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ನಿರಂತರ ಜಾಗತಿಕ ಅನಿಶ್ಚಿತತೆಗಳು ಮತ್ತು ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿನ ಚಂಚಲತೆಯಿಂದ ಹೊರಹೊಮ್ಮುವ ಅಡೆತಡೆಗಳು ಬೆಳವಣಿಗೆಯ ಮುನ್ನೋಟಕ್ಕೆ ಅಪಾಯಗಳನ್ನುಂಟುಮಾಡುತ್ತವೆ ಎಂದು ಹೇಳಿದೆ.
ಕೇಂದ್ರ ಬ್ಯಾಂಕ್ ಆರ್ ಬಿಐ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.6.7, ಮೂರನೇ ತ್ರೈಮಾಸಿಕದಲ್ಲಿ ಶೇ.6.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.6.3 ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿದೆ.
ಹಣದುಬ್ಬರಕ್ಕೆ ಸಂಬಂಧಿಸಿದಂತೆ, ನೈಋತ್ಯ ಮಾನ್ಸೂನ್‌ನ ಸ್ಥಿರ ಪ್ರಗತಿ, ಆರೋಗ್ಯಕರ ಖಾರಿಫ್ ಬಿತ್ತನೆ, ತುಂಬಿದ ಜಲಾಶಯ, ಆಹಾರ ಧಾನ್ಯಗಳ ದಾಸ್ತಾನುಗಳೊಂದಿಗೆ ದೊಡ್ಡ ಅನುಕೂಲಕರ ಮೂಲ ಪರಿಣಾಮಗಳು ಹಣದುಬ್ಬರದಲ್ಲಿ ಮಿತವಾಗಲು ಕಾರಣವಾಗಿವೆ ಎಂದು ಹೇಳಿದೆ.
2026 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ವೇಳೆಗೆ ಮತ್ತು ಅದಕ್ಕೂ ನಂತರ ಸಿಪಿಐ ಹಣದುಬ್ಬರವು ಶೇ.4 ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರ್ ಬಿಐ ಹೇಳಿದೆ.
Advertisement