
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಹಾಯಕ ಅಶೋಕ್ ಕುಮಾರ್ ಪಾಲ್ ಬಂಧನ ಮಾಡಲಾಗಿದೆ.
ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಸಹಾಯಕ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್‌ನ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಪಾಲ್ ಅವರನ್ನು 17,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಪಾಲ್ ಅವರು 25 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್. ಏಳು ವರ್ಷಗಳಿಗೂ ಹೆಚ್ಚು ಕಾಲ ರಿಲಯನ್ಸ್ ಪವರ್‌ನಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಕಂಪನಿಗಳಿಂದ ಕೋಟ್ಯಂತರ ರೂಪಾಯಿಗಳ ಆರ್ಥಿಕ ಅಕ್ರಮಗಳ ಹಲವಾರು ಆರೋಪಗಳ ಹೊರತಾಗಿ, ಬ್ಯಾಂಕ್ ಸಾಲ ವಂಚನೆ-ಸಂಬಂಧಿತ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ತನಿಖಾ ಸಂಸ್ಥೆ ಈ ವರ್ಷದ ಜುಲೈನಲ್ಲಿ ದಾಳಿಗಳನ್ನು ನಡೆಸಿತ್ತು.
ರಿಲಯನ್ಸ್ ಪವರ್‌ನ ಅಂಗ ಸಂಸ್ಥೆಯಾದ ರಿಲಯನ್ಸ್ ಎನ್‌ಯು ಬಿಇಎಸ್‌ಎಸ್ ಲಿಮಿಟೆಡ್‌ಗಾಗಿ ಭಾರತೀಯ ಸೌರ ಇಂಧನ ನಿಗಮಕ್ಕೆ ₹68.2 ಕೋಟಿ ಮೌಲ್ಯದ ಬ್ಯಾಂಕ್ ಗ್ಯಾರಂಟಿ ನೀಡಿದ್ದು, ಅದು ನಕಲಿ ಎಂಬ ಆರೋಪ ಅಶೋಕ್ ಪಾಲ್ ಮೇಲಿದೆ. ಈ ಕಂಪನಿಯು ಈ ಹಿಂದೆ ಮಹಾರಾಷ್ಟ್ರ ಎನರ್ಜಿ ಜನರೇಷನ್ ಲಿಮಿಟೆಡ್ ಎಂದು ಗುರುತಿಸಿಕೊಂಡಿತ್ತು.
ಆರೋಪಿತ ಕಂಪನಿಯು ವ್ಯವಹಾರ ನಡೆಸುವವರಿಗೆ ನಕಲಿ ಬ್ಯಾಂಕ್ ಗ್ಯಾರಂಟಿ ನೀಡುವ ದಂದೆ ನಡೆಸುತ್ತಿತ್ತು. ಇದನ್ನು ಒಡಿಶಾ ಮೂಲದ ಬಿಸ್ವಾಲ್ ಟ್ರೇಡ್‌ಲಿಂಕ್ ಎಂದು ಜಾರಿ ನಿರ್ದೇಶನಾಲಯ ಗುರುತಿಸಿದೆ. ಕಂಪನಿ ಮತ್ತದರ ಪ್ರವರ್ತಕರ ವಿರುದ್ಧ ಶೋಧ ಕಾರ್ಯವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ಆಗಸ್ಟ್‌ನಲ್ಲಿ ನಡೆಸಿದ್ದರು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್ ಎಂಬುವವರನ್ನು ಬಂಧಿಸಿದ್ದರು.
2024ರಲ್ಲಿ ಈ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಕಲಿ ಬ್ಯಾಂಕ್ ಗ್ಯಾರಂಟಿ ನೀಡಲು ಶೇ 8ರಷ್ಟು ಕಮಿಷನ್ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
Advertisement