
ನವದೆಹಲಿ: 2025ನೇ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ(EPF)ಯ ಮೇಲಿನ ಬಡ್ಡಿದರವನ್ನು ಶೇ. 8.25 ಮುಂದುವರೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಇಪಿಎಫ್‌ಒನ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಅನುಕೂಲವಾಗಲಿದೆ.
ಫೆಬ್ರವರಿ 28 ರಂದು ಇಪಿಎಫ್‌ಒ, 2024-25ನೇ ಹಣಕಾಸು ವರ್ಷಕ್ಕೆ ನೌಕರರ ಭವಿಷ್ಯ ನಿಧಿ(ಇಪಿಎಫ್) ಠೇವಣಿಗಳ ಮೇಲಿನ ಶೇ. 8.25 ರ ಬಡ್ಡಿದರವನ್ನು ಹಿಂದಿನ ಹಣಕಾಸು ವರ್ಷದಲ್ಲಿ ಒದಗಿಸಲಾದ ದರಕ್ಕೆ ಸಮನಾಗಿ ಉಳಿಸಿಕೊಳ್ಳಲು ನಿರ್ಧರಿಸಿತ್ತು ಮತ್ತು 2024-25ರ ಅನುಮೋದಿತ ಬಡ್ಡಿದರವನ್ನು ಹಣಕಾಸು ಸಚಿವಾಲಯದ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು.
"2024-25ನೇ ಹಣಕಾಸು ವರ್ಷಕ್ಕೆ ಇಪಿಎಫ್‌ಒ ಮೇಲಿನ ಶೇ. 8.25 ರ ಬಡ್ಡಿದರ ಮುಂದುವರಿಸಲು ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದೆ ಮತ್ತು ಕಾರ್ಮಿಕ ಸಚಿವಾಲಯವು ಗುರುವಾರ ಇಪಿಎಫ್‌ಒಗೆ ಈ ಕುರಿತು ಮಾಹಿತಿ ನೀಡಿದೆ" ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈಗ 2025ನೇ ಹಣಕಾಸು ವರ್ಷಕ್ಕೆ ಅನುಮೋದಿಸಲಾದ ಬಡ್ಡಿ ದರದ ಪ್ರಕಾರ ಬಡ್ಡಿ ಮೊತ್ತವನ್ನು EPFOನ ಏಳು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 28 ರಂದು ದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ EPFOನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ(ಸಿಬಿಟಿ)ಯ 237ನೇ ಸಭೆಯಲ್ಲಿ ಈ ಬಡ್ಡಿದರ ನಿಗದಿಪಡಿಸಲಾಗಿತ್ತು.
ಅನೇಕ ಸ್ಥಿರ-ಆದಾಯದ ಸಾಧನಗಳಿಗೆ ಹೋಲಿಸಿದರೆ, EPF ತುಲನಾತ್ಮಕವಾಗಿ ಹೆಚ್ಚಿನ ಮತ್ತು ಸ್ಥಿರವಾದ ಆದಾಯವನ್ನು ನೀಡುತ್ತದೆ, ನಿವೃತ್ತಿಯ ನಂತರದ ಉಳಿತಾಯದ ಮೇಲೆ ಸ್ಥಿರವಾದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.
2022-23 ರಲ್ಲಿ ಶೇ. 8.15 ರಿಂದ ಬಡ್ಡಿದರ ನಿಗದಿಪಡಿಸಿದ್ದ EPFO, 2023-24ನೇ ಸಾಲಿನಲ್ಲಿ ಶೇ. 8.25 ಕ್ಕೆ ಹೆಚ್ಚಿಸಿತ್ತು. ಸದ್ಯ ಇದನ್ನು ಪ್ರಸಕ್ತ ಹಣಕಾಸು ವರ್ಷಕ್ಕೂ ಮುಂದುವರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
Advertisement