
ನವದೆಹಲಿ: ಐಟಿ ಉದ್ಯೋಗಿಗಳ ಕಲ್ಯಾಣ ಸಂಘ ಕಳವಳ ವ್ಯಕ್ತಪಡಿಸಿರುವುದನ್ನು ಅನುಸರಿಸಿ, ಇನ್ಫೋಸಿಸ್ ಮೈಸೂರಿನ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಸಾಮೂಹಿಕ ವಜಾಗೊಳಿಸುವಿಕೆ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ರಾಜ್ಯ ಕಾರ್ಮಿಕ ಇಲಾಖೆಗೆ ಈ ಸಮಸ್ಯೆ ಪರಿಹರಿಸಲು "ತುರ್ತು ಮತ್ತು ಅಗತ್ಯ ಕ್ರಮಗಳನ್ನು" ತೆಗೆದುಕೊಳ್ಳುವಂತೆ ಸೂಚಿಸಿದೆ. ಐಟಿ ನೌಕರರ ಕಲ್ಯಾಣ ಸಂಘವಾದ ಎನ್‌ಐಟಿಇಎಸ್ ದೂರಿನ ಮೇರೆಗೆ ಈ ಸೂಚನೆಯನ್ನು ನೀಡಿದೆ.
ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಸಾಮೂಹಿಕ ವಜಾ ವಿಚಾರದಲ್ಲಿ ಕರ್ನಾಟಕ ಮಧ್ಯಪ್ರವೇಶಿಸಿ ವಿವಾದವನ್ನು ಪರಿಹರಿಸಬೇಕು ನಿರ್ದೇಶನ ನೀಡಿದೆ. ಅಲ್ಲದೆ ದೂರುದಾರರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.
ಕಳೆದ ಶುಕ್ರವಾರ ತರಬೇತಿ ಪಡೆದ ಸುಮಾರು 400 ನೌಕರರನ್ನು ಇನ್ಫೋಸಿಸ್ ವಜಾಗೊಳಿಸಿದೆ. ಈ ವಜಾಗೊಳಿಸುವಿಕೆಯನ್ನು 'ಅಕ್ರಮ, ಅನೈತಿಕ' ಎಂದು ಜರೆದಿರುವ ಎನ್‌ಐಟಿಇಎಸ್, ಇದು 'ಕಾರ್ಮಿಕ ಕಾನೂನುಗಳ ಉಲ್ಲಂಘನೆ' ಎಂದು ಕಿಡಿಕಾರಿದೆ.
Advertisement