

ಇತ್ತೀಚಿನ ತಿಂಗಳುಗಳಲ್ಲಿ ಚಿನ್ನದ ಬೆಲೆಗಳು ಗಗನಕ್ಕೇರುತ್ತಿದೆ. ಭಾರತೀಯ ಸಮಾಜದಲ್ಲಿ ಚಿನ್ನ ಭಾವನಾತ್ಮಕ ಹಾಗೂ ಆರ್ಥಿಕ ದೃಷ್ಟಿಯಿಂದಲೂ ಮಧ್ಯಮವರ್ಗದ ಕುಟುಂಬಗಳಿಗೆ ಬೆಸೆದುಕೊಂಡಿರುವ ಪ್ರಮುಖ ಅಂಶವಾಗಿದೆ.
ಹಳದಿ ಲೋಹದೊಂದಿಗೆ ಆಳವಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಹಂಚಿಕೊಳ್ಳುವ ಭಾರತೀಯ ಗ್ರಾಹಕರು ಮದುವೆಗಳು ಅಥವಾ ಶುಭ ಸಂದರ್ಭಗಳಲ್ಲಿ ಅರ್ಥಪೂರ್ಣ ಖರೀದಿಗಳನ್ನು ಮಾಡುವುದು ಬೆಲೆ ಏರಿಕೆಯ ನಡುವೆ ಹಿಂದೆಂದಿಗಿಂತಲೂ ಕಷ್ಟಕರವಾಗಿದೆ. ಚಿನ್ನ ಬಹಳ ಹಿಂದಿನಿಂದಲೂ ಭಾರತೀಯ ಕುಟುಂಬಗಳಿಗೆ ಭಾವನಾತ್ಮಕ ಆಧಾರ ಮತ್ತು ಆರ್ಥಿಕ ಸುರಕ್ಷತಾ ಜಾಲವಾಗಿದೆ. ಆದರೆ 2025 ರಲ್ಲಿ, ಚಿನ್ನ- ಮಧ್ಯಮವರ್ಗದ ಕುಟುಂಬಗಳ ನಡುವಿನ ಸಂಬಂಧ ಗಂಭೀರ ಒತ್ತಡದಲ್ಲಿದೆ.
ಅನೇಕ ಕುಟುಂಬಗಳು ಈಗ ಅತಿ ಕಡಿಮೆ ಪ್ರಮಾಣದಲ್ಲಿ ಮಾತ್ರ ಚಿನ್ನ ಖರೀದಿಸುತ್ತಿವೆ. ಆದರೆ ಇತರರು ಬೆಲೆಗಳು ತಣ್ಣಗಾಗುತ್ತವೆ ಎಂಬ ಭರವಸೆಯಿಂದ ಖರೀದಿಗಳನ್ನು ಮುಂದೂಡುತ್ತಿದ್ದಾರೆ. ಚೆನ್ನೈನಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಈಗ 10 ಗ್ರಾಂಗೆ 1,27,860 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಬೆಲೆ 1,17,200 ರೂ.ಗಳಷ್ಟಿದೆ. ಹೈದರಾಬಾದ್‌ನಲ್ಲಿ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 1,16,450 ರೂ.ಗಳಾಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,27,040 ರೂ.ಗಳಷ್ಟಿದೆ.
ಈ ಬೆಲೆ ಏರಿಕೆ ಟ್ರೆಂಡ್ ಚಿನ್ನ ಸಾಮಾನ್ಯ ಜನರಿಗೆ ಕೈಗೆಟುಕುವ ಮಟ್ಟಕ್ಕೆ ಮರಳುತ್ತದೆಯೇ? ಎಂಬ ದೊಡ್ಡ ಪ್ರಶ್ನೆಗೆ ನಮ್ಮನ್ನು ದೂಡಿದೆ. ಅದಕ್ಕೆ ಉತ್ತರ ಹುಡುಕುವುದಕ್ಕೂ ಮೊದಲು, ಹಬ್ಬದ ಬೇಡಿಕೆ ಅಥವಾ ಸ್ಥಳೀಯ ಖರೀದಿ ಪ್ರವೃತ್ತಿಗಳನ್ನು ಮೀರಿ ಬೆಲೆಗಳು ನಿಜವಾಗಿಯೂ ಏಕೆ ಹೆಚ್ಚಾಗುತ್ತಿದೆ ಮತ್ತು ಅದು ಶೀಘ್ರದಲ್ಲೇ ಕಡಿಮೆಯಾಗುವ ಸಾಧ್ಯತೆ ಇದೆಯೇ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.
