
2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಟೀಂ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ 'ನಿಗೂಢ ಮಹಿಳೆ'ಯೊಂದಿಗೆ ಕಾಣಿಸಿಕೊಂಡಿದ್ದ ಫೋಟೊ ವೈರಲ್ ಆಗಿತ್ತು. ಆ ಮಹಿಳೆ ಯಾರೆಂದು ಇಂಟರ್ನೆಟ್ ಬಳಕೆದಾರರು ತಲೆ ಕೆಡಿಸಿಕೊಂಡಿದ್ದರು. ಆಕೆ ಐರ್ಲೆಂಡ್‌ನ ಸೋಫಿ ಶೈನ್ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈಗ, ಶಿಖರ್ ಧವನ್ ಅವರೇ ತಾವು ರಿಲೇಷನ್‌ಶಿಪ್‌ನಲ್ಲಿರುವುದಾಗಿ ಅಧಿಕೃತವಾಗಿ ದೃಢಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಧವನ್ ಅವರನ್ನು ಆ್ಯಂಕರ್ ಒಬ್ಬರು ಅವರ ಗೆಳತಿ ಮತ್ತು ಅವರ ಹೆಸರು ಏನೆಂದು ಕೇಳಿದ್ದಾರೆ. ಆರಂಭದಲ್ಲಿ ಧವನ್ ಈ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ, ಅಂತಿಮವಾಗಿ, 'ನಾನು ಯಾವುದೇ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ನನ್ನ ಗರ್ಲ್‌ಫ್ರೆಂಡ್ ಅತ್ಯಂತ ಸುಂದರವಾಗಿದ್ದಾರೆ' ಎಂದಿದ್ದಾರೆ. ನಂತರ ಕ್ಯಾಮೆರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಧವನ್ ಜೊತೆಗೆ ಕಾಣಿಸಿಕೊಂಡಿದ್ದ ಮಹಿಳೆಯಂತೆಯೇ ಕಾಣುವವರೊಬ್ಬರ ಮೇಲೆ ದೃಷ್ಟಿ ನೆಟ್ಟಿವೆ.
ಭಾರತದ ಮಾಜಿ ಆರಂಭಿಕ ಆಟಗಾರ 39 ವರ್ಷದ ಶಿಖರ್ ಧವನ್ ಅವರು 2023ರ ಅಕ್ಟೋಬರ್‌ನಲ್ಲಿ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದಿದ್ದರು. ಆದರೆ, ಅವರ ಮಗ ಜೊರಾವರ್ ಅನ್ನು ನೋಡಿಕೊಳ್ಳುವ ಅಧಿಕಾರ ಆಯೇಷಾ ಅವರಿಗೆ ಸಿಕ್ಕಿತ್ತು. ಭೇಟಿ ನೀಡುವ ಮತ್ತು ವಿಡಿಯೋ ಕರೆಗಳ ಮೂಲಕ ಸಂಪರ್ಕ ಸಾಧಿಸಲು ಅವಕಾಶ ನೀಡಲಾಗಿದ್ದರೂ, ತಮ್ಮ 11 ವರ್ಷದ ಮಗ ಜೊರಾವರ್ ಜೊತೆ ಇರಲು ಅವಕಾಶ ಸಿಗದ ಕಾರಣ ಆಧ್ಯಾತ್ಮಿಕ ರೀತಿಯಲ್ಲಿ ಆತನೊಂದಿಗೆ ಸಂಪರ್ಕದಲ್ಲಿರಲು ಹೇಗೆ ಪ್ರಯತ್ನಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು.
'ನನ್ನ ಮಗನನ್ನು ನೋಡಿ ಎರಡು ವರ್ಷಗಳಾಗಿವೆ. ಕೊನೆಯದಾಗಿ ಅವನೊಂದಿಗೆ ಮಾತನಾಡಿ ಒಂದು ವರ್ಷವಾಗಿದೆ. ಇದು ಕಷ್ಟಕರವಾಗಿತ್ತು, ಆದರೆ ನೀವು ಅಂತಹ ಪರಿಸ್ಥಿತಿಯೊಂದಿಗೆ ಬದುಕಲು ಕಲಿಯಿರಿ. ನಾನು ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ ಮತ್ತು ಅವನೊಂದಿಗೆ ಆಧ್ಯಾತ್ಮಿಕವಾಗಿ ಮಾತನಾಡುತ್ತೇನೆ' ಎಂದು ಧವನ್ ANI ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ ಹೇಳಿದರು.
'ನಾನು ಅವನೊಂದಿಗೆ ಪ್ರತಿದಿನ ಮಾತನಾಡುತ್ತಿದ್ದೇನೆ, ಅವನನ್ನು ಅಪ್ಪಿಕೊಳ್ಳುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ನಾನು ನನ್ನ ಶಕ್ತಿಯನ್ನು ಆಧ್ಯಾತ್ಮಿಕದಲ್ಲಿ ತೊಡಗಿಸುತ್ತಿದ್ದೇನೆ. ನನ್ನ ಮಗನನ್ನು ಮರಳಿ ತರಲು ಇದು ಏಕೈಕ ಮಾರ್ಗವಾಗಿದೆ. ನಾನು ಅವನೊಂದಿಗಿದ್ದೇನೆ, ಅವನೊಂದಿಗೆ ಮಾತನಾಡುತ್ತಿದ್ದೇನೆ, ಅವನೊಂದಿಗೆ ಆಟವಾಡುತ್ತಿದ್ದೇನೆ ಎಂದು ನನಗೆ ಈಗಾಗಲೇ ಅನಿಸುತ್ತಿದೆ. ನಾನು ಧ್ಯಾನಕ್ಕೆ ಕುಳಿತಾಗ, ಆ ವಿಷಯಗಳನ್ನು ನಾನು ದೃಶ್ಯೀಕರಿಸುತ್ತೇನೆ. ನನ್ನ ಮಗನಿಗೆ ಈಗ 11 ವರ್ಷ. ಆದರೆ, ನಾನು ಅವನನ್ನು ಎರಡೂವರೆ ವರ್ಷಗಳು ಮಾತ್ರ ನೋಡಿದ್ದೇನೆ' ಎಂದರು.
Advertisement