Union Budget 2025: ಮಧ್ಯಮ ವರ್ಗಕ್ಕೆ ಬಂಪರ್; ಆದಾಯ ತೆರಿಗೆ ವಿನಾಯಿತಿ ಮಿತಿ 12 ಲಕ್ಷ ರೂ ಗೆ ಏರಿಕೆ
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಾವು ಮಂಡಿಸುತ್ತಿರುವ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿಸಿದ್ದು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೇರಿಕೆ ಮಾಡಿದ್ದಾರೆ.
ಈ ಬಗ್ಗೆ ಸಂಸತ್ ಭವನದಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಂದರೆ 12 ಲಕ್ಷ ರೂಪಾಯಿಗಳವರೆಗಿನ ಆದಾಯದ ಮೇಲೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ 12 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ. ಆದರೆ 4 ಲಕ್ಷದಿಂದ 8 ಲಕ್ಷದವರೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದ್ದು, 8 ಲಕ್ಷದಿಂದ 11 ಲಕ್ಷದವರೆಗೆ ಶೇ.10ರಷ್ಟು ತೆರಿಗೆ ವಿಧಿಸಲಾಗಿದೆ. 12 ಲಕ್ಷದಿಂದ 15 ಲಕ್ಷದವರೆಗೆ ಶೇ.15ರಷ್ಟು ತೆರಿಗೆ ಮತ್ತು 15 ಲಕ್ಷದಿಂದ 20 ಲಕ್ಷದವರೆಗೆ ಶೇ.20ರಷ್ಟು ತೆರಿಗೆ 20 ಲಕ್ಷದಿಂದ 24 ಲಕ್ಷದರೆಗೆ ಶೇ.25ರಷ್ಟು ತೆರಿಗೆ 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.

ಮಧ್ಯಮ ವರ್ಗದ ಮೇಲೆ ಕೇಂದ್ರೀಕರಿಸಲು ವೈಯಕ್ತಿಕ ಆದಾಯ ತೆರಿಗೆ ಸುಧಾರಣೆಗಳನ್ನು ತರಲಾಗಿದೆ. ಹೊಸ ತೆರಿಗೆ ಪದ್ಧತಿ ಅನ್ವಯ 4 ಲಕ್ಷ ರೂ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಹಿರಿಯ ನಾಗರಿಕರಿಗೆ ತೆರಿಗೆ ಕಡಿತದ ಮಿತಿಯನ್ನು 1 ಲಕ್ಷ ರೂ.ಗೆ ದ್ವಿಗುಣಗೊಳಿಸಲಾಗಿದೆ. ಅಂತೆಯೇ ಬಾಡಿಗೆ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿಯನ್ನು 2.4 ಲಕ್ಷ ರೂ.ಗಳಿಂದ 6 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.