
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಆಮದಿನ ಮೇಲೆ ಶೇ.50 ರಷ್ಟು ಸುಂಕ ವಿಧಿಸಿರುವುದು ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆಯೇ ಎಂಬುದರ ಕುರಿತು ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಈ ಮಧ್ಯೆ ಟ್ರಂಪ್ ಸುಂಕಗಳು ಭಾರತದ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು S&P Global Ratings ನಿರ್ದೇಶಕ ಯೀಫಾರ್ನ್ ಫುವಾ ಬುಧವಾರ ಹೇಳಿದ್ದಾರೆ.ಅಮೆರಿಕದ ಶೇ.50 ರಷ್ಟು ಸುಂಕಗಳು ವ್ಯಾಪಾರ-ಆಧಾರಿತ ಆರ್ಥಿಕತೆ ಅಲ್ಲ. ರೇಟಿಂಗ್ ದೃಷ್ಟಿಕೋನವು ಸಕಾರಾತ್ಮಕವಾಗಿ ಇರಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ದೃಢವಾದ ಆರ್ಥಿಕ ಬೆಳವಣಿಗೆಯನ್ನು ಉಲ್ಲೇಖಿಸಿ, S&P ಭಾರತದ ರೇಟಿಂಗ್‌ನ್ನು 'BBB' ಗೆ ಹೆಚ್ಚಿಸಿತ್ತು. ಆಗಸ್ಟ್ 6 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ಭಾರತೀಯ ಆಮದುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸಿದ್ದರು. ಆಗಸ್ಟ್ 27 ರಿಂದ ಹೆಚ್ಚುವರಿ ಸುಂಕದೊಂದಿಗೆ ಒಟ್ಟು ಶೇ. 50 ರಷ್ಟು ಸುಂಕ ವಿಧಿಸಿದ್ದಾರೆ.
ರಷ್ಯಾದಿಂದ ನಿರಂತರವಾಗಿ ತೈಲ ಖರೀದಿಗೆ ಪ್ರತಿಕ್ರಿಯೆಯಾಗಿ ಈ ಸುಂಕ ವಿಧಿಸಲಾಗುತ್ತಿದೆ ಎಂದು ಶ್ವೇತಭವನ ಹೇಳಿದೆ.
ಅಮೆರಿಕದ ಸುಂಕ ಹೇರಿಕೆಯು ಭಾರತದ ಬೆಳವಣಿಗೆ ಮೇಲೆ ಅಪಾಯವನ್ನುಂಟು ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಯೀಫಾರ್ನ್, ಭಾರತದ ಮೇಲೆ ವಿಧಿಸಲಾದ ಸುಂಕಗಳು ಆರ್ಥಿಕ ಬೆಳವಣಿಗೆ ವಿಷಯದಲ್ಲಿ ಪ್ರಭಾವ ಬೀರುತ್ತವೆ ಅಂತಾ ಅನಿಸುವುದಿಲ್ಲ. ಏಕೆಂದರೆ ಭಾರತವು ವ್ಯಾಪಾರ-ಆಧಾರಿತ ಆರ್ಥಿಕತೆ ಅಲ್ಲ. ಇನ್ನೂ ಭಾರತವು ಅಮೆರಿಕಕ್ಕೆ ಮಾಡುವ ರಫ್ತು ದೇಶದ ಜಿಡಿಪಿಯಲ್ಲಿ ಕೇವಲ ಶೇ. 2 ರಷ್ಟಿದೆ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಶೇ.6.5 ರಷ್ಟು ಜಿಡಿಪಿ ಬೆಳವಣಿಗೆ ದರ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇ 6.5 ಎಂದು ಎಸ್ & ಪಿ ಅಂದಾಜಿಸಿದೆ. ಕಳೆದ ವರ್ಷವೂ ಇಷ್ಟೇ ಅಂದಾಜಿಸಿತ್ತು.
US ಗೆ ರಫ್ತು ಮಾಡುವ ಔಷಧಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ನಂತಹ ಪ್ರಮುಖ ವಲಯಗಳಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಧೀರ್ಘಾವಧಿಯಲ್ಲಿ ಅಮೆರಿಕದ ಹೆಚ್ಚುವರಿ ಸುಂಕಗಳು ಭಾರತದ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಅನಿಸುತ್ತಿಲ್ಲ. ಹೀಗಾಗಿ ಭಾರತದ ಆರ್ಥಿಕ ಪ್ರಗತಿ ಸಕಾರಾತ್ಮಕವಾಗಿಯೇ ಕಾಣುತ್ತಿದೆ ಎಂದು ವೆಬಿನಾರ್ ವೊಂದರಲ್ಲಿ ಯೀಫಾರ್ನ್ ತಿಳಿಸಿದ್ದಾರೆ.
Advertisement