
ನವದೆಹಲಿ: ಜಾಗತಿಕ ಉತ್ಪನ್ನಗಳ ತದ್ರೂಪ ಸೃಷ್ಟಿಸಿ ಅಗ್ಗದ ದರಲ್ಲಿ ಮಾರುವ ಚೀನಾ AI ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಚಾಟ್ ಜಿಪಿಟಿ ತದ್ರೂಪ DeepSeek ನ್ನು ಪರಿಚಯಿಸಿದೆ.
ಚೀನಿ AI ಟೂಲ್ DeepSeek ಸ್ಟಾರ್ಟ್ ಅಪ್ ನಿಂದಾಗಿ ಜಾಗತಿಕ AI, ಟೆಕ್ ಕಂಪನಿಗಳು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಕುಸಿತ ದಾಖಲಿಸಿವೆ.
ವಾಲ್ ಸ್ಟ್ರೀಟ್ ನಲ್ಲಿ ಕಳೆದ ರಾತ್ರಿ ಟ್ರೇಡಿಂಗ್ ಸೆಷನ್ ನಲ್ಲಿ ಎಐ ಕಂಪನಿಗಳಲ್ಲಿ ತಳಮಳ ಸೃಷ್ಟಿಯಾಗಿದ್ದು, ಪ್ರಮುಖ AI ಚಿಪ್‌ಮೇಕರ್ NVIDIA ತನ್ನ ಮಾರುಕಟ್ಟೆ ಮೌಲ್ಯದಲ್ಲಿ ಕುಸಿತ ಕಂಡರೆ, ಮೈಕ್ರೋಸಾಫ್ಟ್, ಆಲ್ಫಾಬೆಟ್ ಮತ್ತು ಡೆಲ್ ಟೆಕ್ನಾಲಜೀಸ್‌ನಂತಹ ಟೆಕ್ ದೈತ್ಯ ಸಂಸ್ಥೆಗಳ ಷೇರುಗಳು ಸಹ ತೀವ್ರ ಕುಸಿತವನ್ನು ಎದುರಿಸಿವೆ.
ಮಾರುಕಟ್ಟೆ ಕುಸಿತ ವಾಲ್ ಸ್ಟ್ರೀಟ್‌ಗೆ ಮಾತ್ರ ಸೀಮಿತವಾಗಿರದೇ; ಪ್ರಪಂಚದಾದ್ಯಂತದ AI ಷೇರುಗಳು DeepSeek ಪರಿಣಾಮವನ್ನು ಅನುಭವಿಸಿವೆ. ಡೀಪ್‌ಸೀಕ್ ತನ್ನ ಅತ್ಯಂತ ಕಡಿಮೆ ಬೆಲೆಯ AI ಚಾಟ್‌ಬಾಟ್‌ನೊಂದಿಗೆ ಜಾಗತಿಕ ತಂತ್ರಜ್ಞಾನದಲ್ಲಿ ಬಹುದೊಡ್ಡ ಬದಲಾವಣೆಯ ಸುಳಿವು ನೀಡಿದೆ. ಡೀಪ್ ಸೀಕ್ ಪರಿಚಯವಾಗಿರುವುದರಿಂದ ಅಮೆರಿಕದ ಉದ್ಯಮ-ಪ್ರಮುಖ AI ಮಾದರಿಗಳಿಗೆ ಗಂಭೀರ ಸವಾಲು ಎದುರಾಗಿದೆ.
ರಾತ್ರಿಯ ವಹಿವಾಟಿನ ಅವಧಿಯಲ್ಲಿ ಚೀನಾದ ಸ್ಟಾರ್ಟ್‌ಅಪ್‌ನ ಪ್ರಭಾವವು ವಾಲ್ ಸ್ಟ್ರೀಟ್‌ನ ಮೇಲೆ ತೀವ್ರ ಪರಿಣಾಮ ಬೀರಿದ್ದು, ನಾಸ್ಡಾಕ್ ಕಾಂಪೋಸಿಟ್ 3.07% ರಷ್ಟು ಕುಸಿದರೆ, ಎಸ್ & ಪಿ 500 ಸುಮಾರು 1.5% ರಷ್ಟು ಕುಸಿದಿದೆ.
ಟೆಕ್ ದೈತ್ಯ ಕಂಪನಿಗಳು ಕುಸಿತಕ್ಕೆ ಕಾರಣವಾದವು, Nvidia ಷೇರುಗಳು ಸುಮಾರು 17% ಕುಸಿದು $118.58ಕ್ಕೆ ಅಂತ್ಯಗೊಂಡಿತ್ತು. ಇದು ಒಂದೇ ದಿನದಲ್ಲಿ $593 ಬಿಲಿಯನ್ ಮಾರುಕಟ್ಟೆ-ಕ್ಯಾಪ್ ನಷ್ಟವಾಗಿದ್ದು, ಹಿಂದಿನ ಕುಸಿತಕ್ಕಿಂತ ದುಪ್ಪಟ್ಟಾಗಿದೆ.
ಫಿಲಡೆಲ್ಫಿಯಾ ಸೆಮಿಕಂಡಕ್ಟರ್ ಸೂಚ್ಯಂಕ 9.2% ರಷ್ಟು ಕುಸಿದಿದ್ದು, ಚಿಪ್ ತಯಾರಕರು ಭಾರೀ ಮಾರಾಟದ ಒತ್ತಡವನ್ನು ಎದುರಿಸುತ್ತಿದ್ದಾರೆ. ಚೀನಾದ ಡೀಪ್ ಸೀಕ್ ಪ್ರವೇಶದಿಂದಾಗಿ ಅಮೆರಿಕಾ ಒಂದರಲ್ಲಿ ಒಂದು ದಿನದಲ್ಲಿ 1 ಟ್ರಿಲಿಯನ್ ಡಾಲರ್ ಅಂದರೆ 1ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಷೇರು ಮಾರುಕಟ್ಟೆ ದಾಖಲಿಸಿದೆ.
1950 ರ ದಶಕದಲ್ಲಿ ಸೋವಿಯತ್ ಒಕ್ಕೂಟದ ಸ್ಪುಟ್ನಿಕ್ ಉಡಾವಣೆಯು ಬಾಹ್ಯಾಕಾಶ ಸ್ಪರ್ಧೆಯನ್ನು ಆರಂಭಿಸಿದಂತೆಯೇ, ಡೀಪ್‌ಸೀಕ್‌ನ ಪ್ರಗತಿ AI ವಲಯದಲ್ಲಿ ಮತ್ತೊಂದು ಜಾಗತಿಕ ಸ್ಪರ್ಧೆಯನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
Advertisement