ಇನ್ಫೋಸಿಸ್‌ನಲ್ಲಿ ಸಾಮೂಹಿಕ ವಜಾ: ರಾತ್ರೋರಾತ್ರಿ ಟ್ರೇನಿಗಳನ್ನು ಹೊರ ಹಾಕಿದ ಐಟಿ ಕಂಪನಿ ವಿರುದ್ಧ ಆಕ್ರೋಶ

ಕಂಪನಿಯು ಟ್ರೇನಿಗಳನ್ನು ವಜಾಗೊಳಿಸಿದ ದಿನವೇ ಅವರನ್ನು ಬಲವಂತವಾಗಿ ಕ್ಯಾಂಪಸ್ ನಿಂದ ಹೊರಹಾಕಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ.
ಟ್ರೇನಿಗಳು
ಟ್ರೇನಿಗಳು
Updated on

ಮೈಸೂರು: ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಎಂದು ಮೈಸೂರಿನ ಕ್ಯಾಂಪಸ್‌ನಲ್ಲಿ ಸುಮಾರು 400 ಟ್ರೇನಿಗಳನ್ನು ಏಕಾಏಕಿ ವಜಾಗೊಳಿಸಿ, ರಾತ್ರೋರಾತ್ರಿ ಹೊರಹಾಕಿದ ಐಟಿ ದೈತ್ಯ ಇನ್ಫೋಸಿಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಂಪನಿಯು ಟ್ರೇನಿಗಳನ್ನು ವಜಾಗೊಳಿಸಿದ ದಿನವೇ ಅವರನ್ನು ಬಲವಂತವಾಗಿ ಕ್ಯಾಂಪಸ್ ನಿಂದ ಹೊರಹಾಕಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ. ಇವತ್ತು ಒಂದು ರಾತ್ರಿಯ ಉಳಿದುಕೊಳ್ಳಲು ಅವಕಾಶ ನೀಡಿ ಎಂಬ ಟ್ರೇನಿಗಳ ಮನವಿಯನ್ನು ಕಂಪನಿ ನಿರಾಕರಿಸಿದೆ ಎಂದು ಫೆಬ್ರವರಿ 7 ರಂದು ವಜಾಗೊಂಡ ಟ್ರೇನಿಗಳ ಸಂಕಷ್ಟವನ್ನು ಮನಿ ಕಂಟ್ರೋಲ್ ವರದಿ ವಿವರಿಸಿದೆ.

ವಜಾಗೊಳಿಸಿದ ಟ್ರೇನಿಗಳಲ್ಲಿ ಒಬ್ಬರಾದ ಮಧ್ಯಪ್ರದೇಶದ ಮಹಿಳೆಯೊಬ್ಬರು "ದಯವಿಟ್ಟು ನನಗೆ ಒಂದು ರಾತ್ರಿ ಉಳಿಯಲು ಅವಕಾಶ ನೀಡಿ, ನಾನು ನಾಳೆ ಹೊರಡುತ್ತೇನೆ. ನಾನು ಈಗ ಎಲ್ಲಿಗೆ ಹೋಗಬೇಕು?" ಎಂದು ಕಣ್ಣೀರು ಹಾಕಿದರೂ ಅಧಿಕಾರಿಗಳು ಕೇಳಲಿಲ್ಲ ಎಂದು ವರದಿ ತಿಳಿಸಿದೆ.

"ನಮಗೆ ಗೊತ್ತಿಲ್ಲ. ನೀವು ಇನ್ನು ಮುಂದೆ ಕಂಪನಿಯ ಭಾಗವಲ್ಲ. ಸಂಜೆ 6 ಗಂಟೆಯೊಳಗೆ ಕ್ಯಾಂಪಸ್ ಖಾಲಿ ಮಾಡಬೇಕು" ಎಂದು ಅಧಿಕಾರಿ ಹೇಳಿದ್ದಾರೆ.

ಮೌಲ್ಯಮಾಪನ ಪರೀಕ್ಷೆಗಳಲ್ಲಿ ಮೂರು ಬಾರಿ ಅನುತ್ತೀರ್ಣರಾದ ನಂತರ ಟ್ರೇನಿಗಳ ಮೇಲೆ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮನಿ ಕಂಟ್ರೋಲ್‌ ವರದಿ ಮಾಡಿದೆ.

ಟ್ರೇನಿಗಳು
Infosys ಮೈಸೂರು ಕ್ಯಾಂಪಸ್ ನ 400 ಟ್ರೈನೀ ಉದ್ಯೋಗಿಗಳ ವಜಾ; ನೇಮಕಾತಿ ಪ್ರಕ್ರಿಯೆ ಕಠಿಣ

ಮನಿ ಕಂಟ್ರೋಲ್ ಪ್ರಕಾರ, ಸುಮಾರು 50 ಮಂದಿಯ ಬ್ಯಾಚ್‌ಗಳಲ್ಲಿ ತರಬೇತಿ ಪಡೆದವರನ್ನು ಕರೆಯಲಾಗುತ್ತಿದ್ದು, ಪರಸ್ಪರ ಬೇರ್ಪಡಿಕೆ ಪತ್ರಗಳಿಗೆ(ಮ್ಯೂಚುವಲ್‌ ಸಪರೇಷನ್‌ ಲೆಟರ್‌) ಸಹಿ ಹಾಕುವಂತೆ ಮಾಡಲಾಗುತ್ತಿದೆ. ಕಂಪನಿಯು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಯ ಮೂಲಕ ಬೆದರಿಕೆ ಹಾಕಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್‌, “ಸಂಸ್ಥೆಯಲ್ಲಿ ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ನಾವು ಹೊಂದಿದ್ದೇವೆ. ನಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ಪ್ರಾಥಮಿಕ ತರಬೇತಿ ಪಡೆದ ನಂತರ ಎಲ್ಲಾ ಹೊಸಬರು ಆಂತರಿಕ ಮೌಲ್ಯಮಾಪನಗಳಲ್ಲಿ ಉತ್ತೀರ್ಣರಾಗಬೇಕು. ಎಲ್ಲಾ ಹೊಸಬರಿಗೆ ಇದರಲ್ಲಿ ಉತ್ತೀರ್ಣರಾಗಲು ಮೂರು ಅವಕಾಶಗಳನ್ನು ನೀಡಲಾಗುತ್ತದೆ. ಇದರಲ್ಲಿ ವಿಫಲವಾದಲ್ಲಿ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಅವರ ಜೊತೆಗಿನ ಒಪ್ಪಂದದಲ್ಲಿಯೂ ಇದನ್ನು ಉಲ್ಲೇಖಿಸಲಾಗಿರುತ್ತದೆ. ಈ ಪ್ರಕ್ರಿಯೆ ಎರಡು ದಶಕಗಳಿಂದಲೂ ಚಾಲ್ತಿಯಲ್ಲಿದೆ. ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರತಿಭೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಹೊಂದಿದ್ದೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com