ಚಿನ್ನದ ಬೆಲೆಗಳಲ್ಲಿನ ತೀವ್ರ ಏರಿಕೆ ಕೇವಲ ಕಾಲೋಚಿತ ಏರಿಕೆಯಲ್ಲ; ಇದು ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಆಳವಾದ, ರಚನಾತ್ಮಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಾದ್ಯಂತ, ಕೇಂದ್ರ ಬ್ಯಾಂಕುಗಳು 40 ವರ್ಷಗಳಲ್ಲಿ ಕಂಡು ಕೇಳರಿಯದ ವೇಗ- ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿವೆ. ಸರ್ಕಾರಗಳಿಂದ ಈ ಬೃಹತ್ ಬೇಡಿಕೆಯು ಬೆಲೆಗಳಿಗೆ ಬಲವಾದ ನೆಲೆಯನ್ನು ಸೃಷ್ಟಿಸಿದೆ ಮತ್ತು ತಾತ್ಕಾಲಿಕ ಬದಲಾವಣೆಗಳಿದ್ದರೂ ಸಹ ಚಿನ್ನ ಹಳೆಯ, ಕೆಳ ಮಟ್ಟಕ್ಕೆ ಮರಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಜಾಗತಿಕ ಪರಿಸ್ಥಿತಿಗಳು ಸಹ ಈ ಬೆಲೆಗಳ ಏರಿಕೆಗೆ ಕಾರಣವಾಗುತ್ತಿವೆ. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಬದಲಾಗುತ್ತಿರುವ ವ್ಯಾಪಾರ ಸಂಬಂಧಗಳು, ಹಣದುಬ್ಬರ ಮತ್ತು ಅನಿಶ್ಚಿತ ಬಡ್ಡಿದರ ನೀತಿಗಳು ದೊಡ್ಡ ಸಂಸ್ಥೆಗಳು ಮತ್ತು ಸಾಮಾನ್ಯ ಹೂಡಿಕೆದಾರರು ಸುರಕ್ಷಿತ- ಕ್ಷೇತ್ರಗಳಲ್ಲಿ- ಸ್ವತ್ತುಗಳಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ಮಾಡುತ್ತಿವೆ. ಇಂತಹ ಸಮಯದಲ್ಲಿ, ಚಿನ್ನ ಸ್ವಾಭಾವಿಕವಾಗಿ ಆದ್ಯತೆಯ ದೀರ್ಘಕಾಲೀನ ರಕ್ಷಣೆಯಾಗುತ್ತದೆ. ಇದಷ್ಟೇ ಅಲ್ಲದೇ ಭಾರತದಲ್ಲಿ, ರೂಪಾಯಿಯ ಸ್ಥಿರ ದುರ್ಬಲತೆಯು ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಜಾಗತಿಕ ಚಿನ್ನದ ಬೆಲೆಯಲ್ಲಿ ಸಣ್ಣ $20–$30 ಹೆಚ್ಚಳವಾದರೂ ದೇಶೀಯ ದರಗಳಲ್ಲಿ ತೀವ್ರ ಏರಿಕೆ ಉಂಟಾಗುತ್ತದೆ. ಈ ಪರಿಣಾಮ ಭಾರತೀಯ ಖರೀದಿದಾರರ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಸ್ಥಳೀಯವಾಗಿ ಚಿನ್ನವನ್ನು ಇನ್ನಷ್ಟು ದುಬಾರಿ ಎಂದು ಭಾವಿಸುವಂತೆ ಮಾಡುತ್ತದೆ.
