
ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ ನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸ್ವಾಗತಿಸಿದೆ. ಅತ್ಯುತ್ತಮ ಬಜೆಟ್ ಇದಾಗಿದ್ದು, ಆದಾಯದ ಮೂಲದಲ್ಲಿ ತೆರಿಗೆ ಸಂಗ್ರಹವನ್ನು ತೆಗೆದುಹಾಕುವ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ ಜಿ ಬಾಲಕೃಷ್ಣ ಹೇಳಿದ್ದಾರೆ.
"ಬಜೆಟ್ ತುಂಬಾ ಚೆನ್ನಾಗಿದೆ. ಆದಾಯದ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಮತ್ತು ತೆರಿಗೆ ಸಂಗ್ರಹ (ಟಿಸಿಎಸ್) ದಂತಹ ಕೆಲವು ನಿರ್ದಿಷ್ಟ ಬೇಡಿಕೆಗಳನ್ನು ಸಲ್ಲಿಸಿದ್ದೇವು. ಸರ್ಕಾರ ಅದನ್ನು ಪರಿಗಣಿಸಿದೆ ಎಂದು ಬಾಲಕೃಷ್ಣ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬಜೆಟ್ ನಲ್ಲಿ ವಾರ್ಷಿಕ 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗದವರಿಗೆ ಅನುಕೂಲಕರವಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಮತ್ತು ಉತ್ಪಾದನಾ ವಲಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಮತ್ತು ಹೂಡಿಕೆಯನ್ನು ಕೇಂದ್ರ ಬಜೆಟ್ ಮರು ವ್ಯಾಖ್ಯಾನಿಸಿದೆ. ವಿವಿಧ ಕೈಗಾರಿಕೆಗಳು ಆಮದು ಮಾಡಿಕೊಳ್ಳುವ ಕೆಲವು ವಸ್ತುಗಳು ಮತ್ತು ಕೆಲವು ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಬಾಲಕೃಷ್ಣ ಹೇಳಿದ್ದಾರೆ.
ಉತ್ಪಾದನಾ ವಲಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಇದು ಉತ್ತಮ ಕೊಡುಗೆ ನೀಡಿದೆ. ಸಾಲ ಮತ್ತು ಉಪಕರಣಗಳಿಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಕೃಷಿಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ಎಫ್‌ಕೆಸಿಸಿಐ ಮುಖ್ಯಸ್ಥರು ಹೇಳಿದರು.
Advertisement