

ನವದೆಹಲಿ: ಜಾರಿ ನಿರ್ದೇಶನಾಲಯ(ED) ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್‌ಗೆ ಸೇರಿದ 3,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಅವರ ಪಾಲಿ ಹಿಲ್ ನಿವಾಸ ಮತ್ತು ಪ್ರಮುಖ ಭಾರತೀಯ ನಗರಗಳಲ್ಲಿರುವ ಹಲವಾರು ಆಸ್ತಿಗಳು ಸೇರಿವೆ.
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್‌ಗೆ ಸಂಬಂಧಿಸಿದ ಸುಮಾರು 3,084 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(PMLA) ಸೆಕ್ಷನ್ 5(1) ರ ಅಡಿಯಲ್ಲಿ ಶುಕ್ರವಾರ ಮುಟ್ಟುಗೋಲು ಆದೇಶ ಹೊರಡಿಸಲಾಗಿದ್ದು, ನಂತರ ದೆಹಲಿ, ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ, ಕಾಂಚೀಪುರಂ ಮತ್ತು ಪೂರ್ವ ಗೋದಾವರಿಯಲ್ಲಿನ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಈ ಪ್ರಕರಣವು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್(RHFL) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್(RCFL)ಗೆ ಸಂಬಂಧಿಸಿದ ಸಾರ್ವಜನಿಕ ಹಣ ಡೈವರ್ಟ್ ಮತ್ತು ಅಕ್ರಮ ವರ್ಗಾವಣೆಗೆ ಸಂಬಂಧಿಸಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (ಆರ್‌ಸಿಎಫ್‌ಎಲ್) ಮೂಲಕ ಸಂಗ್ರಹಿಸಲಾದ ಸಾರ್ವಜನಿಕರ ಹಣವನ್ನು ಬೇರೆಡೆಗೆ ವರ್ಗಾಯಿಸಿ, ಅಕ್ರಮವಾಗಿ ಬಳಸಲಾಗಿದೆ ಎಂಬುದು ಈ ಪ್ರಕರಣದ ಪ್ರಮುಖ ಆರೋಪವಾಗಿದೆ.
2017 ಮತ್ತು 2019ರ ನಡುವೆ, ಯೆಸ್ ಬ್ಯಾಂಕ್ ಆರ್‌ಎಚ್‌ಎಫ್‌ಎಲ್ 2,965 ಕೋಟಿ ರೂ. ಮತ್ತು ಆರ್‌ಸಿಎಫ್‌ಎಲ್‌ನಲ್ಲಿ 2,045 ಕೋಟಿ ರೂ. ಹೂಡಿಕೆ ಮಾಡಿತ್ತು. ಆದರೆ, ಡಿಸೆಂಬರ್ 2019ರ ವೇಳೆಗೆ ಈ ಹೂಡಿಕೆಗಳು ಅನುತ್ಪಾದಕ ಆಸ್ತಿಗಳಾಗಿ (ಎನ್‌ಪಿಎ) ಮಾರ್ಪಟ್ಟವು.
ಸೆಬಿ ನಿಯಮಗಳ ಪ್ರಕಾರ, ರಿಲಯನ್ಸ್ ನಿಪ್ಪಾನ್ ಮ್ಯೂಚುವಲ್ ಫಂಡ್, ಅನಿಲ್ ಅಂಬಾನಿ ಸಮೂಹದ ಹಣಕಾಸು ಕಂಪನಿಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಅವಕಾಶವಿರಲಿಲ್ಲ. ಈ ನಿಯಮವನ್ನು ತಪ್ಪಿಸಲು, ಮ್ಯೂಚುವಲ್ ಫಂಡ್ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಯೆಸ್ ಬ್ಯಾಂಕ್ ಹೂಡಿಕೆಗಳ ಮೂಲಕ ಪರೋಕ್ಷವಾಗಿ ಅನಿಲ್ ಅಂಬಾನಿ ಸಮೂಹದ ಕಂಪನಿಗಳಿಗೆ ವರ್ಗಾಯಿಸಲಾಗಿದೆ ಎಂದು ಇ.ಡಿ ತನಿಖೆಯಿಂದ ತಿಳಿದುಬಂದಿದೆ.
Advertisement