ಗುರುಗ್ರಾಮ್ ನಲ್ಲಿ ದುಬಾರಿ ಬೆಲೆಯ ಫ್ಲಾಟ್ ಖರೀದಿಸಿದ ಶಿಖರ್ ಧವನ್!
ಹರಿಯಾಣ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಗುರು ಗ್ರಾಮ್ ನಲ್ಲಿ ದುಬಾರಿ ಬೆಲೆಯ ಫ್ಲಾಟ್ ವೊಂದನ್ನು ಖರೀದಿಸಿದ್ದಾರೆ.
ಈ ಸಂಬಂಧ ಫೆಬ್ರವರಿ 4, 2025 ರಂದು ಖರೀದಿಸಲಾದ ಫ್ಲಾಟ್ ನ ನೋಂದಣಿ ಒಪ್ಪಂದವನ್ನು (Registered agreement) ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ CRE Matrix ಪರಿಶೀಲಿಸಿದ್ದು, ಶಿಖರ್ ಧವನ್ DLFನ ಸೂಪರ್ ಲಕ್ಸುರಿ ವಸತಿ ಯೋಜನೆಯಡಿ ರೂ. 69 ಕೋಟಿಗೆ ಅಪಾರ್ಟ್ ಮೆಂಟ್ ಖರೀದಿಸಿರುವುದಾಗಿ ತಿಳಿಸಿದೆ.
ಧವನ್ ಅವರು ಗುರುಗ್ರಾಮ್‌ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಡಿಎಲ್‌ಎಫ್‌ನ ಇತ್ತೀಚಿನ ಸೂಪರ್ ಐಷಾರಾಮಿ ಯೋಜನೆ 'ದಿ ಡೇಲಿಯಾಸ್'ನಲ್ಲಿ 6,040 ಚದರ ಅಡಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.
ಈ ಫ್ಲಾಟ್ ಮೌಲ್ಯ ರೂ 65.61 ಕೋಟಿ ಮತ್ತು ಸ್ಟ್ಯಾಂಪ್ ಡ್ಯೂಟಿ ರೂ 3.28 ಕೋಟಿಗಳಾಗಿದ್ದು, ಒಟ್ಟಾರೇ ಸುಮಾರು ರೂ. 69 ಕೋಟಿಗೆ ತಲುಪಿದೆ ಎನ್ನಲಾಗಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದ ಅನುಭವಿ ಆರಂಭಿಕ ಆಟಗಾರ ಧವನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
2010 ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ODI ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಶಿಖರ್ ಧವನ್ ಗೆ 2022 ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯ ಕೊನೆಯದಾಗಿತ್ತು.