ಹಿಂದಿನ ಮತ್ತು ಪ್ರಸ್ತುತ ಬೆಲೆ ವಾಸ್ತವಗಳನ್ನು ಹೋಲಿಸಿದಾಗ ಚಿನ್ನ ಕೈಗೆಟುಕುವ ಅಂತರವು ಸ್ಪಷ್ಟವಾಗುತ್ತದೆ. 2004 ರಲ್ಲಿ, ಮಧ್ಯಮ ವರ್ಗದ ಕುಟುಂಬ 5,850 ರೂ.ಗಳಿಗೆ 10 ಗ್ರಾಂ ಚಿನ್ನವನ್ನು ಆರಾಮವಾಗಿ ಖರೀದಿಸಬಹುದಿತ್ತು, ಒಂದು ತಿಂಗಳ ಉಳಿತಾಯದಲ್ಲಿ 10 ಗ್ರಾಮ್ ಚಿನ್ನ ಖರೀದಿಸುವ ಅವಕಾಶವಿತ್ತು. 2025 ರಲ್ಲಿ, ಅದೇ 10 ಗ್ರಾಂ ಬೆಲೆ ಸುಮಾರು 1,23,000 ರೂ.ಗಳಾಗಿದ್ದು, ಈಗ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಇದೇ ಪ್ರಮಾಣದ ಚಿನ್ನ ಖರೀದಿಸುವುದಕ್ಕೆ ಎರಡು ರಿಂದ ಮೂರು ತಿಂಗಳ ಉಳಿತಾಯದ ಅಗತ್ಯವಿದೆ. ಈ ವಿಸ್ತರಿಸುತ್ತಿರುವ ಅಂತರ ಆಳವಾದ ಆರ್ಥಿಕ ಒತ್ತಡವನ್ನು ಪ್ರತಿಬಿಂಬಿಸುತ್ತದೆ, ಚಿನ್ನದ ಬೆಲೆಗಳು ಏರುತ್ತಿರುವ ವೇಗದಲ್ಲಿ ವೇತನಗಳು ಬೆಳೆಯುತ್ತಿಲ್ಲ.
ಇತ್ತೀಚಿನ ಆದಾಯದ ಡೇಟಾ ಇನ್ನೂ ಹೆಚ್ಚು ವಾಸ್ತವಿಕ ಚಿತ್ರಣವನ್ನು ನೀಡುತ್ತಿದ್ದು, 2025 ರಲ್ಲಿ, ಕೆಳ ಮಧ್ಯಮ ವರ್ಗದ ಕುಟುಂಬ ತಿಂಗಳಿಗೆ ಸರಿಸುಮಾರು 33,000 ರೂ.ಗಳನ್ನು ಗಳಿಸುತ್ತದೆ. ಅಗತ್ಯ ವೆಚ್ಚಗಳಿಗಾಗಿ ಸುಮಾರು 20,000 ರೂ.ಗಳನ್ನು ಬಳಸುತ್ತವೆ. ಎರಡನೇ ಹಂತದ ನಗರಗಳಲ್ಲಿ ಸರಾಸರಿ ಆದಾಯ ರೂ. 28,000 ರಿಂದ ರೂ. 32,000 ರವರೆಗೆ ಇದ್ದರೆ, ಮೆಟ್ರೋ ನಗರಗಳಲ್ಲಿ ಇದು ರೂ. 38,000 ರಿಂದ ರೂ. 42,000 ವರೆಗೆ ಏರುತ್ತದೆ. ಮಧ್ಯಮ ವರ್ಗದವರ ವಾರ್ಷಿಕ ಆದಾಯ ರೂ. 5 ಲಕ್ಷದಿಂದ ರೂ. 30 ಲಕ್ಷದವರೆಗಿದೆ ಎಂದುಕೊಂಡರೂ, ಏರುಗತಿಯಲ್ಲಿರುವ ಶಿಕ್ಷಣ ವೆಚ್ಚಗಳು, ಆರೋಗ್ಯ ಸೇವೆ ಬಿಲ್‌ಗಳು, ಇಎಂಐಗಳು ಮತ್ತು ಹಣದುಬ್ಬರ ಚಿನ್ನದಂತಹ ವಿವೇಚನಾ ಖರೀದಿಗಳನ್ನು ಹೆಚ್ಚು ಅಪರೂಪವಾಗಿಸಿದೆ.
