
ನವದೆಹಲಿ: ಇತ್ತೀಚಿಗೆ ನಡೆದ ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನ ಪರ ಬೆಂಬಲ ನೀಡಿದ ಟರ್ಕಿಗೆ ಭಾರತ ಒಂದಾದ ನಂತರ ಒಂದರಂತೆ ಬಿಸಿ ಮುಟ್ಟಿಸಿದೆ. ಈಗಾಗಲೇ ಅನೇಕ ವಸ್ತುಗಳ ರಫ್ತು ಹಾಗೂ ಆಮದನ್ನು ನಿಲ್ಲಿಸಲಾಗಿದ್ದು, ಇದೀಗ ಹಣ್ಣು ಮತ್ತು ತರಕಾರಿಗಳ ಏಷ್ಯಾದ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಆಜಾದ್‌ಪುರ ಮಂಡಿಯಲ್ಲಿ ಟರ್ಕಿಯಿಂದ ಸೇಬುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿದೆ.
ಈ ಕುರಿತು ಮಾತನಾಡಿದ ಆಜಾದ್‌ಪುರ ಫ್ರೂಟ್ ಮಂಡಿ ಅಧ್ಯಕ್ಷ ಮೀತಾ ರಾಮ್ ಕೃಪ್ಲಾನಿ, "ನಾವು ಟರ್ಕಿಯಿಂದ ಎಲ್ಲಾ ಹೊಸ ಸೇಬುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ. ಈ ಹಿಂದೆ ಆರ್ಡರ್ ಮಾಡಿದ ಸರಕುಗಳು ಇನ್ನೂ ಬರುತ್ತವೆಯಾದರೂ, ಸೇಬು ಅಥವಾ ಇತರ ಉತ್ಪನ್ನಗಳ ವ್ಯಾಪಾರವು ಮುಂದೆ ನಡೆಯುವುದಿಲ್ಲ. ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದೆ ಯಾವುದೇ ಹೊಸ ಆರ್ಡರ್ ನೀಡಲ್ಲ ಎಂದು ಹೇಳಿದರು.
ಕೃಪ್ಲಾನಿ ಪ್ರಕಾರ, ಆಜಾದ್‌ಪುರ ಮಂಡಿಯು ಟರ್ಕಿಯ ಸೇಬುಗಳಿಗೆ ಉತ್ತಮ ಬೇಡಿಕೆಯಿತ್ತು. 2024 ರಲ್ಲಿ 1.16 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿತ್ತು.
ಆದರೂ ಟರ್ಕಿಯ ಭಾರತ ವಿರೋಧಿ ಬೆಳವಣಿಗೆಗಳು ನಿರಾಶೆಗೆ ಕಾರಣವಾಗಿವೆ. ಹಲವು ವರ್ಷಗಳಿಂದ ಟರ್ಕಿ ವ್ಯಾಪಾರಿಗಳನ್ನು ಬೆಂಬಲಿಸಿದ್ದೇವೆ, ಆದರೆ ಈಗ ಟರ್ಕಿ ಸೇಬು ಆಮದು ನಿಲ್ಲಿಸದೆ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು. ಟರ್ಕಿ ಸರಕುಗಳ ಆಮದು ಮತ್ತು ಮಾರುಕಟ್ಟೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ದೆಹಲಿಯಾದ್ಯಂತ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement