
ನವದೆಹಲಿ: ಯಾವುದೇ ಇಪಿಎಫ್ ಹಿಂಪಡೆಯುವಿಕೆ ಸಾಧ್ಯವಿಲ್ಲ ಎಂಬ ನಂಬಿಕೆ, ಗೊಂದಲ ಮತ್ತು ತಪ್ಪು ಮಾಹಿತಿಯನ್ನು ಹೋಗಲಾಡಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಬುಧವಾರ ಸ್ಪಷ್ಟೀಕರಣ ಬಿಡುಗಡೆ ಮಾಡಿದ್ದು, ಹೊಸ ನಿಯಮಗಳು, ಉದ್ಯೋಗವನ್ನು ತೊರೆದ ನಂತರ ತಕ್ಷಣವೇ ಶೇ. 75 ಇಪಿಎಫ್ ಹಿಂಪಡೆಯುವಿಕೆಗೆ ಅವಕಾಶ ನೀಡುತ್ತವೆ ಎಂದು ಹೇಳಿದೆ.
"ವ್ಯಕ್ತಿಯು ಒಂದು ವರ್ಷ ನಿರುದ್ಯೋಗಿಯಾಗಿ ಉಳಿದಿದ್ದರೆ, ಸಂಪೂರ್ಣ ಇಪಿಎಫ್ ಬಾಕಿ ಹಣವನ್ನು ಹಿಂಪಡೆಯಬಹುದು" ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
"ಈ ಹೊಸ ನಿಬಂಧನೆಗಳು ಸೇವೆಯ ನಿರಂತರತೆ, ಆರೋಗ್ಯಕರ ಅಂತಿಮ ಪಿಎಫ್ ಇತ್ಯರ್ಥ ಮೊತ್ತ ಮತ್ತು ಕುಟುಂಬಕ್ಕೆ ಯಾವುದೇ ಆರ್ಥಿಕ ತೊಂದರೆಯಾಗದಂತೆ ಖಚಿತಪಡಿಸುತ್ತದೆ" ಎಂದು ಸಚಿವಾಲಯ ತಿಳಿಸಿದೆ.
ಇಪಿಎಫ್ ಚಂದಾದಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲು ಕೇಂದ್ರ ಟ್ರಸ್ಟಿಗಳ ಮಂಡಳಿ (ಸಿಬಿಟಿ) 13 ಸಂಕೀರ್ಣ ನಿಯಮಗಳನ್ನು ಒಂದೇ ನಿಯಮಕ್ಕೆ ತಂದಿದೆ. ಇದರ ಪ್ರಕಾರ ಅನಾರೋಗ್ಯ, ಶಿಕ್ಷಣ, ಮದುವೆ, ವಸತಿ ಅಗತ್ಯತೆಗಳು ಮತ್ತು ವಿಶೇಷ ಸಂದರ್ಭಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಪಿಎಫ್ ಹಣವನ್ನು ಶೇ. 100 ರಷ್ಟು ಹಿಂಪಡೆಯಲು ಅವಕಾಶವನ್ನು ಒದಗಿಸಲಾಗಿದೆ. ಈಗ ಉದ್ಯೋಗಿಗಳು ತಮ್ಮ ಪಾಲು ಸೇರಿದಂತೆ ಉದ್ಯೋಗದಾತರು ಠೇವಣಿ ಇಟ್ಟಿರುವ ಪಿಎಫ್ ಹಣವನ್ನು ಹಿಂಪಡೆಯಬಹುದು.
ಈ ಹಿಂದೆ ಮದುವೆ ಮತ್ತು ಶಿಕ್ಷಣ ಎರಡಕ್ಕೂ ಪಿಎಫ್ ಖಾತೆಯಿಂದ ಭಾಗಶಃ ಹಿಂಪಡೆಯುವಿಕೆಯನ್ನು ಕೇವಲ 3 ಬಾರಿ ಮಾತ್ರ ಅನುಮತಿಸಲಾಗಿತ್ತು. ಆದರೆ, ಈಗ ಅದನ್ನು ಮತ್ತಷ್ಟು ಸರಳೀಕರಿಸಲಾಗಿದೆ. ಈಗ ಶಿಕ್ಷಣಕ್ಕಾಗಿ 10 ಬಾರಿ ಮತ್ತು ಮದುವೆಗೆ 5 ಬಾರಿ ಭವಿಷ್ಯ ನಿಧಿಯನ್ನು ಹಿಂಪಡೆಯಲು ಅನುಮತಿಸಲಾಗಿದೆ. ಯಾವುದೇ ಉದ್ಯೋಗಿ ಪಿಎಫ್ ಹಿಂಪಡೆಯಲು ಬಯಸಿದರೆ ಅವರು ಕನಿಷ್ಠ 12 ತಿಂಗಳ ಸೇವೆಯನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಲಾಗಿದೆ.
Advertisement