ಈ ಆರ್ಥಿಕ ಒತ್ತಡ ಭಾರತದಾದ್ಯಂತ ಮತ್ತೊಂದು ಪ್ರವೃತ್ತಿಯಲ್ಲಿ ಪ್ರತಿಫಲಿಸುತ್ತಿದೆ. ಅದೆಂದರೆ ಚಿನ್ನದ ಸಾಲ ಅಂಗಡಿಗಳ ತ್ವರಿತ ಏರಿಕೆ. ಅನೇಕ ಪ್ರದೇಶಗಳಲ್ಲಿ, ಪ್ರತಿಯೊಂದು ಹೊಸ ಆಭರಣ ಶೋ ರೂಂ ಆರಂಭವಾದಾಗಲೂ, ಚಿನ್ನದ ಸಾಲ ಶಾಖೆಯು ಅದರ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತದೆ. ತುರ್ತು ಸಂದರ್ಭಗಳಲ್ಲಿ ಕುಟುಂಬಗಳು ಇನ್ನೂ ಚಿನ್ನವನ್ನು ಅವಲಂಬಿಸಿದ್ದರೂ, ಬೆಲೆಗಳು ಗಗನಕ್ಕೇರುತ್ತಿರುವುದರಿಂದ ಅವರು ಚಿನ್ನವನ್ನು ಖರೀದಿಸುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಜನರು ಸಾಲದ ಅಗತ್ಯವಿರುವಾಗ ಮೊದಲ ಆಸ್ತಿಯಾಗಿ ಚಿನ್ನವನ್ನು ಬಳಕೆ ಮಾಡುವುದು ಇನ್ನೂ ಉಳಿದಿರುವ ಪ್ರವೃತ್ತಿಯಾಗಿದೆ. ಆದರೆ ನಂತರ ಆ ಚಿನ್ನವನ್ನು ಬದಲಾಯಿಸುವ ಅಥವಾ ಪುನಃ ವಾಪಸ್ ಪಡೆಯುವ ಸಾಮರ್ಥ್ಯವು ಹೆಚ್ಚು ಕಷ್ಟಕರವಾಗುತ್ತಿದೆ.
ಪ್ರಸ್ತುತ ಜಾಗತಿಕ ಪರಿಸರದಲ್ಲಿ ಬೆಲೆಗಳು ಹಿಂದಿನ ಮಟ್ಟಕ್ಕೆ ಮರಳುವವರೆಗೆ ಕಾಯುವುದು ಅವಾಸ್ತವಿಕವಾಗಿದೆ. ಇದರರ್ಥ, ಹಳದಿ ಲೋಹವು ಶಾಶ್ವತವಾಗಿ ಜನಸಾಮಾನ್ಯರಿಗೆ ತಲುಪಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ 'ಇಲ್ಲ' ಎಂಬುದಾಗಿದೆ. ಅಗತ್ಯವಿರುವುದು ಮನಸ್ಥಿತಿ ಮತ್ತು ಅದನ್ನು ಸಂಗ್ರಹಿಸುವ ವಿಧಾನದಲ್ಲಿ ಬದಲಾವಣೆ. ಭಾರತೀಯ ಕುಟುಂಬಗಳು ಚಿನ್ನದ ಸಂಪತ್ತನ್ನು ನಿರ್ಮಿಸುವ ಹೆಚ್ಚು ರಚನಾತ್ಮಕ ಮತ್ತು ವ್ಯವಸ್ಥಿತ ಮಾರ್ಗಗಳತ್ತ ಸಾಗಬೇಕಾಗಿದೆ.
ಚಿನ್ನದ SIP ಗಳಂತಹ ಆಧುನಿಕ ಚಿನ್ನದ ಸಂಗ್ರಹಣೆ ಸಾಧನಗಳನ್ನು ಮಧ್ಯಮ ವರ್ಗದವರು ಆಯ್ಕೆ ಮಾಡಿಕೊಳ್ಳಬೇಕಿದೆ. ಇದು ಮನೆಗಳು ಕನಿಷ್ಠ ಮೊತ್ತದ ದೈನಂದಿನ SIP ಗಳೊಂದಿಗೆ ಅಥವಾ ರೂ. 20 ರಿಂದ ರೂ. 100 ರಿಂದ ರೂ. 500 ರವರೆಗೆ ಮಾಸಿಕ ಕೊಡುಗೆಗಳೊಂದಿಗೆ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಈ ಕಡಿಮೆ-ಪ್ರವೇಶ ವಿಧಾನವು ಹಣಕಾಸಿನ ಒತ್ತಡವನ್ನು ತೆಗೆದುಹಾಕುತ್ತದೆ ಮತ್ತು ಕಾಲಾನಂತರದಲ್ಲಿ ಶಿಸ್ತುಬದ್ಧ, ಕ್ರಮೇಣ ಸಂಗ್ರಹಣೆಯನ್ನು ಪ್ರೋತ್ಸಾಹಿಸುತ್ತದೆ.
ಚಿನ್ನದ ಬಾಂಡ್‌ಗಳು (SGB ಗಳು) ಮತ್ತೊಂದು ಬಲವಾದ ದೀರ್ಘಾವಧಿಯ ಮಾರ್ಗವಾಗಿದ್ದು, ಕೇವಲ 1 ಗ್ರಾಂನಿಂದ ಪ್ರಾರಂಭವಾಗುವ ಮೌಲ್ಯಗಳಲ್ಲಿ ಲಭ್ಯವಿದೆ. ಅವು ಪ್ರಯೋಜನಗಳ ಪ್ರಬಲ ಸಂಯೋಜನೆಯನ್ನು ನೀಡುತ್ತವೆ: ಸರ್ಕಾರ ಪಾವತಿಸುವ ಸ್ಥಿರ 2.5% ವಾರ್ಷಿಕ ಬಡ್ಡಿ, ಜೊತೆಗೆ ವರ್ಷಗಳಲ್ಲಿ ಚಿನ್ನದ ಬೆಲೆ ಏರಿಕೆಯ ಸಾಧ್ಯತೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಇದರ ಜೊತೆಗೆ, SGB ಗಳು ಶೂನ್ಯ ಶೇಖರಣಾ ವೆಚ್ಚಗಳು ಮತ್ತು ಮುಕ್ತಾಯದ ಸಮಯದಲ್ಲಿ ತೆರಿಗೆ-ಮುಕ್ತ ಬಂಡವಾಳ ಲಾಭಗಳೊಂದಿಗೆ ಬರುತ್ತವೆ. ಇದು ದೀರ್ಘಾವಧಿಯಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡಲು ಅತ್ಯಂತ ಪರಿಣಾಮಕಾರಿ ಮತ್ತು ಪ್ರತಿಫಲದಾಯಕ ಮಾರ್ಗಗಳಲ್ಲಿ ಒಂದಾಗಿದೆ.
ಸೆಬಿ ನಿಯಂತ್ರಿಸುವ ಚಿನ್ನದ ಇಟಿಎಫ್‌ಗಳು ಲಿಕ್ವಿಡಿಟಿ, ಪಾರದರ್ಶಕತೆ ಮತ್ತು ವ್ಯಾಪಾರವನ್ನು ಸುಲಭಗೊಳಿಸುತ್ತದೆ. ಈ ಇಟಿಎಫ್‌ಗಳಿಂದ ಭೌತಿಕ ಚಿನ್ನವನ್ನೂ ಖರೀದಿಸಬಹುದಾಗಿದೆ. ಮತ್ತು ಷೇರುಗಳಂತೆಯೇ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ETF ಅನ್ನು ಅವಲಂಬಿಸಿ, ಒಂದು ಘಟಕವು 0.01 ಗ್ರಾಂ ಚಿನ್ನವನ್ನು ಪ್ರತಿನಿಧಿಸಬಹುದು, ಇದು ಸಣ್ಣ ಹೂಡಿಕೆದಾರರಿಗೆ ಕೈಗೆಟುಕುವಂತೆ ಮಾಡುತ್ತದೆ.
ಒಂದು ದಶಕದ ಹಿಂದೆ, ಭಾರತ SIP ಗಳ ಮೂಲಕ ಜನರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ವಿಧಾನವನ್ನು ಪರಿವರ್ತಿಸಿತು. ಇಂದು, ಚಿನ್ನವು ಇದೇ ರೀತಿಯ ಬದಲಾವಣೆಯ ಮೂಲಕ ಸಾಗುತ್ತಿದೆ. ಹೆಚ್ಚು ಹೆಚ್ಚು ಕುಟುಂಬಗಳು ಈಗ ಚಿನ್ನವನ್ನು ಮೊದಲು ಆರ್ಥಿಕ ಆಸ್ತಿಯಾಗಿ ನೋಡುತ್ತವೆ, ಕ್ರಮೇಣ ಅದನ್ನು ಸಂಗ್ರಹಿಸಲು ಮತ್ತು ಮದುವೆಗಳು ಅಥವಾ ಪ್ರಮುಖ ಜೀವನದ ಘಟನೆಗಳ ಸಮಯದಲ್ಲಿ ಮಾತ್ರ ಅದನ್ನು ಆಭರಣವಾಗಿ ಪರಿವರ್ತಿಸಲು ಆಯ್ಕೆ ಮಾಡಿಕೊಳ್ಳುತ್ತವೆ. ಇದು ಆರ್ಥಿಕ ಹೊರೆಯನ್ನು ಹರಡಲು ಸಹಾಯ ಮಾಡುತ್ತದೆ ಮತ್ತು ಭಾವನಾತ್ಮಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಹಾಗಾದರೆ, ಚಿನ್ನವು ನಿಜವಾಗಿಯೂ ಸಾಮಾನ್ಯ ಮನೆಯವರಿಗೆ ತಲುಪಲು ಸಾಧ್ಯವಿಲ್ಲವೇ? ಬೆಲೆಗಳು ಹೆಚ್ಚಾಗಿರಬಹುದು, ಚಿನ್ನವನ್ನು ಹೊಂದುವುದು ಅಸಾಧ್ಯವೆಂದು ಭಾವಿಸಬೇಕಾಗಿಲ್ಲ. ಶಿಸ್ತುಬದ್ಧ ಸಂಗ್ರಹಣೆ ಮತ್ತು ಹಣಕಾಸು-ಚಿನ್ನದ ಉತ್ಪನ್ನಗಳ ಹೆಚ್ಚುತ್ತಿರುವ ಲಭ್ಯತೆಯೊಂದಿಗೆ, ಭಾರತೀಯ ಕುಟುಂಬಗಳು ತಮ್ಮ ಚಿನ್ನದ ಉಳಿತಾಯವನ್ನು ಸುಲಭವಾಗಿ ನಿರ್ಮಿಸುವುದನ್ನು ಮುಂದುವರಿಸಬಹುದು. 5,850 ರೂ.ಗೆ sovereign ನ್ನು ಖರೀದಿಸುವ ದಿನಗಳು ಕಳೆದಿರಬಹುದು, ಆದರೆ ಚಿನ್ನವನ್ನು ಹೊಂದುವ ಅವಕಾಶವು ತುಂಬಾ ಜೀವಂತವಾಗಿದೆ, ಇದು ಕೇವಲ ಹೆಚ್ಚು ರಚನಾತ್ಮಕ, ಆಧುನಿಕ ಮತ್ತು ಆರ್ಥಿಕವಾಗಿ ಬುದ್ಧಿವಂತ ವಿಧಾನವನ್ನು ಬಯಸುತ್ತದೆ.
(ಪೊನ್ಮುಡಿ ಆರ್: ಸೆಬಿ ನೋಂದಾಯಿತ ಆನ್‌ಲೈನ್ ವ್ಯಾಪಾರ ಮತ್ತು ಸಂಪತ್ತು ತಂತ್ರಜ್ಞಾನ ಸಂಸ್ಥೆಯಾದ ಎನ್‌ರಿಚ್ ಮನಿಯಲ್ಲಿ ಸಿಇಒ ಆಗಿದ್ದಾರೆ. ಅಭಿಪ್ರಾಯಗಳು ವೈಯಕ್ತಿಕ)
Advertisement